ಪತ್ನಿ‌ ಕೊಲೆ ಮಾಡಿ ಮನೆ ಆವರಣದಲ್ಲೇ ಶವ ಹೂತ ಪತಿ: ತನಿಖೆ ವೇಳೆ ಬಯಲಾಯ್ತು ಹೆಂಡತಿ ನಾಪತ್ತೆ ನಾಟಕ

ವಿಜಯಪುರದ ದೇವರಹಿಪ್ಪರಗಿಯಲ್ಲಿ ಪತಿಯೇ ತನ್ನ ಪತ್ನಿಯನ್ನು ಸಾಲದ ವಿಚಾರಕ್ಕೆ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಶವವನ್ನು ಮನೆ ಆವರಣದಲ್ಲೇ ಹೂತು, ಬಳಿಕ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ಸುಳ್ಳು ದೂರು ನೀಡಿದ್ದ. 24 ದಿನಗಳ ನಂತರ ಪೊಲೀಸರ ತನಿಖೆಯಿಂದ ಈ ಕ್ರೂರ ಕೊಲೆ ಮತ್ತು ನಾಪತ್ತೆ ನಾಟಕದ ಹಿಂದಿನ ಸತ್ಯ ಬಯಲಾಗಿದ್ದು, ಆರೋಪಿ ಪತಿಯನ್ನು ವಶಕ್ಕೆ ಪಡೆಯಲಾಗಿದೆ.

ಪತ್ನಿ‌ ಕೊಲೆ ಮಾಡಿ ಮನೆ ಆವರಣದಲ್ಲೇ ಶವ ಹೂತ ಪತಿ: ತನಿಖೆ ವೇಳೆ ಬಯಲಾಯ್ತು ಹೆಂಡತಿ ನಾಪತ್ತೆ ನಾಟಕ
ಆರೋಪಿ ಮತ್ತು ಮೃತ ಮಹಿಳೆ
Image Credit source: Tv9 Kannada
Edited By:

Updated on: Feb 18, 2026 | 5:41 PM

ವಿಜಯಪುರ, ಫೆಬ್ರವರಿ 18: ಪತ್ನಿಯನ್ನು ತಾನೇ ಕೊಂದು ಶವವವನ್ನು ಮನೆ ಆವರಣದಲ್ಲಿಯೇ ಹೂತುಹಾಕಿ ಆಕೆ ನಾಪತ್ತೆಯಾಗಿದ್ದಾಳೆ ಎಂದು ಕತೆ ಕಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟದಲ್ಲಿ ನಡೆದಿದೆ. ಕೊಲೆ ನಡೆದು ಬರೋಬ್ಬರಿ 24 ದಿನಗಳ ಬಳಿಕ ಆರೋಪಿಯ ಅಸಲೀ ಮುಖ ಅನಾವರಣಗೊಂಡಿದ್ದು, ಸಾಲದ ವಿಚಾರಕ್ಕೆ ಜಗಳ ನಡೆದ ಹಿನ್ನೆಲೆ ಹೆಂಡತಿಯನ್ನ ದುಷ್ಟ ಕೊಂದಿದ್ದ ಎಂಬುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ಸರೋಜಿನಿ (45) ಪತಿಯಿಂದಲೇ ದಾರುಣವಾಗಿ ಹತ್ಯೆಯಾದ ದುರ್ದೈವಿ ಮಹಿಳೆಯಾಗಿದ್ದು, ಆರೋಪಿ ಪ್ರಭು ರತ್ನಾಕರ್​​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತ್ನಿ ಸರೋಜಿನಿ ಹೆಸರಲ್ಲಿ ಆರೋಪಿ ಸಾಲಮಾಡಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕಳೆದ ಜ.24ರಂದೂ ಗಲಾಟೆ ನಡೆದಿತ್ತು. ಈ ವೇಳೆ ಸರೋಜಿನಿ ತಲೆಗೆ ಕಬ್ಬಿಣದ ರಾಡ್​​ನಿಂದ ಹೊಡೆದು ಪ್ರಭು ರತ್ನಾಕರ ಹತ್ಯೆ ಮಾಡಿದ್ದ. ಬಳಿಕ ಶವವನ್ನು ಮನೆ ಆವರಣದಲ್ಲಿಯೇ ಹೂತು ಹಾಕಿದ್ದ ಎಂಬ ವಿಚಾರ ತನಿಖೆ ವೇಳೆ ಗೊರರಬಂದಿದೆ.

ಇದನ್ನೂ ಓದಿ: ನಾನು ಸತ್ತರೆ ನಿನ್ನ ಯಾರು ನೋಡಿಕೊಳ್ಳುತ್ತಾರೆ; ಪತ್ನಿಯನ್ನ ಕೊಂದ ಇಸ್ರೋ ನಿವೃತ್ತ ನೌಕರ

ತಾನೇ ಪತ್ನಿ ಕೊಂದು ನಾಪತ್ತೆ ದೂರು ನೀಡಿದ್ದ ಆರೋಪಿ

ಇನ್ನು ಪತ್ನಿ ಸರೋಜಿನಿಯನ್ನು ತಾನೇ ಕೊಂದಿದ್ದ ಪ್ರಭು ರತ್ನಾಕರ ಆಕೆ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಸವದತ್ತಿಗೆ ಹೋಗುವ ಸಲುವಾಗಿ ದೇವರಹಿಪ್ಪರಗಿ ಪಟ್ಟದ ಕಿರಾಣಿ ಅಂಗಡಿಗೆ ಅಗತ್ಯ ಸಾಮಗ್ರಿ ತರೋದಾಗಿ ಹೇಳಿ ಹೋಗಿದ್ದ ಪತ್ನಿ ಸರೋಜಿನಿ ತಿರುಗಿ ಬಂದಿಲ್ಲ. ಹೀಗಾಗಿ ಆಕೆಗಾಗಿ ತಾನು ಮತ್ತು ಮಗ ಪಟ್ಟದ ತುಂಬೆಲ್ಲ ಹುಡುಕಾಡಿದ್ದೇವೆ. ಆದರೆ ಆಕೆಯ ಪತ್ತೆಯಾಗಿಲ್ಲ. ಇದರಿಂದ ಮತ್ತಷ್ಟು ಆತಂಕಗೊಂಡು ಸಂಬಂಧಿಕರ ಜೊತೆಗೂಡಿ ಹುಡುಕಾಡಿದ್ದೇನೆ. ನೆಂಟರಿಷ್ಟರ ಮನೆಗಳಿಗೂ ಕರೆ ಮಾಡಿ ಆಕೆಯ ಬಗ್ಗೆ ವಿಚಾರಿಸಿದರೂ ಪತ್ನಿಯ ಸುಳಿವು ಸಿಕ್ಕಿಲ್ಲ ಎಂದು ದೇವರಹಿಪ್ಪರಗಿ ಪೊಲೀಸ್ ಠಾಣೆಗೆ ಕಂಪ್ಲೇಂಟ್​​​ ನೀಡಿದ್ದ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ವೇಳೆ ಪ್ರಭು ರತ್ನಾಕರನ ಮೇಲೆಯೇ ಅನುಮಾನಗೊಂಡಿದ್ದಾರೆ. ಹೀಗಾಗಿ ಆತನನ್ನು ಕರೆಸಿ ವಿಚಾರಣೆ ನಡೆಸಿದಾಗ ಅಸಲೀ ಸತ್ಯ ಬಯಲಾಗಿದೆ. ಸದ್ಯ ಕಾನೂನು ಪ್ರಕಾರ ಹೂತಿರುವ ಶವ ಹೊರ ತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಶವ ಹಸ್ತಾಂತರಿಸಲಾಗಿದೆ. ಸರೋಜಿನಿ ತಾಯಿ ಪ್ರಭು ರತ್ನಾಕರ್​​ ವಿರುದ್ಧ ದೂರು ನೀಡಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.