ನಾಳೆ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಅಧಿಕಾರಕ್ಕಾಗಿ ಬಿಜೆಪಿ, ಕಾಂಗ್ರೆಸ್ ನಡುವೆ ಪೈಪೋಟಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 08, 2024 | 7:42 PM

ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಮಹೂರ್ತ ಕೂಡಿ ಬಂದಿದೆ. ನಾಳೆ ಪಾಲಿಕೆಯ ಮೇಯರ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯುವುದು ಫಿಕ್ಸ್ ಆಗಿದೆ. ಇದೀಗ ನಾಳೆ ಮೇಯರ್ ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್- ಬಿಜೆಪಿ ಮಧ್ಯೆ ಪಾಲಿಕೆ ಗದ್ದುಗೆಗಾಗಿ ಬಿಗ್ ಫೈಟ್ ನಡೆಯುತ್ತಿದೆ.

ನಾಳೆ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಅಧಿಕಾರಕ್ಕಾಗಿ ಬಿಜೆಪಿ, ಕಾಂಗ್ರೆಸ್ ನಡುವೆ ಪೈಪೋಟಿ
ವಿಜಯಪುರ ಪಾಲಿಕೆ
Follow us on

ವಿಜಯಪುರ, ಜನವರಿ 08: ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ (Corporation Mayor, Deputy Mayor Elections) ಮಹೂರ್ತ ಕೂಡಿ ಬಂದಿದೆ. ನಾಳೆ ಪಾಲಿಕೆಯ ಮೇಯರ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯುವುದು ಫಿಕ್ಸ್ ಆಗಿದೆ. ಪಾಲಿಕೆಗೆ ಚುನಾವಣೆ ನಡೆದು ವರ್ಷದ ಮೇಲೆ ಮೇಯರ್ ಉಪ ಮೇಯರ್ ಚುನಾವಣೆ ನಡೆಯುತ್ತಿರುವುದು ಹರ ಸಾಹಸವೇ ಆಗಿದೆ. ಕೆಲ ವಿಚಾರಗಳು ನ್ಯಾಯಾಲಯದಲ್ಲಿದ್ದ ಕಾರಣ ಚುನಾವಣೆ ನಡೆಸಲು ಆಗಿರಲಿಲ್ಲ. ಇದೀಗ ನಾಳೆ ಮೇಯರ್ ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್- ಬಿಜೆಪಿ ಮಧ್ಯೆ ಪಾಲಿಕೆ ಗದ್ದುಗೆಗಾಗಿ ಬಿಗ್ ಫೈಟ್ ನಡೆಯುತ್ತಿದೆ.

ಕಳೆದ 2022ರ ಅಕ್ಟೋಬರ್ 28 ರಂದು 35 ಸದಸ್ಯ ಬಲದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಅಕ್ಟೋಬರ್ 30 ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಿತ್ತು. ಫಲಿತಾಂಶದಲ್ಲಿ 17 ಸ್ಥಾನಗಳನ್ನು ಬಿಜೆಪಿ ಪಡೆದು ಆಧಿಕಾರದ ಸನೀಹ ಬಂದಿತ್ತು. 10 ಸ್ಥಾನಗಲ್ಲಿ ಕಾಂಗ್ರೆಸ್, 5 ಸ್ಥಾನಗಳಲ್ಲಿ ಪಕ್ಷೇತರರು, 2 ಸ್ಥಾನಗಳಲ್ಲಿ ಎಐಎಂಐಎಂ ಹಾಗೂ 1 ಸ್ಥಾನ ಜೆಡಿಎಸ್ ಪಾಲಾಗಿತ್ತು. ಬಳಿಕ
ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯುತ್ತದೆ ಎನ್ನುವ ವೇಳೆಯಲ್ಲೇ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳ ಮೀಸಲಾತಿ ವಿಚಾರದಲ್ಲಿ ಬಿಜೆಪಿಯ ಕೆಲ ಸದಸ್ಯರು ಮೇಯರ್ ಉಪ ಮೇಯರ್ ಮೀಸಲಾತಿ ವಿಚಾರದಲ್ಲಿ ಕಲಬುರಗಿ ಹೈಕೋರ್ಟ್​ಗೆ ದೂರು ಸಲ್ಲಿಸಿದರು.

ಈ ಕಾರಣದಿಂದ ಚುನಾವಣೆ ನಡೆದಿರಲಿಲ್ಲ. ಸದ್ಯ ಹೋಕೋರ್ಟ್​ನಲ್ಲಿ ಪ್ರಕರಣ ಇತ್ಯರ್ಥವಾಗಿದ್ದು ನಾಳೆ ಜನವರಿ 9ರಂದು ವಿಜಯಪುರ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಚುನಾವಣೆ ನಡೆಸಲು ಆದೇಶ ಜಾರಿ ಮಾಡಿದ್ದಾರೆ. ನಾಳೆ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆಣ್ಣವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: ಯಶಸ್ವಿ ರೈತನಾದ ಯೋಧ! ಸರ್ಕಾರಿ ಕೋಟಾಗೆ ಮುಗಿಬೀಳದೆ ಭೂತಾಯಿಯ ಸೇವೆಗೆ ಜೀವನ ಮುಡಿಪಿಟ್ಟ ಮಿಲ್ಟ್ರಿ ಮ್ಯಾನ್

ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ ನಾಮಪತ್ರಗಳನ್ನು ಸ್ವೀಕರಿಸುವುದು. ಮಧ್ಯಾಹ್ನ 1 ಗಂಟೆಗೆ ಸಭೆ ಆರಂಭ, ಮಧ್ಯಾಹ್ನ 1 ಗಂಟೆಯ ನಂತರ ಮಹಾಪೌರ, ಉಪಮಹಾಪೌರ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ, ಪ್ರಮಾಣ ವಚನ, ಹಾಜರಾತಿ, ಕೋರಂ ಪರಿಶೀಲನೆ, ನಾಮಪತ್ರಗಳ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಘೋಷಣೆ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವುದು, ಉಮೇದುವಾರರ ಪಟ್ಟಿ ಘೋಷಣೆ, ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ, ಚುನಾವಣೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ ಹಾಗೂ ಮತಗಳ ಏಣಿಕೆ ಹಾಗೂ ಫಲಿತಾಂಶ ಘೋಷಣೆ ಪ್ರಕ್ರಿಯೆ ನಡೆಯಲಿದೆ.

ಒಟ್ಟು 35 ಸದಸ್ಯ ಬಲದ ಮಹಾನಗರ ಪಾಲಿಕೆಯ ಗದ್ದುಗೆಗಾಗಿ ಬಿಜೆಪಿ ಕಾಂಗ್ರೆಸ್ ಮಧ್ಯೆ ಹೋರಾಟ ನಡೆದಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ರಾಜಕೀಯ ತಂತ್ರಗಾರಿಕೆಯಿಂದ ಪಾಲಿಕೆ ಕೈ ವಶವಾಗಲಿದೆ. 10 ಸದಸ್ಯರ ಬಲವನ್ನು ಮಾತ್ರ ಹೊಂದಿರುವ ಕಾಂಗ್ರೆಸ್ ಪರವಾಗಿ 5 ಪಕ್ಷೇತರರು, 2 ಎಐಎಂಐಎಂ ಹಾಗೂ 1 ಜೆಡಿಎಸ್ ಸದಸ್ಯ ಬೆಂಬಲವನ್ನು ಎಂ.ಬಿ ಪಾಟೀಲ್ ಪಡೆದಿದ್ದಾರೆ. ಇದರ ಜೊತೆಗೆ ಎಂ ಬಿ ಪಾಟೀಲ್ ಸಹಿತ ನಾಗಠಾಣ ಶಾಸಕ ವಿಠಲ ಕಟಕದೊಂಡ, ಇಬ್ಬರು ಪರಿಷತ್ ಸದಸ್ಯರಾದ ಸುನೀಲಗೌಡ ಪಾಟೀಲ್, ಪ್ರಕಾಸ ರಾಠೋಡ್ ಮತಗಳ ಬಲ ಕೈ ಪಡೆಗಿದೆ. ಹೀಗಾಗಿ ಒಟ್ಟು 22 ಮತಗಳ ಬಲವನ್ನು ಕಾಂಗ್ರೆಸ್ ಪಡೆದುಕೊಂಡಂತಾಗಿದ್ದು ಪಾಲಿಕೆಯ ಗದ್ದುಗೆ
ಕಾಂಗ್ರೆಸ್ ಪಾಲಾಗಲಿದೆ ಎನ್ನಲಾಗುತ್ತಿದೆ.

ಇದಕ್ಕೆಲ್ಲಾ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಕಾರಣವೆಂದು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹೇಳುತ್ತಿದ್ದಾರೆ. ನಾಳೆ ನಡೆಯಲಿರುವ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳು ನಮ್ಮ ಪಕ್ಷದ ಪಾಲಾಗಲಿವೆ ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ವಾರ್ಡ್ ನಂಬರ್​ 34 ರ ಕಾಂಗ್ರೆಸ್ ಸದಸ್ಯೆ
ಮಾಹೇಜಬೀನ್ ಅಬ್ದುಲ್ ರಜಾಕ್ ಹೋರ್ತಿ ಹಾಗೂ ಎಸ್​ಟಿ ಪುರುಷ ಮೀಸಲಾತಿ ಇರುವ ಉಪ ಮೇಯರ್ ಸ್ಥಾನಕ್ಕೆ ವಾರ್ಡ್ ನಂಬರ್ 19ರ ಕಾಂಗ್ರೆಸ್ ಸದಸ್ಯ ದಿನೇಶ್ ಹಳ್ಳಿ ಸ್ಪರ್ಧೆ ಮಾಡಲಿದ್ದಾರೆ. ಇವರ ಆಯ್ಕೆ ಬಹುತೇಕ ಖಚಿತವೆಂದ ಹೇಳಲಾಗುತ್ತಿದೆ.

ಇದನ್ನೂ ಓದಿ: ವಿಜಯಪುರದ ಸಿದ್ದೇಶ್ವರ ಜಾತ್ರೆಯಲ್ಲಿ ಅನ್ಯಕೋಮಿನ ವ್ಯಾಪಾರಿಗಳಿಗೆ ಅವಕಾಶವಿಲ್ಲ: ಹಿಂದೂ ಸಂಘಟನೆಗಳ ಒಕ್ಕೂಟದ ಬ್ಯಾನರ್​

ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. 17 ಸದಸ್ಯ ಬಲದಲ್ಲಿ ಓರ್ವ ಸದಸ್ಯ ಅನಾರೋಗ್ಯದಿಂದ ನಿಧನರಾಗಿದ್ದು ಕೇಸರಿ ಪಾಳಯಕ್ಕೆ ಹೊಡೆತ ಬಿದ್ದಿದೆ. ವಾರ್ಡ್ ನಂಬರ್ 29 ರ ವಿಜಯಕುಮಾರ ಬಿರಾದಾರ ಅನಾರೋಗ್ಯದಿಂದ ನಿಧನರಾಗಿದ್ದು ಬಿಜೆಪಿಯವರ ಬಲ 16 ಕ್ಕಿಳಿದಿದೆ. ಇದರ ಜೊತೆಗೆ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​, ಸಂಸದ ರಮೇಶ ಜಿಗಜಿಣಗಿ ಮತಗಳ ಬಲವಿದ್ದರೂ ಒಟ್ಟು 18 ಮತಗಳು ಮಾತ್ರ ಆಗುತ್ತದೆ. ಮ್ಯಾಜಿಕ್ ನಂಬರ್ 21 ತಲುಪುವುದಕ್ಕೆ ಕಷ್ಟಸಾದ್ಯವಾಗಲಿದೆ.

ಇಷ್ಟರ ಹೊರತಾಗಿ ಬಿಜೆಪಿ ರಾಜಕೀಯ ಆಟವಾಡಿ ಇತರರ ಬೆಂಬಲ ಪಡೆದರೆ ಅವರಿಗೂ ಪಾಲಿಕೆ ಗದ್ದುಗೆ ಸಿಗುವ ಸಾಧ್ಯತೆಯಿದೆ. ಈ ಕುರಿತು ಇಂದು ನಗರದಲ್ಲಿ ಮಾತನಾಡಿದ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ನಮ್ಮ ಪಕ್ಷದ ಓರ್ವ ಸದಸ್ಯರು ನಿಧನರಾಗಿದ್ದಾರೆ. ಪಾಲಿಕೆ ಚುನಾವಣೆ ಕುರಿತು ಇಂದು ಎಲ್ಲ ಸದಸ್ಯರ ಸಭೆ ನಡೆಸುತ್ತೇವೆ. ಚುನಾವಣೆಗಾಗಿ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತೇವೆಂದು ಹೇಳಿದ್ಧಾರೆ. ಯಾರನ್ನು ಕಣಕ್ಕಿಳಿಸಬೇಕೆಂದು ನಿರ್ಣಯ ಮಾಡಿಲ್ಲ ಎಂದಿದ್ದಾರೆ.

ಪಾಲಿಕೆಗೆ ಚುನಾವಣೆ ನಡೆದು 14 ತಿಂಗಳ ಬಳಿಕ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ನೂತನ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮವು ನಡೆಯಲಿದೆ. ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರೂ ಅಧಿಕಾರವಿಲ್ಲದೇ ಜನರ ಸಮಸ್ಯೆಗಳನ್ನು ಬಗೆ ಹರಿಸಲು ಆಗದೇ ಒದ್ದಾಡುತ್ತಿದ್ದ ಸದಸ್ಯರಿಗೆ ಪಾಲಿಕೆಯ ಚುನಾವಣೆ ಹಾಗೂ ಸದಸ್ಯರ ಪ್ರಮಾಣ ವಚನ ಶಾಪ ವಿಮೋಚನೆಯಾದಂತಾಗಿದೆ. ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಯಾವುದೇ ಪಕ್ಷ ಅಧಿಕಾರ ಹಿಡಿಯಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಲಿ ಎಂದು ನಗರದ ಜನತೆ ಬಯಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:41 pm, Mon, 8 January 24