ಮದುವೆಗೂ ಮುನ್ನ ಬೇರೊಬ್ಬನಿಂದ ಗರ್ಭ ಧರಿಸಿದ ಹೆಂಡತಿ, ಡಿವೋರ್ಸ್ ಕೋರಿದ ಗಂಡನ ಮೇಲೆ ಮಾರಣಾಂತಿಕ ಹಲ್ಲೆ
ಮದುವೆಗೂ ಮುನ್ನ ಬೇರೆ ವ್ಯಕ್ತಿಯಿಂದ ಗರ್ಭ ಧರಿಸಿದ್ದನ್ನು ಪ್ರಶ್ನಿಸಿ ಡಿವೋರ್ಸ್ ಕೋರಿದ್ದ ಗಂಡನ ಮೇಲೆ ಹೆಂಡತಿ ಹಾಗೂ ಆಕೆಯ ಪೋಷಕರು ಹಲ್ಲೆ ಮಾಡಿ ಕೊಲೆ ಯತ್ನ ಮಾಡಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾನ್ಯವಾಗಿ ಗಂಡ ಹೆಂಡತಿಗೆ ಹೊಡೆದು ಹಲ್ಲೆ ಮಾಡಿದ ಘಟನೆ ಬಗ್ಗೆ ಕೇಳಿರುತ್ತೇವೆ ನೋಡಿರುತ್ತೇವೆ. ಇನ್ನು ವರದಕ್ಷಿಣೆ ಕಿರುಕುಳ ನೀಡುವುದು, ಸಂಶಯ ಪಟ್ಟು ಹಲ್ಲೆ ಮಾಡಿದ ಘಟನೆಗಳೂ ಸಹ ಆಗಾಗ ವರದಿಯಾಗುತ್ತವೆ. ಇಂಥ ಘಟನೆಗಳು ಪರಸ್ಪರ ವಿಚ್ಛೇದನ ದವರೆಗೂ ಹೋಗಿರುತ್ತವೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ನಡೆದ ವಿಚ್ಛೇದನ ಪ್ರಕರಣ ಮಾತ್ರ ತುಸು ವಿಭಿನ್ನವೇ ಆಗಿದೆ. ಇದರ ಬೆನ್ನಲ್ಲೇ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದವನ ಮೇಲೆ ಪತ್ನಿ ಹಾಗೂ ಪೋಷಕರು ಹಲ್ಲೆ ಮಾಡಿರೋ ಘಟನೆ ನಡೆದಿದೆ. ಹಲ್ಲೆಗೊಳಗಾದವ ಆಸ್ಪತ್ರೆ ಪಾಲಾದರೆ, ಹಲ್ಲೆ ಮಾಡಿದವರು ಕಂಬಿ ಹಿಂದೆ ಹೋಗಿದ್ದಾರೆ. ಇಂಥ ಘಟನೆಗೆ ವಿಜಯಪುರ ಜಿಲ್ಲೆ ಸಾಕ್ಷಿಯಾಗಿದೆ. ಈ ಕುರಿತ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
ಅದು ಎರಡು ದಿನದ ಹಿಂದಿನ ಮಾತು. ಡಿಸೆಂಬರ್ 20 ರಂದು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಾ ನ್ಯಾಯಾಲಯಕ್ಕೆ ಪತ್ನಿಯಿಂದ ವಿಚ್ಛೇದನ ಕೋರಿ ವಿಚಾರಣೆಗೆ ಹಾಜರಾಗಲು ಆಗಮಿಸಿದ್ದ ಮಹೇಶ್ ನಂದಿಹಾಳ ಎಂಬ ಯುವಕ ಆಗಮಿಸಿದ್ದ. ಆಗ ಆತನ ಹಿಂದಿನಿಂದ ಬಂದು ಹಗ್ಗದಿಂದ ಆತನನ್ನು ಕಟ್ಟಿ ಹಾಕಿ ಮನಸೋಯಿಚ್ಛೆ ಹಲ್ಲೆ ಮಾಡಿದ್ದಾರೆ. ಅಷ್ಟಕ್ಕೂ ನನ್ನ ಮೇಲೆ ಹಲ್ಲೆ ಯಾರು ಮಾಡಿದ್ದಾರೆಂದು ಮಹೇಶ್ ನೋಡಿದಾಗ ಆತನಿಗೆ ಗಾಬರಿಯಾಗಿತ್ತು. ಕಾರಣ ಹಲ್ಲೆ ಮಾಡಿದವರು ಬೇರೆ ಯಾರೂ ಅಲ್ಲಾ ಯಾವ ಪತ್ನಿಯಿಂದ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದನೋ ಅದೇ ಪತ್ನಿ ಈರಮ್ಮ ಉರುಫ್ ಸುಮಿತ್ರಾ, ಆಕೆಯ ತಂದೆ ಬಸಪ್ಪ ಬಿರಾದಾರ್, ತಾಯಿ ಚೆನ್ನಮ್ಮ ಹಾಗೂ ಸಹೋದರ ಮುತ್ತಪ್ಪ ಹಲ್ಲೆ ಮಾಡಿದ್ದನ್ನು ಕಂಡು ಸ್ವತಃ ಮಹೇಶ ಗಾಬರಿಯಾಗಿದ್ದ.
ಹೀಗೆ ಪತ್ನಿ ಹಾಗೂ ಆಕೆಯ ಪೋಷಕರಿಂದಲೇ ಹಲ್ಲೆಗೊಳಗುತ್ತಿರೋದನ್ನಾ ಕಂಡು ಅಲ್ಲಿದ್ದವರು ಮಹೇಶ ನಂದಿಹಾಳನ್ನು ರಕ್ಷಣೆ ಮಾಡಿದ್ದಾರೆ. ಹಲ್ಲೆಗೊಳಗಾಗಿ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಹೇಶ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ತನ್ನ ಮೇಲಿನ ಹಲ್ಲೆ ಕುರಿತು ಮುದ್ದೇಬಿಹಾಳ ಪೊಲೀಸರಿಗೆ ದೂರು ನೀಡಿದ್ದಾನೆ. ಎರಡು ವರ್ಷಗಳ ಹಿಂದೆ ಈರಮ್ಮ ಉರ್ಪ್ ಸುಮಿತ್ರಾಳನ್ನು ಮಹೇಶ ಮದುವೆಯಾಗಿದ್ದ. ಮದುವೆವಾಗಿ ಎರಡು ತಿಂಗಳ ಸಂಸಾರ ಮಾಡಿದಾಗ ಪತ್ನಿ ಏಳು ತಿಂಗಳ ಗರ್ಭಿಣಿಯೆಂದು ಗೊತ್ತಾಗಿರೋ ಕಾರಣ ವಿಚ್ಛೇದನ ಕೋರಿ ಮಹೇಶ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಈ ಪ್ರಕರಣದ ವಿಚಾರಣೆಗೆ ಹಾಜರಾಗಬಾರದು ಎಂದು ಆತನ ಪತ್ನಿ ಹಾಗೂ ಆಕೆಯ ಪೋಷಕರು ಹಲ್ಲೆ ಮಾಡಿದ್ಧಾರೆಂದು ಆತ ಆರೋಪಿಸಿದ್ದಾನೆ.
ಕಳೆದ ಎರಡು ವರ್ಷಗಳ ಹಿಂದೆ ಮುದ್ದೇಬಿಹಾಳ ತಾಲೂಕಿನ ರೂಡಗಿ ಗ್ರಾಮದ ಮಹೇಶ್ ನಂದಿಗಾಳ ಹಾಗೂ ಗೋನಾಳ ಎಸ್ ಎಚ್ ಗ್ರಾಮದ ಈರಮ್ಮ ಉರ್ಫ್ ಸುಮಿತ್ರಾ ಮದುವೆಯಾಗಿತ್ತು. ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಲಾಗಿತ್ತು. ಮದುವೆ ಬಳಿಕ ಮಹೇಶ ಜೊತೆಗೆ ಈರಮ್ಮ ಉರ್ಫ್ ಸುಮಿತ್ರಾ ಎರಡು ತಿಂಗಳ ಸಂಸಾರ ಮಾಡಿದ್ದಳು. ಆಗ ಆಕೆ ಏಳು ತಿಂಗಳ ಗರ್ಭಿಣಿ ಎಂದು ಮಹೇಶ್ ಹಾಗೂ ಮನೆಯವರಿಗೆ ತಿಳಿದು ಬಂದಿದೆ.
ಆಗ ಗುರು ಹಿರಿಯರ ಮುಂದೆ ನ್ಯಾಯ ಪಂಚಾಯತಿ ಮಾಡಿದ್ದಾರೆ. ಈ ವೇಳೆ ಈರಮ್ಮ ಮದುವೆಗೂ ಮುನ್ನ ತಮ್ಮದೇ ಗ್ರಾಮದ ಯುವಕನ ಜೊತೆಗೆ ಸಂಬಂಧ ಇದ್ದುದ್ದರ ಬಗ್ಗೆ ಬಾಯಿ ಬಿಟ್ಟಿದ್ದಳು. ಈ ಕಾರಣದಿಂದ ಆಕೆಯಿಂದ ವಿಚ್ಛೇದನ ಕೋರಿ ಮಹೇಶ್ ನ್ಯಾಯಾಲಯದ ಮೊರೆ ಹೋಗಿದ್ಧಾರೆ. ಅದರ ವಿಚಾರಣೆ ಆರಂಭವಾಗುತ್ತಿದ್ದಂತೆ ಪತ್ನಿ ಹಾಗೂ ಪೋಷಕರು ಈತನ ಮೇಲೆ ಹಲ್ಲೆ ಮಾಡಿದ್ದಾರೆ.
ವಿಚಾರಣೆಗೆ ಬಾರಬಾರದೆಂದು ಜೀವ ಬೆದರಿಕೆ ಹಾಕಿದ್ದಾರಂತೆ. ಮಾನ ಮರ್ಯಾದೆಯಿಂದ ಇದ್ದವರು ನಾವು ಐದಾರು ಲಕ್ಷ ರೂಪಾಯಿ ಖರ್ಚು ಮಾಡಿ ಮಗನ ಮದುವೆ ಮಾಡಿದ್ದೆವು. ಆದರೆ ನಮ್ಮ ಸೊಸೆ ನಮಗೆ ಮೋಸ ಮಾಡಿದ್ದಾಳೆ. ಆಕೆಯಿಂದ ಬಿಡುಗಡೆ ಕೋರಿದರೂ ನಮ್ಮ ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ನನ್ನ ಮಗನನ್ನು ಕೊಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಮಹೇಶಗೆ ಏನಾದರೂ ಆದರೆ ಅದಕ್ಕೆ ಕಾರಣ ಆತನ ಪತ್ನಿ ಹಾಗೂ ಆಕೆಯ ಪೋಷಕರು ಕಾರಣವೆಂದು ಮಹೇಶನ ಪೋಷಕರು ಆರೋಪ ಮಾಡಿದ್ದಾರೆ.
ಇತ್ತ ಮುದ್ದೇಬಿಹಾಳ ಪೊಲೀಸರು ಮಹೇಶ್ ಮೇಲಿನ ಹಲ್ಲೆ ಕುರಿತು ದೂರು ದಾಖಲು ಮಾಡಿಕೊಂಡು ಆತನ ಮೇಲೆ ಹಲ್ಲೆ ಮಾಡಿದ ಆತನ ಪತ್ನಿ ಹಾಗೂ ಆಕೆಯ ತಂದೆ ತಾಯಿ ಹಾಗೂ ಸಹೋದರನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ನಾಲ್ವರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಒಟ್ಟಾರೆ ಮದುವೆಗೂ ಮುನ್ನ ಬೇರೆ ವ್ಯಕ್ತಿಯಿಂದ ಗರ್ಭ ಧರಿಸಿದ್ದನ್ನು ಪ್ರಶ್ನಿಸಿ ಡಿವೋರ್ಸ್ ಕೋರಿದ್ದ ಗಂಡನ ಮೇಲೆ ಹೆಂಡತಿ ಹಾಗೂ ಆಕೆಯ ಪೋಷಕರು ಹಲ್ಲೆ ಮಾಡಿ ಕೊಲೆ ಯತ್ನ ಮಾಡಿದ್ದು ಮಾತ್ರ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ