AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಗುತ್ತಿಗೆದಾರರು: ಬಾಕಿ ಬಿಡುಗಡೆಯಾಗದಿದ್ರೆ ಹೋರಾಟ, ಡಿಸೆಂಬರ್ ಡೆಡ್‌ಲೈನ್

ಕರ್ನಾಟಕದಲ್ಲಿ ಕಮಿಷನ್ ಆರೋಪ ಮತ್ತೆ ಮುನ್ನಲೆಗೆ ಬಂದಿದೆ. ಗುತ್ತಿಗೆದಾರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆಗೆ ಸಿದ್ಧರಾಗಿದ್ದಾರೆ. 33,000 ಕೋಟಿ ರೂ. ಬಾಕಿ ಬಿಡುಗಡೆಯಾಗದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಗುತ್ತಿಗೆದಾರರ ಸಂಘ ಎಚ್ಚರಿಸಿದೆ. ಆದರೆ ಸಿಎಂ ಸಿದ್ದರಾಮಯ್ಯ, ಗುತ್ತಿಗೆದಾರರು ಕೋರ್ಟ್‌ಗೆ ಹೋಗಲಿ ಎಂದಿದ್ದಾರೆ.

ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಗುತ್ತಿಗೆದಾರರು: ಬಾಕಿ ಬಿಡುಗಡೆಯಾಗದಿದ್ರೆ ಹೋರಾಟ, ಡಿಸೆಂಬರ್ ಡೆಡ್‌ಲೈನ್
ಕರ್ನಾಟಕ ರಾಜ್ಯ ಗುತ್ತಿಗೆದಾದರ ಸಂಘದ ಅಧ್ಯಕ್ಷ ಆರ್ ಮಂಜುನಾಥ್ ಹಾಗೂ ಸಿಎಂ ಸಿದ್ದರಾಮಯ್ಯ
Ganapathi Sharma
|

Updated on: Oct 17, 2025 | 1:17 PM

Share

ಬೆಂಗಳೂರು, ಅಕ್ಟೋಬರ್ 17: ಕಮಿಷನ್ ಕಿಚ್ಚು ಮತ್ತೆ ಧಗಧಗಸಲು ಶುರುವಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ (Congress), ನಂತರ ಅಧಿಕಾರಕ್ಕೇರಿತ್ತು. ನಾವು ಅಧಿಕಾರಕ್ಕೆ ಬಂದರೆ ಗುತ್ತಿಗೆದಾರ ಸಮಸ್ಯೆ ಈಡೇರಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು. ಆದರೆ, ಇನ್ನೂ ಬಾಕಿ ಬಿಡುಗಡೆ ಮಾಡಿಲ್ಲ ಎಂದು ಗುತ್ತಿಗೆದಾರರು ಸಿಡಿದೆದ್ದಿದ್ದಾರೆ. ಕರ್ನಾಟಕ ರಾಜ್ಯ ಗುತ್ತಿಗೆದಾದರ ಸಂಘದ ಅಧ್ಯಕ್ಷ ಆರ್ ಮಂಜುನಾಥ್ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಕಮಿಷನ್ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ಜಾಸ್ತಿಯಾಗಿದೆ. ಆದರೆ, 60, 80 ಪರ್ಸೆಂಟ್ ಎಂದು ನಾವು ಹೇಳಿಲ್ಲ ಎಂದಿದ್ದಾರೆ.

33 ಸಾವಿರ ಕೋಟಿ ರೂ. ಬಾಕಿ ರಿಲೀಸ್ ಆಗದಿದ್ರೆ ಹೋರಾಟ

52 ಸಾವಿರ ಕೋಟಿ ರೂಪಾಯಿ ಬಾಕಿ ಬರಬೇಕಿತ್ತು. ಕೆಲ ಇಲಾಖೆಗಳು ಹಣ ಬಿಡುಗಡೆ ಮಾಡಿದ್ದು, 33 ಸಾವಿರ ಕೋಟಿ ರೂ. ಬಾಕಿ ಇದೆ ಎಂದು ಮಂಜುನಾಥ್ ಆರೋಪಿಸಿದ್ದಾರೆ. ಇನ್ನೊಂದು ತಿಂಗಳು ಕಾಯುತ್ತೇವೆ. ಆಗಲೂ ಹಣ ಬಿಡುಗಡೆಯಾಗಿಲ್ಲ ಎಂದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಗುತ್ತಿಗೆದಾರರಿಗೆ ಬಿಡುಗಡೆಯಾಗಬೇಕಿರುವ ಹಣ ಎಷ್ಟು?

  • ನೀರಾವರಿ ಇಲಾಖೆ- 12000 ಕೋಟಿ ರೂ.
  • ಪಿಆರ್‌ಡಿ ಇಲಾಖೆ- 3600 ಕೋಟಿ ರೂ.
  • ಸಣ್ಣ ನೀರಾವರಿ ಇಲಾಖೆ- 3200 ಕೋಟಿ ರೂ.
  • ನಗರಾಭಿವೃದ್ಧಿ ಇಲಾಖೆ- 2000 ಕೋಟಿ ರೂ.
  • ಮಹಾತ್ಮ ಗಾಂಧಿ ಯೋಜನೆ- 1600 ಕೋಟಿ ರೂ.
  • ಹೌಸಿಂಗ್ ಇಲಾಖೆ – 1200 ಕೋಟಿ ರೂ.
  • ಕಾರ್ಮಿಕ ಇಲಾಖೆ – 800 ಕೋಟಿ ರೂ.

ಈ ಬಾಕಿ ಬಿಡುಗಡೆಯಾಗದಿದ್ದರೆ, ವಿಷ ಕುಡಿಯುವ ಪರಿಸ್ಥಿತಿ ಬರಲಿದೆ ಎಂದು ಗುತ್ತಿಗೆದಾರರು ಅಸಹಾಯಕತೆ ತೋಡಿಕೊಂಡಿದ್ದಾರೆ.

ಗುತ್ತಿಗೆದಾರರು ಕೋರ್ಟ್‌ಗೆ ಹೋಗಲಿ ಎಂದ ಸಿಎಂ ಸಿದ್ದರಾಮಯ್ಯ

ಕಮಿಷನ್ ಆರೋಪದ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಕೋರ್ಟ್‌ಗೆ ಹೋಗಲಿ ಎಂದಿದ್ದಾರೆ. ಗುತ್ತಿಗೆದಾರರಿಂದ ಈ ರೀತಿ ಮಾಡಿಸುತ್ತಾ ಇದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಮಂಜುನಾಥ್, ನಾವು ಕೋರ್ಟ್‌ಗೆ ಹೋಗಲ್ಲ. ಮುಷ್ಕರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ನಿಮ್ಮ ಸರ್ಕಾರದಿಂದ ನಮಗೆ ಯಾವ ಪ್ರಯೋಜನವೂ ಇಲ್ಲ: ಕಾಂಗ್ರೆಸ್ ವಿರುದ್ಧ ಮತ್ತೆ ಗುತ್ತಿಗೆದಾರರ ಆಕ್ರೋಶ

ಸಿಎಂ ಕೋರ್ಟ್‌ಗೆ ಹೋಗಲಿ ಎನ್ನುತ್ತಿದ್ದಾರೆ. ನಾವು ಕೋರ್ಟ್‌ಗೆ ಹೋಗಲ್ಲ, ಮುಷ್ಕರ ಮಾಡುತ್ತೇವೆ ಎಂದು ಗುತ್ತಿಗೆದಾರರು ಹೇಳಿದ್ದಾರೆ. ಮತ್ತೊಮ್ಮೆ ಗುತ್ತಿಗೆ ಗುದ್ದಾಟ ಶುರುವಾಗಿದ್ದು, ವಿಪಕ್ಷಕ್ಕೆ ಕಮಿಷನ್ ಅಸ್ತ್ರ ಸಿಕ್ಕಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ