ವಿಶ್ವದ ಅತ್ಯುತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ ವಿಜಯಪುರದ 2 ವಿಜ್ಞಾನಿಗಳ ಹೆಸರು ಸೇರ್ಪಡೆ
ವಿಜಯಪುರ ಜಿಲ್ಲೆಯ ಇಬ್ಬರು ಹಿರಿಯ ವಿಜ್ಞಾನಿಗಳು ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಶಿಕ್ಷಣ, ಸಂಶೋಧನೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಈ ಇಬ್ಬರು ವಿಜ್ಞಾನಿಗಳ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಸಾಧಕ ವಿಜ್ಞಾನಿಗಳ ಕುರಿತು ಮಾಹಿತಿ ಇಲ್ಲಿದೆ.
ವಿಜಯಪುರ, ಸೆಪ್ಟೆಂಬರ್ 21: ವಿಜಯಪುರದ (Vijayapura) ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ (BLDE (Deemed to be University)) ರಿಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ ಮತ್ತು ಶರೀರಶಾಸ್ತ್ರ ವಿಜ್ಞಾನದ ವಿಭಾಗದ ಪ್ರಾಧ್ಯಾಪಕ ಹಾಗೂ ಡಿಸ್ಟಿಂಗ್ವಿಷ್ ಚೇರ್ ಪ್ರೊಫೆಸರ್ ಡಾ. ಕುಸಾಲ ದಾಸ್ ಪ್ರಸಕ್ತ 2024ನೇ ವರ್ಷದ ವಿಶ್ವದ ಉನ್ನತ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಮೇರಿಕಾದ ಸ್ಟ್ಯಾನಫೋರ್ಡ್ ವಿಶ್ವವಿದ್ಯಾಲಯ ಹಾಗೂ ನೆದರಲ್ಯಾಂಡ್‌ನ ಎಲ್ಸವಿಯರ್ ಪ್ರಕಾಶನ ಸಂಸ್ಥೆಯು ಪ್ರತಿ ವರ್ಷ ಸೈಟೇಷನ್ ಇಂಡೆಕ್ಸ್ ಆಧಾರದ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ವಿಜ್ಞಾನಿಗಳನ್ನು ಗುರುತಿಸಿ ಶ್ರೇಷ್ಠ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ನೀಡುತ್ತದೆ.
ಔಷಧ ವಿಜ್ಞಾನ, ಶರೀರಶಾಸ್ತ್ರ ಹಾಗೂ ಪಾಲಿಮ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ಡಾ. ರಾಘವೇಂದ್ರ ಕುಲಕರ್ಣಿ ಮತ್ತು ಡಾ.ಕುಸಾಲ ದಾಸ್ ಅವರಿಗೆ ಈ ವರ್ಷದ ವಿಶ್ವದ ಉನ್ನತ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ. ವಿಜಯಪುರದ ಬಿಎಲ್ಡಿಇ ಡೀಮ್ಡ್ ವಿವಿಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ವಿಜ್ಞಾನಿಗಳ ಸಾಧನೆ ಯುವ ಸಂಶೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.
ಇದನ್ನೂ ನೋಡಿ: ರೈತನ ಕೈಹಿಡಿದ ಲಿಂಬೆ ಬೆಳೆ; ಮಳೆಗಾಲದಲ್ಲೂ ಉತ್ತಮ ದರಕ್ಕೆ ಮಾರಾಟ
ಡಾ. ರಾಘವೇಂದ್ರ ಕುಲಕರ್ಣಿ ಸತತ ನಾಲ್ಕನೇ ಬಾರಿ ವಿಶ್ವದ ಉನ್ನತ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪಾಲಿಮರ್ ಆಧಾರಿತ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ ಭಾರತದ ಸಂಶೋಧಕರ ಪೈಕಿ 20ನೇ ಸ್ಥಾನ ಮತ್ತು ವಿಶ್ವದಲ್ಲಿ 146ನೇ ಸ್ಥಾನವನ್ನು ಡಾ. ರಾಘವೇಂದ್ರ ಪಡೆದಿದ್ದಾರೆ. ಡಾ. ರಾಘವೇಂದ್ರ ಕುಲಕರ್ಣಿ ಅವರು 130 ಸಂಶೋಧನಾ ಪ್ರಕಟಣೆಗಳನ್ನು ರಚಿಸಿದ್ದಾರೆ. ಅಲ್ಲದೇ, 10 ಪೇಟೆಂಟ್‌ಗಳನ್ನೂ ಸಹ ಪಡೆದಿದ್ದಾರೆ. ಇವರು ನಡೆಸಿದ ಸಂಶೋಧನೆಗಾಗಿ 97 ಲಕ್ಷ ರೂಪಾಯಿಗಳ ಅನುದಾನವೂ ಒಲಿದು ಬಂದಿದೆ.
ಡಾ. ಕುಸಾಲ ದಾಸ ಸತತ ಎರಡನೇ ಬಾರಿ ವಿಶ್ವದ ಉನ್ನತ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಶರೀರ ಶಾಸ್ತ್ರ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಿರುವ ಭಾರತದ ಸಂಶೋಧಕರ ಪೈಕಿ 229ನೇ ಸ್ಥಾನ ಹಾಗೂ ವಿಶ್ವದಲ್ಲಿ 2730ನೇ ಸ್ಥಾನ ಪಡೆದಿದ್ದಾರೆ. ಅವರು 146 ಸಂಶೋಧನಾ ಪ್ರಕಟಣೆಗಳನ್ನು ರಚಿಸಿದ್ದಾರೆ. ಅಲ್ಲದೇ, 3 ಪೇಟೆಂಟ್‌ಗಳನ್ನೂ ಪಡೆದಿದ್ದಾರೆ ಹಾಗೂ ಸಂಶೋಧನೆಗಾಗಿ 40 ಲಕ್ಷ ರೂಪಾಯಿ ಅನುದಾನ ಪಡೆದುಕೊಂಡಿದ್ದಾರೆ. ಈ ಇಬ್ಬರು ವಿಜ್ಞಾನಿಗಳ ಸಾಧನೆಗೆ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್ ಎಸ್ ಮುಧೋಳ, ಬಿಎಲ್ಡಿಇ ಸಂಸ್ಥೆಯ ಅಧ್ಯಕ್ಷ ಹಾಗೂ ಸಚಿವ ಎಂ ಬಿ ಪಾಟೀಲ್ ಅಭಿನಂದಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ