ಬೆಂಗಳೂರು: ಉಪಚುನಾವಣೆಯಲ್ಲಿ ಅನರ್ಹ ಶಾಸಕರ ಸ್ಪರ್ಧೆಗೆ ತಕರಾರು ಇಲ್ಲ ಎಂದು ಚುನಾವಣಾ ಆಯೋಗದ ಪರ ವಕೀಲರು ಹೇಳಿದ್ದಾರೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಬೇಲಿಯೇ ಎದ್ದು ಹೊಲ ಮೇಯ್ದಿದೆ ಎನ್ನುವುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ ಎಂದು ಆರೋಪಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ಪಾರದರ್ಶಕವಾಗಿ ನಡೆಯುವ ಜವಾಬ್ದಾರಿ ಇದೆ. ಆದರೆ ಚುನಾವಣಾ ಆಯೋಗ ಕೇಂದ್ರ ಬಿಜೆಪಿ ಸರ್ಕಾರದ ಒಂದು ವಿಂಗ್ ತರಹ ಕೆಲಸ ಮಾಡಿದೆ. ಇಂದು ಸುಪ್ರೀಂಕೋರ್ಟ್ನಲ್ಲಿ ನಡೆದ ಬೆಳವಣಿಗೆಗಳು ಇದಕ್ಕೆ ಸಾಕ್ಷಿ. ಬಿಜೆಪಿಯ ಕಪಿಮುಷ್ಠಿಯಲ್ಲಿ ಚುನಾವಣಾ ಆಯೋಗ ಇದ್ದಂತೆ ಕಾಣಸ್ತಿದೆ ಎಂದು ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ.
ಚುನಾವಣಾ ಆಯೋಗ ಒಂದು ಪಕ್ಷ ಅಲ್ಲ:
ಇಂದು ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಇತ್ತು. ನ್ಯಾಯಾಲಯದ ಮುಂದೆ ಚುನಾವಣಾ ಆಯೋಗದ ಪರವಾಗಿ ರಾಕೇಶ್ ದ್ವಿವೇದಿ ಹಾಜರಾಗಿದ್ದರು. ಆದ್ರೆ ಈ ಪ್ರಕರಣದಲ್ಲಿ ಚುನಾವಣಾ ಆಯೋಗ ಪಕ್ಷ ಅಲ್ಲವೇ ಅಲ್ಲ. ಆದ್ರೂ ಸಹ ವಕೀಲರು ಹಾಜರಾಗಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ಹೋಗಿ ಒತ್ತಡ ತಂದಿದ್ದಾರೆ. ಹೀಗಾಗಿ ಪಿಎಂ ಮೋದಿ, ಅಮಿತ್ ಶಾ ನಿರ್ದೇಶನದ ಮೇರೆಗೆ ಚುನಾವಣಾ ಆಯೋಗದ ವಕೀಲರು ಹಾಜರಾಗಿದ್ದಾರೆ. ಇದರರ್ಥ ಸುಪ್ರೀಂಕೋರ್ಟ್ ಮೇಲೂ ಪ್ರಭಾವ ಬೀರುವ ಕೆಲಸ ಆಗಿದೆ ಎಂದರು.
ಹಾಲಿ ಸ್ಪೀಕರ್ಗೆ ಸುಪ್ರೀಂ ನೋಟಿಸ್ ನೀಡಿಲ್ಲ:
ನಮ್ಮ ರಾಜ್ಯದ ಚುನಾವಣಾ ಆಯೋಗದ ಆಯುಕ್ತರು ಅನರ್ಹರು ಸ್ಪರ್ಧೆ ಮಾಡೋದಕ್ಕೆ ಅರ್ಹರಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದ್ರೆ, ಕೇಂದ್ರ ಚುನಾವಣಾ ಆಯೋಗದ ವಕೀಲರು ಈ ವಿಚಾರದಲ್ಲಿ ಬೇರೆ ಮಾತುಗಳನ್ನ ಹೇಳ್ತಿದ್ದಾರೆ. ಅವರೇ ವಿಚಾರವನ್ನು ತುರ್ತಾಗಿ ಕೈಗೆತ್ತಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಆದ್ರೆ ಹಾಲಿ ಸ್ಪೀಕರ್ಗೆ ಇದುವರೆಗೂ ಸುಪ್ರೀಂಕೋರ್ಟ್ನಿಂದ ನೋಟಿಸ್ ಬಂದಿಲ್ಲ. ಆದರೂ ಸ್ಪೀಕರ್ ಪರವಾಗಿ ಅಧಿಕಾರಿಗಳು ದೆಹಲಿಗೆ ಹೋಗಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನತಾ ಕೋರ್ಟ್ನಲ್ಲಿ ಅಂತಿಮ ತೀರ್ಮಾನ:
ಇದು ಹೀಗೇ ಮುಂದುವರಿದರೆ ಜನತಾ ನ್ಯಾಯಾಲಯದಲ್ಲೇ ಅಂತಿಮ ತೀರ್ಮಾನ ಆಗಬೇಕಾಗುತ್ತದೆ. ಈ ಕುರಿತು ನಮ್ಮ ಪರ ವಕೀಲ ಕಪಿಲ್ ಸಿಬಲ್ ಅತ್ಯಂತ ಸ್ಪಷ್ಟವಾಗಿ ಕೋರ್ಟ್ಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಚುನಾವಣೆ ಆಯೋಗ ಸುಮೋಟೋ ಆಗಿ ಕೋರ್ಟ್ ಮುಂದೆ ಹಾಜರಾಗಿದ್ದು ಎಷ್ಟು ಸರಿ.? ಯಡಿಯೂರಪ್ಪ ದೆಹಲಿಗೆ ಹೋಗಿದ್ದು ಇದೇ ಸಂದೇಶ ಕಳಿಸುವುದಕ್ಕೆ ಅನಿಸುತ್ತಿದೆ. ಈ ದೇಶದಲ್ಲಿ ಚುನಾವಣೆಗಳು ಹೆಸರಿಗೆ ಮಾತ್ರ ನಡೆಯುತ್ತಿವೆ. ಇದು ಚುನಾವಣೆ ಆಯೋಗದಿಂದಲೇ ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ವಿ.ಎಸ್.ಉಗ್ರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.
Published On - 5:49 pm, Mon, 23 September 19