
ವಿಜಯಪುರ, ಅಕ್ಟೋಬರ್ 31: ಕನ್ನೊಳ್ಳಿ ಗ್ರಾಮದ ಬಳಿಯ ಟೋಲ್‌ನಲ್ಲಿ ಬಿಜೆಪಿ ಮುಖಂಡ ವಿಜು ಗೌಡ ಪಾಟೀಲ್ (Vijugouda Patil) ಪುತ್ರ ಸಮರ್ಥ ಗೌಡ ಮತ್ತು ಗೆಳೆಯರಿಂದ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿತ್ತು. ಈ ಹಿನ್ನೆಲೆ ಯಾವುದೇ ದೂರು ದಾಖಲಾಗಿಲ್ಲ. ಹೀಗಿರುವಾಗ ತನ್ನ ಮಗನ ತಪ್ಪಿಗೆ ನಾನು ಕ್ಷಮೆ ಕೇಳುತ್ತೇನೆ ಎಂದು ವಿಜು ಗೌಡ ಪಾಟೀಲ್ ಹೇಳಿದ್ದಾರೆ.
ಸಮರ್ಥ ಗೌಡ ಮತ್ತು ಆತನ ಸ್ನೇಹಿತರಿಂದ ಹಲ್ಲೆಗೊಳಗಾದ ಟೋಲ್ ಸಿಬ್ಬಂದಿ ಸಂಗಪ್ಪ , ಈ ಗಲಾಟೆಯಿಂದ ನನಗೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ ನಾನು ದೂರು ನೀಡಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಇದೇ ಕಾರಣಕ್ಕೆ ಈ ಘಟನೆ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಹೀಗಿರುವಾಗ ಈ ಘಟನೆ ಕುರಿತು ಮಾತನಾಡಿರುವ ವಿಜು ಗೌಡ, ಟೋಲ್ ಸಿಬ್ಬಂದಿ ನನ್ನ ಮಗನ ಮುಂದೆ ಅವಾಚ್ಯ ಶಬ್ದಗಳಿಂದ ಬೈದಿದ್ದರು. ಮಗನ ಮುಂದೆ ತಂದೆಗೆ ಬೈದರೆ ಯಾರಿಗೆ ತಾನೇ ಕೋಪ ಬರುವುದಿಲ್ಲ, ಆಗ ನನ್ನ ಮಗ ಹಾಗೂ ಆತನ ಗೆಳೆಯರು ಸೇರಿ ಸಿಬ್ಬಂದಿಗೆ ಥಳಿಸಿದ್ದರು ಎಂದಿದ್ದಾರೆ.
ನನ್ನ ಮಗ ಮಾಡಿದ್ದು ತಪ್ಪು, ಸಿಬ್ಬಂದಿ ಕೂಡ ಆ ರೀತಿ ಮಾತನಾಡಿದ್ದು ತಪ್ಪು. ನನ್ನ ಮಗನಿಗೆ ಕ್ಷಮೆ ಕೇಳುವಂತೆ ನಾನು ಹೇಳಿದ್ದೇನೆ. ಅವನು ಕ್ಷಮೆ ಕೇಳದಿದ್ದರೂ ನಾನು ಅವನ ಪರವಾಗಿ ಕ್ಷಮೆ ಕೇಳುತ್ತೇನೆ ಎಂದಿರುವ ವಿಜು ಗೌಡ, ಈ ವಿಷಯದಲ್ಲೀಗ ರಾಜಕೀಯ ಮಧ್ಯಪ್ರವೇಶೆಸಿದ ಕಾರಣ ಈ ಮಟ್ಟಕ್ಕೆ ಬೆಳೆಯುತ್ತಿದೆ ಎಂದು ಆರೋಪಿಸಿದ್ದಾರೆ. ನನ್ನ ಮಗ ಮತ್ತು ಸಿಬ್ಬಂದಿ ಇಬ್ಬರೂ ಪರಸ್ಪರ ಕ್ಷಮೆ ಕೇಳಿ ಪ್ರಕರಣವನ್ನು ಸುಖಾಂತ್ಯಗೊಳಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಬಿಜೆಪಿ ಮುಖಂಡ ವಿಜು ಗೌಡ ಪಾಟೀಲ್ ಪುತ್ರ ಸಮರ್ಥ ಗೌಡ ಮತ್ತು ಗೆಳೆಯರಿಂದ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಕನ್ನೊಳ್ಳಿ ಗ್ರಾಮದ ಬಳಿಯ ಟೋಲ್‌ನಲ್ಲಿ ನಡೆದಿತ್ತು. ಸಮರ್ಥ ಗೌಡ ವಿಜಯಪುರದಿಂದ ಬ್ಲ್ಯಾಕ್ ಕಲರ್ ಥಾರ್‌ನಲ್ಲಿ ಸಿಂದಗಿ ಕಡೆ ಹೊರಟ್ಟಿದ್ದರು. ಈ ವೇಳೆ ಟೋಲ್ ಸಿಬ್ಬಂದಿ ಸಂಗಪ್ಪ ಹಣ ಕೇಳಿದ್ದಕ್ಕೆ ವಿಜು ಗೌಡ ಪುತ್ರ ಎಂದಿದ್ದಾರೆ. ಯಾವ ವಿಜುಗೌಡ ಎಂದು ಸಂಗಪ್ಪ ಕೇಳಿದ್ದಕ್ಕೆ ಥಳಿಸಿರುವ ಆರೋಪ ಮಾಡಲಾಗಿದೆ. ಹಲ್ಲೆಗೊಳಗಾದ ಸಂಗಪ್ಪಗೆ ಸಿಂದಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ ಹಣ ಕೇಳಿದ್ದಕ್ಕೆ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಬಿಜೆಪಿ ಮುಖಂಡ ವಿಜು ಗೌಡ ಪಾಟೀಲ್ ಪುತ್ರ
ಈ ಹಿಂದೆಯೂ ಸಮರ್ಥಗೌಡ ಪಾಟೀಲ್ ಗುಂಡು ಹಾರಿಸಿದ್ದ ವಿಡಿಯೋ ವೈರಲ್ ಆಗಿದ್ದವು. ವಿಜಯಪುರದ ತೋಟದ ಮನೆಯಲ್ಲಿ ಸ್ನೇಹಿತರ ಜೊತೆ ಸೇರಿ ಪಿಸ್ತೂಲ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ಘಟನೆ 2023 ರ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಜಿಲ್ಲೆಯಲ್ಲಿ ವಿವಾದ ಸೃಷ್ಟಿಸಿತ್ತು. ಇದೀಗ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಸಮರ್ಥ ಗೌಡ ವಿಡಿಯೋ ಮತ್ತೊಮ್ಮೆ ವೈರಲ್ ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.