ಬೆಂಗಳೂರು: ದೆಹಲಿ ಪ್ರವಾಸ ಮುಗಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಕ್ಕೆ ವಾಪಸಾಗಿರುವ ಹೊತ್ತಲ್ಲೇ ಮಹತ್ವದ ಆದೇಶವೊಂದನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಒಕ್ಕಲಿಗ ಅಭಿವೃದ್ಧಿ ನಿಗಮ (Vokkaliga Development Corporation) ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಈ ಅಬಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ ಎಂದು ಸರ್ಕಾರದ ಅಧಿಕೃತ ಪ್ರಕಟನೆ ತಿಳಿಸಿದ್ದು ಒಟ್ಟು 500 ಕೋಟಿ ರೂಪಾಯಿಗಳನ್ನು ನಿಗಮದ ಚಟುವಟಿಕೆಗಳಿಗಾಗಿ ಮೀಸಲಿಡುವುದಾಗಿ ತಿಳಿಸಲಾಗಿದೆ. ಕಳೆದ ಬಜೆಟ್ನಲ್ಲಿಯೇ ಒಕ್ಕಲಿಗ ಅಭಿವೃದ್ಧಿ ನಿಗಮದ ಸ್ಥಾಪನೆ ಕುರಿತು ಪ್ರಸ್ತಾವನೆ ಮಾಡಲಾಗಿತ್ತು. ಆ ಪ್ರಸ್ತಾವನೆಯಂತೆಯೇ ರಾಜ್ಯ ಸರ್ಕಾರ ಇದೀಗ ಅಧಿಕೃತ ಆದೇಶ ಪ್ರಕಟಿಸಿದೆ.
ಒಕ್ಕಲಿಗ ಸಮುದಾಯದ ಹಿಂದುಳಿದ ವರ್ಗಗಳ ಮಿಸಲಾತಿ ಪಟ್ಟಿಯ ಪ್ರವರ್ಗ 3ಎನಲ್ಲಿಯ ಕ್ರಮ ಸಂಖ್ಯೆ 1ರ ಎಯಿಂದ ಟಿ ವರೆಗೆ ನಮೂದಾಗಿರುವ ಒಕ್ಕಲಿಗ, ವಕ್ಕಲಿಗ, ನಾಮಧಾರ್ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ಗಂಗಡ್ಕಾರ್ ಒಕ್ಕಲಿಗ ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ ಗೌಡ, (GOUDA) / ( GOWDA), ಹಳ್ಳಿಕಾರ್, ಕುಂಚಿಟಿಗ, ಗೌಡ, ಕಾಪು, ಹೆಗ್ಗಡೆ, ರಡ್ಡಿ, ಗೌಂಡರ್, ನಾಮಧಾರಿ ಗೌಡ, ಉಪ್ಪಿನ ಕೊಳಗ/ ಉತ್ತಮ ಕೊಳಗ ಜಾತಿಗಳಿಗೆ ಒಕ್ಕಲಿಗ ಅಭಿವೃದ್ಧಿ ನಿಗಮ ಶ್ರಮಿಸಲಿದೆ.
ಅನ್ನದಾತರೆನಿಸಿರುವ ಒಕ್ಕಲಿಗ ಸಮುದಾಯ ರಾಜ್ಯದ ಜನಸಂಖ್ಯೆಯಲ್ಲಿ ಶೇ. 17ರಷ್ಟಿದ್ದು ರಾಜ್ಯದ ಬೊಕ್ಕಸಕ್ಕೆ ಶೇ. 65ರಷ್ಟು ಆದಾಯವನ್ನು ಸಲ್ಲಿಸುವ ಮೂಲಕ ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಮುದಾಯದ ಅಭಿವೃದ್ಧಿಯ ದೃಷ್ಟಿಯಿಂದ ತ್ವರಿತವಾಗಿ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಮಾಡಬೇಕು ಎಂದು ಸಮುದಾಯ ಮತ್ತು ಸಮುದಾಯದ ಹಲವು ಸಂಘ ಸಂಸ್ಥೆಗಳ ಪರವಾಗಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.
ಇದನ್ನೂ ಓದಿ:
Karnataka Budget 2021: ಅಲ್ಪಸಂಖ್ಯಾತರಿಗೆ 1500 ಕೋಟಿ, ಒಕ್ಕಲಿಗ, ವೀರಶೈವ, ಪರಿಶಿಷ್ಟರಿಗೆ ತಲಾ 500 ಕೋಟಿ ಮೀಸಲು
ಒಕ್ಕಲಿಗ ನಿಗಮಕ್ಕೆ 1,000 ಕೋಟಿ ರೂ. ಅನುದಾನ ಮೀಸಲಿಡಬೇಕು -ಸರ್ಕಾರದ ಮುಂದೆ 4 ಬೇಡಿಕೆಗಳನ್ನಿಟ್ಟ ಸಮುದಾಯ
(vokkaliga development corporation announced by karnataka government)
Published On - 7:29 pm, Sat, 17 July 21