ಹಾಸನ- ಈ ದರಿದ್ರ ಕೊರೊನಾ ಮಾರಿ ಬೆಂಗಳೂರನ್ನೂ ದಾಟಿ ಜಿಲ್ಲೆಗಳತ್ತ ತನ್ನ ಕಬಂಧಬಾಹುಗಳನ್ನು ಚಾಚುತ್ತಿದೆ. ಕೊರನಾದಿಂದ ಸಂಕಷ್ಟಗಳು ಎಲ್ಲೆ ಮೀರುತ್ತಿವೆ. ರಾಜಧಾನಿಯಲ್ಲಷ್ಟೇ ಕಾಡತೊಡಗಿದ್ದ ಕೊರೊನಾ ಸೋಂಕಿತರ ಮೃತದೇಹ ಅಂತ್ಯಸಂಸ್ಕಾರ ಸಂಕಷ್ಟ ಈಗ ಹಾಸನಕ್ಕೂ ತಲುಪಿದೆ. ಹಾಸನದಲ್ಲಿಯೂ ಕೊರೊನಾ ಪೀಡಿತರ ಮೃತದೇಹ ಅಂತ್ಯಸಂಸ್ಕಾರದ ನಡುವೆ ಸಹಜವಾಗಿ ಸಾವಿಗೀಡಾದವರ ಅಂತ್ಯಕ್ರಿಯೆ ಕಷ್ಟ ಶುರುವಾಗಿದೆ. ಹಾಸನದ ಬಿಟ್ಟಗೌಡನಹಳ್ಳಿಯಲ್ಲಿರೋ ಚಿತಾಗಾರದಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.
ಕೋವಿಡ್ ಮರಣ ಹೆಚ್ಚಾದ ಈ ಸಮಯದಲ್ಲಿ ಸಹಜವಾಗಿ ಸಾವಿಗೀಡಾದವರ ಅಂತ್ಯಕ್ರಿಯೆ ಕಷ್ಟ ಕಷ್ಟವಾಗಿದೆ. ಅಂತಹ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಲು ಸಂಬಂಧಿಕರ ಪರದಾಡುತ್ತಿದ್ದಾರೆ. ಅಂತ್ಯಸಂಸ್ಕಾರ ಮಾಡುವ ಚಿತಾಗಾರದ ಸಿಬ್ಬಂದಿಯನ್ನ ಸಂಬಂಧಿಕರು ಅಂಗಲಾಚುತ್ತಿದ್ದಾರೆ. ಹಾಸನದ ಬಿಟ್ಟಗೌಡನಹಳ್ಳಿಯಲ್ಲಿರೋ ಚಿತಾಗಾರದಲ್ಲಿ ಒಂದು ಬಾರಿಗೆ ಐವರನ್ನ ದಹನ ಮಾಡಲು ಮಾತ್ರ ಸಾಧ್ಯವಾಗುತ್ತದೆ.
ಆದ್ರೆ ಇಂದು ಐದು ಮಂದಿ ಕೋವಿಡ್ನಿಂದಾಗಿ ಮೃತಪಟ್ಟಿದ್ದರೆ, ಇತರೆ ಕಾರಣಗಳಿಂದ ಆರು ಜನರು ಸಾವಿಗೀಡಾಗಿದ್ದಾರೆ. ಅಲ್ಲಿಗೆ 11 ಜನರ ಅಂತ್ಯಕ್ರಿಯೆ ನೆರವೇರಿಸೋದೆ ಕಷ್ಟ ಎಂದು ಚಿತಾಗಾರ ಸಿಬ್ಬಂದಿ ಚಿಂತಾಕ್ರಾಂತರಾಗಿದ್ದಾರೆ. ಇಂದೇ ಅಂತ್ಯಕ್ರಿಯೆ ನೆರವೇರಿಸಿ ಕೊಡಿ ಎಂದು ಮೃತರ ಸಂಬಂಧಿಕರು ಗೋಗರೆಯುತ್ತಿದ್ದಾರೆ. ಹಾಸನದಲ್ಲಿ ಕೊರೊನಾ ಕಾಟ ಕೈಮೀರಿದ ಪರಿಸ್ಥಿತಿಯಿಂದಾಗಿ ಶವ ಸಂಸ್ಕಾರಕ್ಕೂ ಜನರು ಪರಿತಪಿಸುತ್ತಿದ್ದಾರೆ.
(villagers in bittagowdanahalli in hassan taluk finding difficulties in crematorium of people died of other than covid 19)