ಗುತ್ತಿಗೆದಾರರಿಗೆ ಯಾಕೆ ಬಿಲ್ ಬಿಡುಗಡೆಯಾಗುತ್ತಿಲ್ಲ? ಕಾರಣ ಕೊಟ್ಟ ಹಣಕಾಸು ಇಲಾಖೆ ಕಾರ್ಯದರ್ಶಿ

33,000 ಕೋಟಿ ರೂ.ಗಳ ಬಾಕಿ ಬಿಲ್‌ಗಳನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಇತ್ತೀಚೆಗೆ ಕರ್ನಾಟಕ ಗುತ್ತಿಗೆದಾರರ ಸಂಘ ಆರೋಪಿಸಿತ್ತು. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿತ್ತು. ಆದರೆ, ಹಣ ಯಾಕೆ ಬಿಡುಗಡೆಯಾಗುತ್ತಿಲ್ಲ ಎಂಬುದಕ್ಕೆ ಹಣಕಾಸು ಕಾರ್ಯದರ್ಶಿ ಈಗ ಸ್ಪಷ್ಟನೆ ನೀಡಿದ್ದಾರೆ. ಏನದು? ವಿವರಗಳಿಗೆ ಮುಂದೆ ಓದಿ.

ಗುತ್ತಿಗೆದಾರರಿಗೆ ಯಾಕೆ ಬಿಲ್ ಬಿಡುಗಡೆಯಾಗುತ್ತಿಲ್ಲ? ಕಾರಣ ಕೊಟ್ಟ ಹಣಕಾಸು ಇಲಾಖೆ ಕಾರ್ಯದರ್ಶಿ
ಸಾಂದರ್ಭಿಕ ಚಿತ್ರ

Updated on: Nov 06, 2025 | 9:28 AM

ಬೆಂಗಳೂರು, ನವೆಂಬರ್ 6: ಸರ್ಕಾರಿ ಇಲಾಖೆಗಳು ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್​ಮೆಂಟ್ ಪೋರ್ಟಲ್​ಗೆ (KPPP) ಅನುಷ್ಠಾನಗೊಳಿಸಲಾಗುತ್ತಿರುವ ಕಾಮಗಾರಿಗಳ ವಿವರಗಳನ್ನು ಅಪ್‌ಲೋಡ್ ಮಾಡಿದರೆ ಮಾತ್ರ ಹಣ ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಕಾರ್ಯದರ್ಶಿ (ಬಜೆಟ್ ಮತ್ತು ಹಂಚಿಕೆ) ಪಿಸಿ ಜಾಫರ್ ಹೇಳಿದ್ದಾರೆ. ವಿವಿಧ ಸರ್ಕಾರಿ ಇಲಾಖೆಗಳು KPPP ಪೋರ್ಟಲ್​ಗೆ ಕಾಮಗಾರಿಗಳ ವಿವರಗಳನ್ನು ಅಪ್‌ಲೋಡ್ ಮಾಡಲು ವಿಫಲವಾದ ಕಾರಣ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಗುತ್ತಿಗೆದಾರರ ಬಾಕಿ ಬಿಲ್ (Contractors Bill) ಬಿಡುಗಡೆಯಾಗುತ್ತಿಲ್ಲ ಎಂಬ ಆರೋಪಗಳ ಬೆನ್ನಲ್ಲೇ ಹಣಕಾಸು ಕಾರ್ಯದರ್ಶಿ ಅವರಿಂದ ಈ ಸ್ಪಷ್ಟನೆ ಮೂಡಿಬಂದಿದೆ.

ಈವರೆಗೆ 36,706 ಟೆಂಡರ್ ಆಗಿರುವ ಕಾಮಗಾರಿಗಳಲ್ಲಿ ಕೇವಲ 505 ಕಾಮಗಾರಿಗಳ ವಿವರಗಳನ್ನು ಮಾತ್ರ ಪೋರ್ಟಲ್​​ಗೆ ಅಪ್‌ಲೋಡ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೆಪಿಪಿಪಿ ಪೋರ್ಟಲ್ ಎಂದರೇನು?

50 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಯೋಜನೆಗಳನ್ನು ಪತ್ತೆಹಚ್ಚಲು ಗುತ್ತಿಗೆ ನಿರ್ವಹಣಾ ಮಾಡ್ಯೂಲ್ ಅನ್ನು 023 ರಲ್ಲಿ ಸರ್ಕಾರ ಪರಿಚಯಿಸಿತ್ತು. KPPP ಪೋರ್ಟಲ್​ ಅನ್ನು 2023 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಆರಂಭದಲ್ಲಿ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಜಲಸಂಪನ್ಮೂಲ ಇಲಾಖೆಗಳಲ್ಲಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಈಗಿನ ಜಿಬಿಎ) ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಪೋರ್ಟಲ್ ಆರಂಭಿಸಲಾಗಿತ್ತು. ನಂತರ 2024 ರ ಜುಲೈಯಲ್ಲಿ, ಹಣಕಾಸು ಇಲಾಖೆಯು ಟೆಂಡರ್‌ಗಳನ್ನು ಆಹ್ವಾನಿಸುವುದರಿಂದ ಹಿಡಿದು ಬಿಲ್‌ಗಳ ಕ್ಲಿಯರೆನ್ಸ್‌ವರೆಗಿನ ವಿವರಗಳನ್ನು ಅಪ್‌ಲೋಡ್ ಮಾಡಲು ಅಧಿಸೂಚನೆಯನ್ನು ಹೊರಡಿಸಿತ್ತು.

ಇದಕ್ಕೂ ಮೊದಲಿನ ವ್ಯವಸ್ಥೆಯಲ್ಲಿ, ಯೋಜನೆಗಳ ಕೆಲಸವನ್ನು ಮೇಲ್ವಿಚಾರಣೆ ಮಾಡಲು ಯಾವುದೇ ಕಾರ್ಯವಿಧಾನವಿರಲಿಲ್ಲ. ವಿವಿಧ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಜಾರಿಗೆ ತಂದ ಕಾಮಗಾರಿಗಳ ಬಿಲ್‌ಗಳನ್ನು ಪರಿಶೀಲಿಸಲು ಅಧಿಕಾರಿಗಳು ಸಾಕಷ್ಟು ಸಮಯವನ್ನು ಕಳೆಯಬೇಕಾಗುತ್ತಿತ್ತು. ನಂತರ, ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಬಿಲ್‌ಗಳು ಮತ್ತು ದಾಖಲೆಗಳನ್ನು ಆಡಿಟರ್ ಜನರಲ್‌ಗೆ ಸಲ್ಲಿಸಬೇಕಾಯಿತು. ನಾವು ಅದನ್ನು ಆನ್‌ಲೈನ್ ಮಾಡಿದ್ದೇವೆ. ಈಗ ದಾಖಲೆಗಳನ್ನು ಕೊಂಡೊಯ್ಯುವ ಅಗತ್ಯವಿಲ್ಲ. ಅನುಷ್ಠಾನದಲ್ಲಿರುವ ಯೋಜನೆಯ ಆರ್ಥಿಕ ಸ್ಥಿತಿ ಮತ್ತು ಭೌತಿಕ ಪ್ರಗತಿಯನ್ನು ತಿಳಿಯಲು ಇದು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ ಎಂದು ಮೂಲಗನ್ನು ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಹಣಕಾಸು ಕಾರ್ಯದರ್ಶಿ ಹೇಳಿದ್ದೇನು?

ಅಧಿಸೂಚನೆಯ ಹೊರತಾಗಿಯೂ, ಅಧಿಕಾರಿಗಳು ತಮ್ಮ ಇಲಾಖೆಗಳಿಂದ ಅನುಷ್ಠಾನಗೊಳಿಸಲಾಗುತ್ತಿರುವ ಯೋಜನೆಗಳಿಗೆ ಸಂಬಂಧಿಸಿದ ವಿವರಗಳನ್ನು ಅಪ್‌ಲೋಡ್ ಮಾಡಲು ವಿಫಲರಾಗಿದ್ದಾರೆ. ಆಹ್ವಾನಿಸಲಾದ 36,709 ಟೆಂಡರ್‌ಗಳಲ್ಲಿ 509 ಕ್ಕೆ ಸಂಬಂಧಿಸಿದ ವಿವರಗಳನ್ನು ಮಾತ್ರ ಅಪ್‌ಲೋಡ್ ಮಾಡಲಾಗಿದೆ ಎಂದು ಜಾಫರ್ ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಗುತ್ತಿಗೆದಾರರು: ಬಾಕಿ ಬಿಡುಗಡೆಯಾಗದಿದ್ರೆ ಹೋರಾಟ, ಡಿಸೆಂಬರ್ ಡೆಡ್‌ಲೈನ್

ಬಿಲ್ ಬಿಡುಗಡೆಯಾಗುತ್ತಿಲ್ಲ ಎಂದು ಆರೋಪಿಸಿದ್ದ ಗುತ್ತಿಗೆದಾರರ ಸಂಘ

ಪೋರ್ಟಲ್​​ಗೆ ಅಪ್‌ಲೋಡ್ ಮಾಡಲಾದ ಯೋಜನೆಗಳಿಗೆ ಮಾತ್ರ ಹಣ ಬಿಡುಗಡೆ ಮಾಡುವಂತೆ ಮುಖ್ಯ ಕಾರ್ಯದರ್ಶಿ ಇಲಾಖೆಗೆ ನಿರ್ದೇಶನ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ, ಕರ್ನಾಟಕ ಗುತ್ತಿಗೆದಾರರ ಸಂಘವು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, 33,000 ಕೋಟಿ ರೂ.ಗಳ ಬಾಕಿ ಬಿಲ್‌ಗಳನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ ಎಂದು ತಿಳಿಸಿತ್ತು. ಅಲ್ಲದೆ, ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ