ನೀರು ಪೋಲು ಮಾಡಿದರೆ ಹುಷಾರ್: ಧಾರವಾಡ ಗ್ರಾಮವೊಂದರಲ್ಲಿ ಅಭಿಯಾನ

|

Updated on: Mar 21, 2021 | 2:54 PM

ಧಾರವಾಡ: ಎಲ್ಲೆಡೆ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದೆ. ಅದಕ್ಕೆ ವಿದ್ಯಾಕಾಶಿ ಧಾರವಾಡವೇನೂ ಹೊರತಾಗಿಲ್ಲ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿರುವಂತೆಯೇ ಗ್ರಾಮೀಣ ಪ್ರದೇಶದ ಜನರಲ್ಲಿ ಆತಂಕದ ಛಾಯೆ ಮೂಡುತ್ತಿದೆ. ಇದಕ್ಕೆ ಕಾರಣ ನೀರಿನ ಅಭಾವ. ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಉಲ್ಬಣಿಸುತ್ತಾ ಹೋಗುತ್ತದೆ. ಇದು ನೇರವಾಗಿ ಪರಿಣಾಮ ಬೀರುವುದು ಕುಡಿಯುವ ನೀರಿನ ಪೂರೈಕೆ ಮೇಲೆ. ಇಂಥಹ ವೇಳೆ ಜನರು ಕೂಡ ನೀರಿನ ಮಹತ್ವವನ್ನು ಅರಿತು ನೀರನ್ನು ಪೋಲು ಮಾಡದೇ ಮಿತವಾಗಿ ಬಳಕೆ ಮಾಡುವತ್ತ ಗಮನ […]

ನೀರು ಪೋಲು ಮಾಡಿದರೆ ಹುಷಾರ್: ಧಾರವಾಡ ಗ್ರಾಮವೊಂದರಲ್ಲಿ ಅಭಿಯಾನ
ಮನೆ ಮನೆಗೆ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ಕೈಗೊಳ್ಳಲಾಯಿತು
Follow us on

ಧಾರವಾಡ: ಎಲ್ಲೆಡೆ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದೆ. ಅದಕ್ಕೆ ವಿದ್ಯಾಕಾಶಿ ಧಾರವಾಡವೇನೂ ಹೊರತಾಗಿಲ್ಲ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿರುವಂತೆಯೇ ಗ್ರಾಮೀಣ ಪ್ರದೇಶದ ಜನರಲ್ಲಿ ಆತಂಕದ ಛಾಯೆ ಮೂಡುತ್ತಿದೆ. ಇದಕ್ಕೆ ಕಾರಣ ನೀರಿನ ಅಭಾವ. ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಉಲ್ಬಣಿಸುತ್ತಾ ಹೋಗುತ್ತದೆ. ಇದು ನೇರವಾಗಿ ಪರಿಣಾಮ ಬೀರುವುದು ಕುಡಿಯುವ ನೀರಿನ ಪೂರೈಕೆ ಮೇಲೆ. ಇಂಥಹ ವೇಳೆ ಜನರು ಕೂಡ ನೀರಿನ ಮಹತ್ವವನ್ನು ಅರಿತು ನೀರನ್ನು ಪೋಲು ಮಾಡದೇ ಮಿತವಾಗಿ ಬಳಕೆ ಮಾಡುವತ್ತ ಗಮನ ಹರಿಸಬೇಕು. ಈ ಅಂಶವನ್ನು ಜನರಿಗೆ ಮುಟ್ಟಿಸಲು ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಜಾಗೃತಿ ಅಭಿಯಾನವನ್ನೇ ಆರಂಭಿಸಲಾಗಿದೆ.

ನೀರು ಅಮೂಲ್ಯ: ಅದರ ಮಹತ್ವ ಅರಿಯಿರಿ
ಗ್ರಾಮದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಹಲವಾರು ಕಡೆಗಳಲ್ಲಿ ಗ್ರಾಮ ಪಂಚಾಯತಿ ವತಿಯಿಂದ ನಲ್ಲಿಗಳನ್ನು ಅಳವಡಿಸಲಾಗಿದೆ. ಆದರೆ ಎಷ್ಟೋ ನಲ್ಲಿಗಳಿಗೆ ನೀರನ್ನು ನಿಲ್ಲಿಸಲು ವ್ಯವಸ್ಥೆಯೇ ಇಲ್ಲ. ಹೀಗಾಗಿ ನೀರು ನಿರಂತರವಾಗಿ ಹರಿದು ಹೋಗುತ್ತಲೇ ಇರುತ್ತದೆ. ಇದನ್ನು ಗಮನಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರವ್ವ, ಉಪಾಧ್ಯಕ್ಷೆ ಲಕ್ಷ್ಮೀ ಗಳಗಿ, ಸದಸ್ಯರು ಹಾಗೂ ಪಿಡಿಒ ಆರ್.ಸಿ.ಚಲವಾದಿರವರು ಇದಕ್ಕೊಂದು ಜಾಗೃತಿ ಅಭಿಯಾನದ ಅವಶ್ಯಕತೆ ಇದೆ ಎಂದು ಮನಗಂಡರು.

ಜನರಿಗೆ ಎಚ್ಚರಿಕೆ
ಎಷ್ಟೋ ಕಡೆಗಳಲ್ಲಿ ಪೈಪ್ ಒಡೆದು ನಲ್ಲಿಯಿಂದ ನೀರು ಪೋಲಾಗುತ್ತಲೇ ಇತ್ತು. ಅವುಗಳನ್ನು ಹುಡುಕಿ ಅಂಥಹ ನಲ್ಲಿಗಳಿಗೆ ಹೊಸ ಪೈಪ್ ಜೋಡಿಸಿದರು. ಇನ್ನು ಅನೇಕರ ಮನೆ ಮುಂದಿನ ನಲ್ಲಿಗಳಿಗೆ ಬಂದ್ ಕ್ಯಾಪ್​ಗಳೆ ಇರಲಿಲ್ಲ. ಅಂಥವರ ಮನೆಗೆ ಹೋಗಿ ಅವುಗಳಿಗೆ ಕ್ಯಾಪ್ ಅಳವಡಿಸಿದ್ದಲ್ಲದೇ ಮನೆಯವರಿಗೆ ಎಚ್ಚರಿಕೆಯನ್ನು ಕೂಡ ನೀಡಲಾಯಿತು. ಒಂದು ವೇಳೆ ನೀರನ್ನು ಪೋಲು ಮಾಡಿದರೆ ನಿಮ್ಮ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಲ್ಲಿಗಳಿಗೆ ಹೊಸ ಪೈಪ್ ಜೋಡಿಸಲಾಯಿತು

ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರವ್ವ, ಉಪಾಧ್ಯಕ್ಷೆ ಲಕ್ಷ್ಮೀ ಗಳಗಿ, ಸದಸ್ಯರು, ಪಿಡಿಒ ಆರ್.ಸಿ.ಚಲವಾದಿ ಹಾಗೂ ಗ್ರಾಮದ ಅನೇಕರು ಎಲ್ಲ ಮನೆಗಳಿಗೂ ತೆರಳಿ ನೀರಿನ ಮಹತ್ವ, ಅದನ್ನು ಪೂರೈಸಲು ಸರ್ಕಾರ ಪಡುತ್ತಿರುವ ಕಷ್ಟ, ಅದಕ್ಕಾಗುತ್ತಿರುವ ಖರ್ಚಿನ ಬಗ್ಗೆಯೂ ಮಾಹಿತಿ ನೀಡಿದರು. ನೀರನ್ನು ಮಿತವಾಗಿ ಬಳಸುವುದು ಹಾಗೂ ಪೋಲಾಗದಂತೆ ತಡೆಯುವುದರಿಂದ ಸರ್ಕಾರಕ್ಕೆ ಆಗುವ ಉಳಿತಾಯದ ಬಗ್ಗೆಯೂ ಮಾಹಿತಿ ನೀಡಿದರು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನೀರನ್ನು ಆದಷ್ಟು ಉಳಿಸಿಕೊಳ್ಳಲು ಯತ್ನಿಸುವಂತೆಯೂ ಮನವಿ ಮಾಡಿಕೊಂಡರು.

ನೀರಿನ ಮೌಲ್ಯದ ಬಗ್ಗೆ ಮೈಕ್​ನಲ್ಲಿ ಜಾಗೃತಿ ಮೂಡಿಸಲಾಯಿತು

ನೀರು ಪೂರೈಸುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ನಾವು ಪಡುತ್ತಿರುವ ಕಷ್ಟ ನಮಗೆ ಗೊತ್ತು. ಆದರೆ ನೀರನ್ನು ಪೋಲು ಮಾಡಿದರೆ ತುಂಬಾನೇ ಕಷ್ಟ. ಇದೀಗ ಬೇಸಿಗೆ ಶುರುವಾಗಿದೆ. ನೀರಿನ ಹಾಹಾಕಾರ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಸಾಕಷ್ಟಿದೆ. ಜನರು ಕೂಡ ನಮ್ಮ ಮನವಿಗೆ ಸ್ಪಂದಿಸುತ್ತಿದ್ದಾರೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾರವ್ವ ಹೇಳಿದರು.

ಇದನ್ನೂ ಓದಿ

ಕೊಡಗಿನ ಚೆಕ್​ಪೋಸ್ಟ್​​ಗಳಲ್ಲಿ ನಕಲಿ ಆರ್​ಟಿಪಿಸಿಆರ್​ ವರದಿ ತೋರಿಸಿ ಸಿಕ್ಕಿಬಿದ್ದ ಕೇರಳಿಗರು; ಅಲ್ಲಿಂದಲೇ ವಾಪಸ್ ಕಳಿಸಿದ ಪೊಲೀಸರು

ಪದವೀಧರರ ಹೈಟೆಕ್ ಕೃಷಿ; ಲಕ್ಷ ಲಕ್ಷ ರೂ. ನಿರೀಕ್ಷೆಯಲ್ಲಿರುವ ಯಾದಗಿರಿ ಯುವ ರೈತರು