Karnataka Budget 2021: ಅಲ್ಪಸಂಖ್ಯಾತರಿಗೆ 1500 ಕೋಟಿ, ಒಕ್ಕಲಿಗ, ವೀರಶೈವ, ಪರಿಶಿಷ್ಟರಿಗೆ ತಲಾ 500 ಕೋಟಿ ಮೀಸಲು
Karnataka State Budget 2021: ಕ್ರಿಶ್ಚಿಯನ್ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ₹200 ಕೋಟಿ ರೂ. ನೀಡಲು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಜೈನ ಸಮುದಾಯವನ್ನು ಮರೆಯದ ಸಿಎಂ ಯಡಿಯೂರಪ್ಪ, ಶ್ರವಣಬೆಳಗೊಳ ಮತ್ತು ಇನ್ನಿತರ ಜೈನ ಪುಣ್ಯ ಕ್ಷೇತ್ರಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 50 ಕೋಟಿ ಒದಗಿಸಿದ್ದಾರೆ. ಇದೇ ಸಾಲಿನಲ್ಲಿ 20 ಕೋಟಿ ಅನುದಾನ ಒದಗಿಸುವುದಾಗಿ ಅವರು ತಿಳಿಸಿದ್ದಾರೆ.
ಬೆಂಗಳೂರು: ಕರ್ನಾಟಕದ 2021-22ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಕ್ಕಲಿಗ, ವೀರಶೈವ ಲಿಂಗಾಯತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗ ಮತ್ತು ಬ್ರಾಹ್ಮಣ ಸಮುದಾಯಕ್ಕೆ ಭರಪೂರ ಅನುದಾನ ನೀಡಿದ್ದಾರೆ. ಇತ್ತೀಚಿಗಷ್ಟೇ ಒಕ್ಕಲಿಗ ಸಮುದಾಯ ನೀಡಿದ್ದ ಮನವಿಯನ್ನು ಪುರಸ್ಕರಿಸಿರುವ ಒಕ್ಕಲಿಗ ಸಮುದಾಯಕ್ಕಾಗಿ ಹೊಸ ನಿಗಮ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ. ಜತೆಗೆ ಈ ಸಮುದಾಯಕ್ಕೆ ಸಂಬಂಧಿಸಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ರಾಜ್ಯದ ಬೊಕ್ಕಸದಿಂದ ಒಕ್ಕಲಿಗ ಸಮುದಾಯಕ್ಕೆ 500 ಕೋಟಿ ರೂ ತೆಗೆದಿಟ್ಟಿದ್ದಾರೆ. ರಾಜ್ಯದಲ್ಲಿ ಪ್ರಬಲವಾಗಿರುವ ವೀರಶೈವ ಲಿಂಗಾಯತ ಸಮುದಾಯಕ್ಕೂ ಬಜೆಟ್ 2021-22ರಲ್ಲಿ ಸಿಹಿ ದೊರೆತಿದೆ. ವೀರಶೈವ ಲಿಂಗಾಯತ ನಿಗಮಕ್ಕೆ ಬರೋಬ್ಬರಿ 500 ಕೋಟಿ ಅನುದಾನ ಘೋಷಿಸಿದ್ದಲ್ಲದೇ, ಈಗಾಗಲೇ 100 ಕೋಟಿ ಹಣವನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಠಗಳಿಗೆ ಅನುದಾನ ಸಿಎಂ ಯಡಿಯೂರಪ್ಪ ಹಿಂದಿನ ಬಜೆಟ್ಗಳಂತೆಯೇ ಮಠಗಳಿಗೆ ಅನುದಾನ ನೀಡುವುದು ಮುಂದುವರಿಸಿದ್ದಾರೆ. ಆದಿಚುಂಚನಗಿರಿ ನಾಥ ಪಾರಂಪರಿಕ ಕೇಂದ್ರಕ್ಕೆ ₹ 10 ಕೋಟಿ ಅನುದಾನ ನೀಡಲಾಗಿದೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಕಿತ್ತೂರು ಕೋಟೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ನಡೆಸಲು ₹ 50 ಕೋಟಿ ಅನುದಾನ ಒದಗಿಸಲಾಗಿದೆ. ವಿಜಯಪುರ ಜಿಲ್ಲೆ ಬಸನವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿರುವ ಜಗಜ್ಯೋತಿ ಬಸವಣ್ಣ ಜನ್ಮಸ್ಥಳ ಅಭಿವೃದ್ಧಿಗೆ ₹ 5 ಕೋಟಿ ಒದಗಿಸಲಾಗಿದೆ.ಕರ್ನಾಟಕದಿಂದ ಅಯೋಧ್ಯೆ ಯಾತ್ರೆಗೆ ತೆರಳುವವರಿಗೆ ಅನುಕೂಲ ಕಲ್ಪಿಸಲು ಶ್ರೀರಾಮ ಜನ್ಮಭೂಮಿಯಲ್ಲಿ ಕರ್ನಾಟಕದ ಯಾತ್ರಿ ನಿವಾಸ ನಿರ್ಮಾಣ ಮಾಡಲು ₹ 10 ಕೋಟಿ ಅನುದಾನ ನೀಡಲಾಗಿದೆ.
ಬ್ರಾಹ್ಮಣರಿಗೆಷ್ಟು? ಪ್ರಸ್ತುತ ಸುದ್ದಿಯಲ್ಲಿರುವ ಬ್ರಾಹ್ಮಣ ಅಭಿವೃದ್ಧಿ ನಿಗಮವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮರೆತಿಲ್ಲ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಚಟುವಟಿಕೆಗಳಿಗೆ 50 ಕೋಟಿ ನಿಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳನ್ನು ಮರೆಯದ ಸಿಎಂ ಸಿಎಂ ಯಡಿಯೂರಪ್ಪ ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳನ್ನು ಮರೆತಿಲ್ಲ. 2021-22ನೇ ಆರ್ಥಿಕ ವರ್ಷದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಒಟ್ಟಾರೆ 500 ಕೋಟಿ ಹಣ ಒದಗಿಸಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 150 ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಘೋಷಣೆ ಮಾಡಲಾಗಿದೆ.
ಅಲ್ಲದೇ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಸ್ವಂತ ಕಟ್ಟಡ ಹೊಂದಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಸಂಖ್ಯಾ ಬಲವನ್ನು ಶೇ5 ರಷ್ಟು ಹೆಚ್ಚಿಸಲಾಗಿದೆ. ಇದರಿಂದ 5000 ವಿದ್ಯಾರ್ಥಿಗಳಿಗೆ ಅನುಲಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂಕಿಅಂಶ ತೆರೆದಿಟ್ಟಿದ್ದಾರೆ. ಈ ಯೋಜನೆಗೆ 5 ಕೋಟಿ ಅನುದಾನವನ್ನು ಮಿಸಲಿಡಲಾಗಿದೆ. ಮಹರ್ಷಿ ವಾಲ್ಮೀಕಿ ಅವರ ಹೆಸರನ್ನು ಪರಿಶಿಷ್ಟ ಪಂಗಡದ ವಸತಿ ಶಾಲೆಗಳಿಗೆ ಇಡುವುದಾಗಿಯೂ ಬಜೆಟ್ನಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳ ಕ್ಷೇಮಪಾಲನೆ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಕ್ಷೇಮಪಾಲನೆಗಾಗಿ ವಿಶೇಷ ಯೋಜನೆ ರೂಪಿಸಿರುವ ಸಿಎಂ ಯಡಿಯೂರಪ್ಪ, ಶೈಕ್ಷಣಿಕ ಸೌಲಭ್ಯಗಳೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ತರಬೇತಿ ನೀಡಲು 5 ಕೋಟಿ ವೆಚ್ಚದಲ್ಲಿ ಪ್ರತಿ ವಿಭಾಗದಲ್ಲೂ ತಲಾ ಒಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ‘ಅದ್ವಿತೀಯ ಕ್ರೀಡಾ ಶಾಲೆ’ ಎಂದು ಉನ್ನತೀಕರಿಸಲು ಕ್ರಮ ಕೈಗೊಳ್ಳಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿಗಳಿಗೆ ಯೋಜನೆ/ಮಳಿಗೆ/ಡೀಲರ್ಶಿಪ್/ಪ್ರಾಂಚೈಸಿ ಮತ್ತು ಹೋಟೆಲ್ ಉದ್ಯಮ ಪ್ರಾರಂಭಿಸಲು ಹಾಲಿ ಜಾರಿಯಲ್ಲಿರುವ ಶೇ 4ರಷ್ಟು ಬಡ್ಡಿ ಸಹಾಯಧನದಡಿ ಒಂದು ಕೊಟಿಯವರೆಗೆ ಸಾಲ ಪಡೆಯಲು ಅವಕಾಶ ಒದಗಿಸಲಾಗಿದೆ. ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಗಳಡಿ ಒಟ್ಟಾರೆ 26,005 ಕೋಟಿ ಹಂಚಿಕೆ ಮಾಡಲಾಗಿದೆ.
ಅಲ್ಪಸಂಖ್ಯಾತರಿಗೆ 1500 ಕೋಟಿ ಅಲ್ಪಸಂಖ್ಯಾತ ಸಮುದಾಯಕ್ಕೂ ಭರಪೂರ ಅನುದಾನ ನೀಡಿರುವ ಸಿಎಂ ಬಿಎಸ್ವೈ ₹ 1,500 ಕೋಟಿ ರೂಪಾಯಿ ಒದಗಿಸಿದ್ದಾರೆ. ಬಜೆಟ್ ಮಂಡನೆ ವೇಳೆ ವಿಪಕ್ಷಗಳಿಗೆ ‘ಅಲ್ಪಸಂಖ್ಯಾತರಿಗೆ ಹಣ ಕೊಡುವುದಿಲ್ಲ ಅಂತೀರಲ್ಲ..ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹ 1,500 ಕೋಟಿ ಮೀಸಲಿಟ್ಟಿದ್ದೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎದುರೇಟು ನೀಡಿದರು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ/ ಮಾದರಿ ಶಾಲೆ/ ಕಾಲೇಜುಗಳಲ್ಲಿ ‘ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ’ ಅನುಷ್ಠಾನಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ.
ಕ್ರಿಶ್ಚಿಯನ್ರಿಗೆ, ಜೈನರಿಗೆ ಎಷ್ಟೆಷ್ಟು? ಕ್ರಿಶ್ಚಿಯನ್ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ₹200 ಕೋಟಿ ರೂ. ನೀಡಲು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಜೈನ ಸಮುದಾಯವನ್ನು ಮರೆಯದ ಸಿಎಂ ಯಡಿಯೂರಪ್ಪ, ಶ್ರವಣಬೆಳಗೊಳ ಮತ್ತು ಇನ್ನಿತರ ಜೈನ ಪುಣ್ಯ ಕ್ಷೇತ್ರಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 50 ಕೋಟಿ ಒದಗಿಸಿದ್ದಾರೆ. ಇದೇ ಸಾಲಿನಲ್ಲಿ 20 ಕೋಟಿ ಅನುದಾನ ಒದಗಿಸುವುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಬೆಂಗಳೂರಿಗೆ ಯಡಿಯೂರಪ್ಪ ಬಜೆಟ್ನಲ್ಲಿ ಸಿಕ್ಕಿದ್ದೇನು?