ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಹೇಳಿದ್ದೇನು? ಇಲ್ಲಿದೆ ವಿವರ

| Updated By: ಗಣಪತಿ ಶರ್ಮ

Updated on: Sep 15, 2023 | 6:28 PM

Chaitra Kundapura Case: ಈಗ ಚೈತ್ರಾ ತೀವ್ರ ನಿಗಾ ಘಟಕದಲ್ಲಿ ಇದ್ದು, ಪ್ರಜ್ಞೆ ಮರುಕಳಿಸುತ್ತಿದೆ. ಸಿಸಿಬಿ ಅಧಿಕಾರಿಗಳು ಆಕೆ ಜತೆಗೆ ಇದ್ದಾರೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಸರಿಯಾಗಿ ಪ್ರಜ್ಞೆ ಬಂದ ಕೂಡಲೇ ವಾರ್ಡ್​​ಗೆ ಶಿಫ್ಟ್ ಮಾಡುತ್ತೇವೆ ಎಂದು ಬಾಲಾಜಿ ಪೈ ತಿಳಿಸಿದ್ದಾರೆ.

ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಹೇಳಿದ್ದೇನು? ಇಲ್ಲಿದೆ ವಿವರ
ಚೈತ್ರಾ ಕುಂದಾಪುರ
Follow us on

ಬೆಂಗಳೂರು, ಸೆಪ್ಟೆಂಬರ್ 15: ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಚೈತ್ರಾ ಕುಂದಾಪುರ (Chaitra Kundapura) ಅವರನ್ನು ಅಸ್ವಸ್ಥಗೊಂಡ ಕಾರಣ ಶುಕ್ರವಾರ ಬೆಳಗ್ಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ದಾಖಲಿಸಲಾಗಿತ್ತು. ಸಂಜೆ ವೇಳೆಗೆ ಆಕೆಯ ಆರೋಗ್ಯದ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮ ಕೇರ್ ಸೆಂಟರ್​​ನ ವಿಶೇಷ ಅಧಿಕಾರಿ ಡಾಕ್ಟರ್ ಬಾಲಾಜಿ ಪೈ ಮಾಹಿತಿ ನೀಡಿದ್ದು, ಚೈತ್ರಾ ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ ಪ್ರಜ್ಞಾಹೀನರಾಗಿ ಇದ್ದರು. ಚಿಕಿತ್ಸೆ ನೀಡಿದ್ದೇವೆ. ಸಿಟಿ ಸ್ಕ್ಯಾನ್ ಮಾಡಿದ್ದೇವೆ. ಈಗ ಪ್ರಜ್ಞೆ ಬರುತ್ತಾ ಇದೆ. ಫಿಟ್ಸ್ ಬಂದಿತ್ತೇ ಎಂಬುದು ತಿಳಿದಿಲ್ಲ. ಮುಂಚೆಯೇ ಆಕೆಗೆ ಈ ಸಮಸ್ಯೆ ಇತ್ತು ಎಂದು ಆಕೆಯ ಸ್ನೇಹಿತರು ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈಗ ಚೈತ್ರಾ ತೀವ್ರ ನಿಗಾ ಘಟಕದಲ್ಲಿ ಇದ್ದು, ಪ್ರಜ್ಞೆ ಮರುಕಳಿಸುತ್ತಿದೆ. ಸಿಸಿಬಿ ಅಧಿಕಾರಿಗಳು ಆಕೆ ಜತೆಗೆ ಇದ್ದಾರೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಸರಿಯಾಗಿ ಪ್ರಜ್ಞೆ ಬಂದ ಕೂಡಲೇ ವಾರ್ಡ್​​ಗೆ ಶಿಫ್ಟ್ ಮಾಡುತ್ತೇವೆ ಎಂದು ಬಾಲಾಜಿ ಪೈ ತಿಳಿಸಿದ್ದಾರೆ.

ಈ ಮಧ್ಯೆ, ಚೈತ್ರಾ ಕುಂದಾಪುರ ಅವರನ್ನು ಎಲ್ಲ ರೀತಿಯ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಎಬಿಜಿ, ಆರ್​ಬಿಎಸ್ ಮತ್ತು ಇಸಿಜಿ ಸಾಮಾನ್ಯವಾಗಿದೆ. ಸಿಟಿ ಸ್ಕ್ಯಾನ್ ವರದಿಯೂ ಸಕಾರಾತ್ಮಕವಾಗಿದೆ. ಪ್ರಸ್ತುತ ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: ಸಾಬೂನು ನೊರೆ ಬಾಯಿಗೆ ಹಾಕಿ ಮೂರ್ಛೆ ಬಂದಂತೆ ನಟನೆ; ಚೈತ್ರಾ ಕುಂದಾಪುರ ನಾಟಕಕ್ಕೆ ಸಿಸಿಬಿ ಪೊಲೀಸರು ಸುಸ್ತು

ಹೆಚ್ಚಿನ ವಿಚಾರಣೆಗಾಗಿ ಆಕೆಯನ್ನು ಇನ್ನಷ್ಟೇ ಸಿಸಿಬಿ ಕಚೇರಿಗೆ ಕರೆದೊಯ್ಯಬೇಕಿದೆ. ಏತನ್ಮಧ್ಯೆ, ದೂರುದಾರ ಗೋವಿಂದ್ ಬಾಬು ಅವರು ಪೊಲೀಸರಿಗೆ ಸಾಕ್ಷ್ಯದ ಪೆನ್ ಡ್ರೈವ್ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಕೊಪ್ಪಳ: ಉದ್ಯಮಿ ಗೋವಿಂದ ಪೂಜಾರಿ ರೀತಿಯಲ್ಲೆ ಟಿಕೆಟ್​ಗಾಗಿ ಲಕ್ಷ ಲಕ್ಷ ಕಳೆದುಕೊಂಡ ಬಿಜೆಪಿ ಮುಖಂಡ

ತನಗೆ ಬಿಜೆಪಿ ಶಾಸಕ ಟಿಕೆಟ್ ಭರವಸೆ ನೀಡಿ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿ ಚೈತ್ರಾ ಮತ್ತು ಆಕೆಯ ಸಹಚರರ ವಿರುದ್ಧ ದೂರು ದಾಖಲಿಸಿರುವ ಗೋವಿಂದ್ ಬಾಬು ಅವರು ಸಿಸಿಬಿ ಪೊಲೀಸರಿಗೆ ಪುರಾವೆಯನ್ನು ಸಲ್ಲಿಸಿದ್ದಾರೆ. ಪೆನ್‌ಡ್ರೈವ್‌ನಲ್ಲಿ ಆರೋಪಿಗಳ ಜತೆಗಿನ ದೂರವಾಣಿ ಸಂಭಾಷಣೆ ಇದೆ ಎನ್ನಲಾಗಿದೆ. ಆರೋಪಿಗಳು ಅನುಮಾನಾಸ್ಪದವಾಗಿ ಕಂಡ ನಂತರ ಗೋವಿಂದ್ ಬಾಬು ಅವರೊಂದಿಗಿನ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿದ್ದಾರೆ ಎಂದು ವರದಿಯಾಗಿದೆ. ಅವರು ಸಲ್ಲಿಸಿರುವ ಸಾಕ್ಷ್ಯಾಧಾರಗಳ ಪರಿಶೀಲನೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ