ರದ್ದಿ ಪೇಪರ್ ಮಾರಿ.. ಬಸ್ ನಿಲ್ದಾಣ ನಿರ್ಮಿಸಿದ ಧಾರವಾಡದ ವೀರ ಸಾವರಕರ ಗೆಳೆಯರ ಬಳಗ

ಬಸ್‌ಗಳಿಗೆ ಕಾಯುವ ವಿದ್ಯಾರ್ಥಿಗಳು ಮತ್ತು ಜನರಿಗೆ ಬಿಸಲು ಮತ್ತು ಮಳೆಯಿಂದ ರಕ್ಷಣೆ ಇಲ್ಲದಂತಾಗಿತ್ತು. ಇದನ್ನು ಗಮನಿಸಿದ ಬಳಗದ ಸದಸ್ಯರು ತಂಗುದಾಣ ನಿರ್ಮಿಸಲು ಚಿಂತಿಸಿದ್ದರು. ಆದರೆ ಹಣ ಸಂಗ್ರಹ ಹೇಗೆ ಎಂಬ ಚಿಂತೆ ಕಾಡಿದಾಗಲೇ ಕಸದಿಂದ ರಸ ಎಂಬ ಯೋಜನೆಯಡಿ ಸೇವಾ ಕಾರ್ಯ ನಡೆಸಲು ಚಿಂತಿಸಿದ್ದರು.

  • ನರಸಿಂಹಮೂರ್ತಿ ಪ್ಯಾಟಿ
  • Published On - 15:40 PM, 8 Mar 2021
ರದ್ದಿ ಪೇಪರ್ ಮಾರಿ.. ಬಸ್ ನಿಲ್ದಾಣ ನಿರ್ಮಿಸಿದ ಧಾರವಾಡದ ವೀರ ಸಾವರಕರ ಗೆಳೆಯರ ಬಳಗ
ವೀರ ಗೆಳೆಯರ ಸಾವರಕರ ಗೆಳೆಯರ ಬಳಗದ ಬಸ್ ನಿಲ್ದಾಣ

ಧಾರವಾಡ: ಎಲ್ಲದಕ್ಕೂ ಸರ್ಕಾರದ ಮೇಲೆಯೇ ಅವಲಂಬಿತವಾಗಬಾರದು. ಎಲ್ಲರೂ ಕೊಂಚ ಸಹಾಯ ಮಾಡಿದರೂ ಸಾಕು ಎಂಥ ಕೆಲಸವನ್ನಾದರೂ ಮಾಡಬಹುದು ಎನ್ನುವುದನ್ನು ಜಿಲ್ಲೆಯ ವೀರ ಸಾವರಕರ ಗೆಳೆಯರ ಬಳಗದ ಯುವಕರು ಸಾಧಿಸಿ ತೋರಿಸಿದ್ದಾರೆ. ಆ ಮೂಲಕ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ರದ್ದಿ ಪೇಪರ್ ಮಾರಿ ಬಸ್ ನಿಲ್ದಾಣ
ನಗರದ ಮಾಳಮಡ್ಡಿ ಬಡಾವಣೆಯ ವೀರ ಸಾವರಕರ  ಗೆಳೆಯರ ಬಳಗ ಮನೆ ಮನೆಗೆ ತೆರಳಿ ರದ್ದಿ ಪೇಪರ್ ಸಂಗ್ರಹಿಸಿ, ಅದನ್ನು ಮಾರಿದ ಹಣದಲ್ಲಿ ವನವಾಸಿ ಶ್ರೀರಾಮ ಮಂದಿರ ಬಳಿ ಬಸ್ ತಂಗುದಾಣ ನಿರ್ಮಿಸಿ ಪ್ರಯಾಣಿಕರಿಗೆ ಆಶ್ರಯ ಕಲ್ಪಿಸಿದೆ. ಈ ತಂಡ ಸುಮಾರು ಒಂದು ವರ್ಷ ಸಿದ್ಧತೆ ನಡೆಸಿ ನಿರ್ಮಿಸಿದ ಬಸ್ ತಂಗುದಾಣ ನಿನ್ನೆ (ಮಾರ್ಚ್ 8) ಲೋಕಾರ್ಪಣೆಗೊಂಡಿದೆ.

ಮಂದಿರ ಬಳಿ ಬಸ್‌ಗಳಿಗೆ ಕಾಯುವ ವಿದ್ಯಾರ್ಥಿಗಳು ಮತ್ತು ಜನರಿಗೆ ಬಿಸಲು ಮತ್ತು ಮಳೆಯಿಂದ ರಕ್ಷಣೆ ಇಲ್ಲದಂತಾಗಿತ್ತು. ಇದನ್ನು ಗಮನಿಸಿದ ಬಳಗದ ಸದಸ್ಯರು ತಂಗುದಾಣ ನಿರ್ಮಿಸಲು ಚಿಂತಿಸಿದ್ದರು. ಆದರೆ ಹಣ ಸಂಗ್ರಹ ಹೇಗೆ ಎಂಬ ಚಿಂತೆ ಕಾಡಿದಾಗಲೇ ಕಸದಿಂದ ರಸ ಎಂಬ ಯೋಜನೆಯಡಿ ಸೇವಾ ಕಾರ್ಯ ನಡೆಸಲು ಚಿಂತಿಸಿದ್ದರು.

ಬಸ್ ನಿಲ್ದಾಣವನ್ನು ಉದ್ಘಾಟಿಸಿದ ಶಾಸಕ ಅರವಿಂದ ಬೆಲ್ಲದ

ಒಂದು ವರ್ಷದ ಯೋಜನೆ, 10 ಸಾವಿರ ಕೆಜಿ ರದ್ದಿ
ಒಂದು ವರ್ಷದ ಹಿಂದೆ ರೂಪಿಸಿದ ಈ ಯೋಜನೆಯಲ್ಲಿ ಮಾಳಮಡ್ಡಿ, ಶಿವಗಿರಿ, ಸಪ್ತಾಪುರ, ಗಾಂಧಿನಗರ ಸೇರಿ ನಗರದ ವಿವಿಧ ಬಡಾವಣೆಗಳ ಸಾವಿರಾರು ಮನೆಗಳಿಂದ ದಾನದ ರೂಪದಲ್ಲಿ ಸುಮಾರು 10 ಸಾವಿರ ಕೆಜಿ ರದ್ದಿ ಪೇಪರ್ ಸಂಗ್ರಹಿಸಿದ್ದಾರೆ. ಈ ರದ್ದಿ ಮಾರಿ ಸಂಗ್ರಹವಾದ ಅಂದಾಜು 1 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ತಂಗುದಾಣ ನಿರ್ಮಿಸಲಾಗಿದೆ. ಹೀಗೆ ಯುವಕರ ಶ್ರಮ ಹಾಗೂ ಸಾರ್ವಜನಿಕರ ದಾನದಿಂದ ನಿರ್ಮಿಸಲಾದ ಈ ಬಸ್ ನಿಲ್ದಾಣವನ್ನು ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಬಸಲಿಂಗಪ್ಪ ಬೀಡಿ, ಬಿಜೆಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಜಯತೀರ್ಥ ಕಟ್ಟಿ, ಸಂಚಾರಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ.ಎಸ್. ಹೊಸಮನಿ ಉಪಸ್ಥಿತರಿದ್ದರು.

ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸಲು ಕಸದಿಂದ ರಸ ಎಂಬ ಯೋಜನೆಯನ್ನು ಒಂದು ವರ್ಷದ ಹಿಂದೆ ರೂಪಿಸಲಾಗಿತ್ತು. ಪ್ರತಿ ಮನೆ ಮನೆಗೆ ತಲುಪಿ ರದ್ದಿ ಪೇಪರ್ ನೀಡುವಂತೆ ಮನವಿ ಮಾಡಲಾಗಿತ್ತು. ಹೀಗೆ ಅವರು ನೀಡಿದ ಕಸದಿಂದಲೇ ತಂಗುದಾಣ ನಿರ್ಮಿಸಲಾಗಿದೆ ಎಂದು ವೀರ ಸಾವರಕರ ಗೆಳೆಯರ ಬಳಗದ ಸದಸ್ಯ ಗುರುದತ್ತ ದೇಶಪಾಂಡೆ ರದ್ದಿ ಪೇಪರ್ ಸಂಗ್ರಹಣೆಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಇದುವರೆಗೂ ಈ ಬಳಗ ವನಮಹೋತ್ಸವ, ಸಾಂಸ್ಕೃತಿಕ ಗಣೇಶೋತ್ಸವ, ನೆರೆ ಪರಿಹಾರ ವಿತರಣೆ ಸೇರಿ ಅನೇಕ ಸೇವಾ ಕಾರ್ಯಗಳನ್ನು ಮಾಡಿದೆ. ಇಂಥ ಅನೇಕ ಕಾರ್ಯಗಳ ನಡುವೆಯೇ ಈ ತಂಗುದಾಣ ನಿರ್ಮಾಣ ಸಾಕಷ್ಟು ಗಮನ ಸೆಳೆಯುವಂತಾಗಿದೆ. ಯುವಕರು ಮನಸ್ಸು ಮಾಡಿದರೆ ಹೊಸ ಹೊಸ ಪ್ರಯೋಗಗಳ ಮೂಲಕ ಇಂಥ ಸಮಾಜಮುಖಿ ಕಾರ್ಯಗಳನ್ನು ಕೂಡ ಮಾಡಬಹುದು ಎನ್ನುವುದಕ್ಕೆ ಈ ಬಸ್ ನಿಲ್ದಾಣವೇ ಸಾಕ್ಷಿ.

ಇದನ್ನೂ ಓದಿ:

ಬೇಂದ್ರೆ ಕುರಿತು ಬರೆದಿರುವ ಲೇಖನಗಳ ಸಂಗ್ರಹ ಕೃತಿ ‘ಕಂಡವರಿಗಷ್ಟೆ’ ಬಿಡುಗಡೆ: ಬೇಂದ್ರೆಗೆ ಸಮಾನರಾದ ಕವಿ ಯಾರೂ ಇಲ್ಲ -ಸಾಹಿತಿಗಳ ಬಣ್ಣನೆ

ಮಹಿಳಾ ದಿನಾಚರಣೆ 2021: ‘ಕ್ರೀಡೆಯಲ್ಲಿ ಸಾಧನೆ ಸುಲಭವಲ್ಲ..‘ ಅಂತರಾಷ್ಟ್ರೀಯ ಹೈಜಂಪ್​ ಕ್ರೀಡಾಪಟು ಸಹನಾಕುಮಾರಿ ಮನದಾಳ