ನಿಶ್ಚಿತಾರ್ಥವಾದ ಯುವಕನ ಮನೆಯವರಿಗೆ ಯುವತಿಯೊಂದಿಗಿನ ಫೋಟೋ ಕಳುಹಿಸಿದ ಪ್ರೇಮಿ; ಮುಂದಾಗಿದ್ದು ದುರಂತ

ವಿಜಯಪುರ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ನಿಶ್ಚಿತಾರ್ಥವಾದ ಯುವಕನ ಮನೆಯವರಿಗೆ ತನ್ನ ಜೊತೆಗಿನ ಫೋಟೋವನ್ನು ಪ್ರೇಮಿ ಕಳುಹಿಸಿದ ಕಾರಣ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಫೋಟೋ ನೋಡಿ ಮದುವೆ ಆಗಬೇಕಿದ್ದ ಯುವಕನ ಕಡೆಯವರು ವಿವಾಹ ರದ್ದುಗೊಳಿದ ಕಾರಣ ಅವಮಾನಗೊಂಡು ಯುವತಿ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಈ ಸಂಬಂಧ ಸಿಂದಗಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಶ್ಚಿತಾರ್ಥವಾದ ಯುವಕನ ಮನೆಯವರಿಗೆ ಯುವತಿಯೊಂದಿಗಿನ ಫೋಟೋ ಕಳುಹಿಸಿದ ಪ್ರೇಮಿ; ಮುಂದಾಗಿದ್ದು ದುರಂತ
ಮೃತ ಯುವತಿ
Image Credit source: Tv9 Kannada
Edited By:

Updated on: Apr 13, 2026 | 1:30 PM

ವಿಜಯಪುರ, ಏಪ್ರಿಲ್​​ 13: ಹದಿಹರೆಯದ ಪ್ರೇಮ ಪ್ರಕರಣಗಳು ಕೆಲವೊಮ್ಮೆ ಜೀವಕ್ಕೇ ಕಂಟಕವಾಗಿಬಿಡುತ್ತವೆ. ಪ್ರೀತಿಸಿದ ಹುಡುಗ ಅಥವಾ ಹುಡುಗಿ ಸಿಗದ ಕಾರಣಕ್ಕೆ ಮನನೊಂದು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ತೆಗೆದುಕೊಂಡು ಬಲಿಯಾದವರ ಸಂಖ್ಯೆ ದೊಡ್ಡದ್ದೇ ಇದೆ. ಆದರೆ ವಿಜಯಪುರದಲ್ಲಿ ಇದಕ್ಕೆ ತುಸು ಭಿನ್ನವೆಂಬಂತಹ ಪ್ರಕರಣವೊಂದು ನಡೆದಿದೆ. ತಾನು ಪ್ರೀತಿಸಿದ್ದ ಯುವತಿಗೆ ಮತ್ತೊಬ್ಬನ ಜೊತೆ ವಿವಾಹ ನಿಶ್ಚಯವಾಗಿದ್ದಕ್ಕೆ ರೊಚ್ಚಿಗೆದ್ದ ಯುವಕ ಮಾಡಿದ ಕೆಲಸ, ಮದುವೆಯ ಕನಸು ಕಂಡಿದ್ದ ಯುವತಿಯ ಪ್ರಾಣವನ್ನೇ ತೆಗೆದಿದೆ.

ಹೌದು, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದ 22 ವರ್ಷದ ಯುವತಿ ಜಯಶ್ರೀ ಬಿರಾದಾರ್​​ಗೆ ಮದುವೆ ಮಾಡಲು ಮುಂದಾಗಿದ್ದ ಕುಟುಂಬಸ್ಥರು, ಈ ಸಂಬಂಧ ನಿಶ್ಚಿತಾರ್ಥವನ್ನೂ ನಡೆಸಿದ್ದರು. ಆದರೆ ಜಯಶ್ರೀ ಈ ಮೊದಲು ಶ್ರೀಶೈಲ್ ಬಡಾನೂರ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಈಕೆಯ ವಿವಾಹದ ವಿಷಯ ತಿಳಿದ ಆತ ವ್ಯತಿರಿಕ್ತವಾಗಿ ವರ್ತಿಸಿದ್ದಾನೆ. ಜಯಶ್ರೀ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಕುಟುಂಬಸ್ಥರಿಗೆ ಆಕೆ ತನ್ನ ಜೊತೆಗಿರುವ ಫೋಟೋಗಳನ್ನು ಶ್ರೀಶೈಲ್ ಕಳುಹಿಸಿದ್ದಾನೆ. ಅವನ್ನು ನೋಡಿರುವ ಯುವಕನ ಕಡೆಯವರು ಏಪ್ರಿಲ್​​ 27ರಂದು ನಿಗದಿಯಾಗಿದ್ದ ಮದುವೆಯನ್ನು ಕ್ಯಾನ್ಸಲ್​​ ಮಾಡಿದ್ದಾರೆ. ಘಟನೆಯಿಂದ ತೀವ್ರವಾಗಿ ನೊಂದ ಜಯಶ್ರೀ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: ಸ್ವಾಮೀಜಿ ಬೆತ್ತಲೆ ವೀಡಿಯೋ ಕಾಲ್ ಕೇಸಿಗೆ ಸ್ಫೋಟಕ ಟ್ವಿಸ್ಟ್​; ಆರೋಪಿಸಿದ ಮಹಿಳೆಯೇ ನಾಪತ್ತೆ

ಪ್ರೇಮ ಪ್ರಕರಣ ಹೊರ ಬಂದ ಕಾರಣ ಅವಮಾನವಾಗಿ ಬಂದಾಳ ಗ್ರಾಮದ ಮದಿನಾ ಮಸೀದಿ ಪಕ್ಕದ ಬಾವಿಗೆ ಜಯಶ್ರೀ ಹಾರಿದ್ದಾಳೆ. ನಿನ್ನೆ ಸಾಯಂಕಾಲ ಘಟನೆ ನಡೆದಿದ್ದು, ಶವವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮನೆ ಮಗಳ ಸಾವು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮಾಡಬಾರದ ಕೃತ್ಯ ಮಾಡಿರುವ ಪಾಗಲ್ ಪ್ರೇಮಿ ಶ್ರೀಶೈಲ್ ಬಡಾನೂರ್ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಘಟನೆ ಸಂಬಂಧ ಸಿಂದಗಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:28 pm, Mon, 13 April 26

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us