ಅಕ್ಟೋಬರ್ 23ರಿಂದ 3 ದಿನ ಕಿತ್ತೂರು ವಿಜಯ ಉತ್ಸವ ಆಚರಣೆ: ಸಿಎಂ ಸಿದ್ದರಾಮಯ್ಯ ಘೋಷಣೆ
1824ರಲ್ಲಿ ಬ್ರಿಟಿಷರು ಮತ್ತು ಕಿತ್ತೂರು ರಾಣಿ ಚನ್ನಮ್ಮ ನಡುವೆ ನಡೆದ ವಿಜಯ ಯುದ್ಧಕ್ಕೆ 200 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ "ಕಿತ್ತೂರು ವಿಜಯ ಉತ್ಸವ" ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕಿತ್ತೂರು ವಿಜಯ ಉತ್ಸವ ಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದೆ ಎಂದರು.
ಬೆಂಗಳೂರು, ಅಕ್ಟೋಬರ್ 02: ಅಕ್ಟೋಬರ್ 23, 24 ಮತ್ತು 25ರಂದು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ (Kittur) “ಕಿತ್ತೂರು ವಿಜಯ ಉತ್ಸವ” (Kittur Vijay Utsav) ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಅ.02) ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗ ಕಿತ್ತೂರು ವಿಜಯ ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು. ಇದೇ ವೇಳೆ ಕಿತ್ತೂರು ಉತ್ಸವದ ಪೋಸ್ಟರ್ ಬಿಡುಗಡೆ ಮಾಡಿದರು.
ಬಳಿಕ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 1824ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರೊಂದಿಗೆ ಹೋರಾಡಿ ವಿಜಯಶಾಲಿಯಾದರು. ಈ ಯದ್ಧ ನಡೆದು 200 ವರ್ಷಗಳಾಗಿವೆ. ಹೀಗಾಗಿ ವಿಜಯೋತ್ಸವ ಆಚರಣೆ ಮಾಡುತ್ತಿದ್ದೇವೆ. ಕಿತ್ತೂರು ವಿಜಯ ಜ್ಯೋತಿ ಯಾತ್ರೆ ಇಂದಿನಿಂದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕಿತ್ತೂರು ತಲುಪಲಿದೆ. ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರದಿಂದ ಎಲ್ಲ ನೆರವು ನೀಡುತ್ತಿದ್ದೇವೆ ಎಂದರು.
ಕಿತ್ತೂರು ರಾಣಿ ಚೆನ್ನಮ್ಮನವರು ನಮಗೆಲ್ಲ ಸ್ವಾಭಿಮಾನದ ಸಂಕೇತ. ಬ್ರಿಟಿಷರು ಜಾರಿಗೆ ತಂದಿದ್ದ ತೆರಿಗೆ ನೀತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಕಿತ್ತೂರು ರಾಣಿ ಚೆನ್ನಮ್ಮ ಅವರು ವಿರೋಧ ಮಾಡಿದ್ದರು. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರಿಗೆ ತೆರಿಗೆ ಕೊಡಲ್ಲ ಅಂತ ನೇರವಾಗಿ ಹೇಳಿದರು. ಸಂಗೊಳ್ಳಿ ರಾಯಣ್ಣ ಸಹ ಇವರ ಸೈನ್ಯದಲ್ಲೇ ಇದ್ದರು. ಮೊದಲನೇ ಯುದ್ಧದಲ್ಲಿ ಚೆನ್ನಮ್ಮ ಅವರಿಗೆ ಜಯವಾಗುತ್ತದೆ. ಎರಡನೇ ಯುದ್ಧಕ್ಕೆ ಬ್ರಿಟಿಷರು ಹೆಚ್ಚು ಸೈನ್ಯ ತೆಗೆದುಕೊಂಡು ಬಂದಿದ್ದರಿಂದ ಕಿತ್ತೂರಿಗೆ ಸೋಲಾಗುತ್ತದೆ. ಬ್ರಿಟಿಷರು ಕಿತ್ತೂರನ್ನು ಆಕ್ರಮಿಸಿಕೊಳ್ಳುತ್ತಾರೆ. ಚೆನ್ನಮ್ಮ ಅವರನ್ನು ಸೆರೆ ಹಿಡಿಯುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರನ್ನು ನೋಡಿ ದೇಶ, ನಾಡಿನ ಪ್ರೇಮ ಮತ್ತು ಸ್ವಾಭಿಮಾನವನ್ನು ಕಲಿಯಬೇಕು. ದೇಶದ ಎಲ್ಲ ರಾಣಿಯರಗಿಂತ ಕಿತ್ತೂರು ರಾಣಿ ಚೆನ್ನಮ್ಮ ಮುಂಚೂಣಿಯಲ್ಲಿರುತ್ತಾರೆ.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ
ಬೆಳಗಾವಿಯಲ್ಲಿ 1924ರ ಡಿಸೆಂಬರ್ 24ರಂದು ಕಾಂಗ್ರೆಸ್ ಅಧಿವೇಶ ನಡೆಯಿತು. ಇದರ ಶತಮಾನೋತ್ಸವ ಆಚರಣೆ ಮಾಡುತ್ತಿದ್ದೇವೆ. ಮೊದಲ ಶತಮಾನೋತ್ಸವ ಕಾರ್ಯಕ್ರಮ ಬೆಳಗಾವಿಯಲ್ಲಿ ನಡೆಯುತ್ತದೆ. ಸಚಿವ ಹೆಚ್.ಕೆ ಪಾಟೀಲ್ ಅವರು ಇದಕ್ಕೆ ಅಧ್ಯಕ್ಷರಾಗಿರುತ್ತಾರೆ. ಮಹಾತ್ಮ ಗಾಂಧಿಜಿಯವರು ಶಾಂತಿಯುತವಾಗಿ, ಸತ್ಯಗ್ರಹದಿಂದ ಬ್ರಿಟಿಷರನ್ನು ದೇಶದಿಂದ ಓಡಿಸಿ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಹೇಳಿದರು.
1920 ರಿಂದ 1947ರವರೆಗೆ ಮಹಾತ್ಮಾ ಗಾಂಧಿಜಿ ನೇತೃತ್ವದಲ್ಲಿ ಅನೇಕ ಹೋರಾಟಗಳು ನಡೆಯುತ್ತವೆ. 1920ಕ್ಕಿಂತ ಮೊದಲೇ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿದ್ದವು. ಆದರೆ, ಮಹಾತ್ಮ ಗಾಂಧೀಜಿ ಅವರು 1920ರಲ್ಲಿ ಹೋರಾಟದ ನಾಯಕತ್ವದ ವಹಿಸಿದ ಮೇಲೆ, ಹೋರಾಟ ಬೇರೆ ತಿರುವು ಪಡೆದುಕೊಂಡಿತು ಎಂದು ತಿಳಿಸಿದರು.
ಕಿತ್ತೂರು ವಿಜಯೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಹೆಚ್ಕೆ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:29 pm, Wed, 2 October 24