
ವಿಜಯಪುರ, ಏಪ್ರಿಲ್ 27: ನಿವೃತ್ತ ಡಿಜಿಪಿ ಓಂಪ್ರಕಾಶ ಅವರನ್ನು ಅವರ ಪತ್ನಿಯೇ (wife) ಚಾಕುವಿನಿಂದ ಇರಿದು ಕೊಲೆ ಮಾಡಿರುವ ಸುದ್ದಿ ಇನ್ನೂ ತಣ್ಣಗಾಗಿಲ್ಲ. ಈ ಮಧ್ಯೆ ಅದೇ ಮಾದರಿಯಲ್ಲಿ ವಿಜಯಪುರ ನಗರದಲ್ಲಿ ಪತ್ನಿಯೇ ಪತಿ (husband) ಕತ್ತಿಗೆ ಚಾಕು ಹಾಕಿ ಕೊಲೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಇಂದು ನಸುಕಿನ ಜಾವ ನಗರದ ಆಲಕುಂಟೆ ನಗರದಲ್ಲಿರುವ ಮನೆಯಲ್ಲಿ ಪತ್ನಿ ತೇಜು ರಾಠೋಡ್ ಎಂಬಾಕೆ ತನ್ನ ಪತಿ ಅಜೀತ್ ರಾಠೋಡ್ ನನ್ನು ಕೊಲೆ ಮಾಡಲು ಮುಂದಾಗಿದ್ದಾಳೆ. ಪತಿ ಗಾಢ ನಿದ್ರೆಯಲ್ಲಿದ್ದಾಗ ಚಾಕುವಿನಿಂದ ಕತ್ತಿಗೆ ಬಲವಾಗಿ ಇರಿದಿದ್ದಾಳೆ.
ಘಟನೆ ವೇಳೆ ಅಜೀತ್ ಕಿರುಚಿಕೊಂಡಾಗ ಮನೆಯವರಿಗೆ ವಿಷಯ ಗೊತ್ತಾಗಿದೆ. ಕೂಡಲೇ ಅವರನ್ನು ನಗರ ಬಿಎಲ್ಡಿಇ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಅಜೀತ್ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇನ್ನು ಘಟನೆಗೆ ಕಾರಣ ಪತ್ನಿ ತೇಜುಗೆ ಬುದ್ದಿಮಾತು ಹೇಳಿದ್ದೇ ಅಜೀತ್ ಪ್ರಾಣಕ್ಕೆ ಸಂಚಕಾರ ತಂದಿದೆ ಎನ್ನಲಾಗಿದೆ. ಸದಾಕಾಲ ಮೊಬೈಲ್ನಲ್ಲಿ ಬೇರೆಯವರೊಂದಿಗೆ ಚಾಟ್ ಮಾಡುತ್ತಿದ್ದ ತೇಜುಗೆ ಚಾಟ್ ಮಾಡಬೇಡ ಎಂದು ಬುದ್ದಿ ಮಾತು ಹೇಳಿದ್ದಕ್ಕೆ ಪತಿ ಅಜೀತ್ ಮೇಲೆ ಸಿಟ್ಟಾಗಿ ಇಂತ ದುಸ್ಸಾಹಸ ಮಾಡಿದ್ದಾಳೆ.
ಇತರರೊಂದಿಗೆ ಮೊಬೈಲ್ನಲ್ಲಿ ಚಾಟ್ ಮಾಡುತ್ತಾ ಕಾಲ ಕಳೆಯುತ್ತಿದ್ದ ಪತ್ನಿಯ ನಡೆ ಅಜೀತ್ ರಾಠೋಡ್ಗೆ ಸರಿ ಬರುತ್ತಿರಲಿಲ್ಲಾ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಅಜೀತ್ ಕೊಲೆಗೆ ತೇಜು ಯತ್ನಿಸಿದ್ದಾಳೆ. ಸದ್ಯ ಸ್ಥಳಕ್ಕೆ ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: ನನ್ನ ಗಂಡ ಒಳ್ಳೆಯವನೆ ಆದ್ರೆ….: ಡೆತ್ ನೊಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ
ಇನ್ನು ಆದರ್ಶನಗರ ಪೊಲೀಸರು ತೇಜುಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಆಸ್ತಿ ವಿಚಾರಕ್ಕೆ ನಡೆದ ಇಬ್ಬರ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವಂತಹ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ. ಪರಶುರಾಮ ಗಾಣಗೇರ (50) ಕೊಲೆಯಾದ ವ್ಯಕ್ತಿ.
ಇದನ್ನೂ ಓದಿ: ಚಿತ್ರದುರ್ಗ: ಸೈಕಲ್ ಕೊಡಲಿಲ್ಲವೆಂಬ ಕಾರಣಕ್ಕೆ 11 ವರ್ಷದ ಬಾಲಕಿ ನೇಣಿಗೆ ಶರಣು
ನಿನ್ನೆ ತಡರಾತ್ರಿ ಪರಶುರಾಮ ಗಾಣಗೇರ ಹಾಗೂ ದ್ಯಾಮಣ್ಣ ಬಡಿಗೇರ ನಡುವೆ ಆಸ್ತಿ ವಿಚಾರವಾಗಿ ಗಲಾಟೆ ನಡೆದಿದೆ. ಈ ವೇಳೆ ಚಾಕುವಿನಿಂದ ಚುಚ್ಚಿ, ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿದೆ. ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:03 pm, Sun, 27 April 25