wistron: ಇಂದಿನಿಂದ ವಿಸ್ಟ್ರಾನ್ ಕಂಪನಿ ಮತ್ತೆ ಆರಂಭ.. ಸಚಿವ ಜಗದೀಶ್ ಶೆಟ್ಟರ್ ಭೇಟಿ
ವೇತನ ಸಮಸ್ಯೆಯಿಂದಾಗಿ ಕಾರ್ಮಿಕರು ಸಿಟ್ಟಿಗೆದ್ದು ದಾಂದಲೆ ನಡೆಸಿದ ಕಾರಣಕ್ಕೆ ದೇಶವ್ಯಾಪಿ ಸುದ್ದಿಯಾಗಿದ್ದ ವಿಸ್ಟ್ರಾನ್ ಕಂಪನಿ ಇಂದಿನಿಂದ ಪುನರಾರಂಭಗೊಂಡಿದೆ.

ಕೋಲಾರ: ವೇತನ ಸಮಸ್ಯೆಯಿಂದಾಗಿ ಕಾರ್ಮಿಕರು ಸಿಟ್ಟಿಗೆದ್ದು ದಾಂದಲೆ ನಡೆಸಿದ ಕಾರಣಕ್ಕೆ ದೇಶವ್ಯಾಪಿ ಸುದ್ದಿಯಾಗಿದ್ದ ವಿಸ್ಟ್ರಾನ್ ಕಂಪನಿ ಇಂದಿನಿಂದ ಪುನರಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ನರಸಾಪುರ ಬಳಿಯಿರುವ ವಿಸ್ಟ್ರಾನ್ ಕಂಪನಿಗೆ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿದ್ದು ಜಿಲ್ಲಾಧಿಕಾರಿ, ಕಂಪನಿ ಅಧಿಕಾರಿಗಳು ಹಾಗೂ ಕಾರ್ಮಿಕರೊಂದಿಗೆ ಜೊತೆ ಮಾತುಕಥೆ ನಡೆಸಿದ್ದಾರೆ.ಈ ವೇಳೆ ಅಪರ ಮುಖ್ಯ ಕಾರ್ಯದರ್ಶಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಗೌರವ್ ಗುಪ್ತಾ, ಕೆಐಎಡಿಬಿ ಸಿಇಒ ಡಾ ಶಿವಶಂಕರ್, ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರಿಮತಿ ಗುಂಜನ್ ಕೃಷ್ಣಾ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು
ಹಿಂಸೆ ಯಾವುದಕ್ಕೂ ಪರಿಹಾರವಲ್ಲ.. ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ವಿಸ್ಟ್ರಾನ್ ಕಾರ್ಮಿಕರಿಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಲಹೆ ನೀಡಿದ್ದಾರೆ. ಹಿಂಸಾಚಾರದಂತಹ ಅನವಶ್ಯಕ ಘಟನೆಗಳಿಂದ ಸಾವಿರಾರು ಉದ್ಯೋಗಿಗಳ ಜೀವನ ಬೀದಿಪಾಲಾಗುವ ಸಮಸ್ಯೆ ಎದುರಾಗುತ್ತದೆ. ಇನ್ನು ಮುಂದೆ ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸಿದಲ್ಲಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ್ ವಿಸ್ಟ್ರಾನ್ ಉದ್ಯೋಗಿಗಳಿಗೆ ಸಲಹೆ ನೀಡಿದರು.
ಇತ್ತೀಚಿನ ಘಟನೆಯ ನಂತರ ಉತ್ಪಾದನೆ ಆರಂಭಿಸಿರುವ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪನಿಗೆ ರಾಜ್ಯ ಸರಕಾರದ ಉನ್ನತ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಜಗದೀಶ ಶೆಟ್ಟರ್ ಕಾರ್ಮಿಕರ ಈಗಿನ ಸ್ಥಿತಿಗತಿಯ ಬಗ್ಗೆ ವಿಚಾರಿಸಿದರು. ಕಾರ್ಮಿಕರು ಕೆಲವೇ ಜನರ ಮುಂಗೋಪದಿಂದಾಗಿ ಸಾವಿರಾರು ಕಾರ್ಮಿಕರು ಸಮಸ್ಯೆ ಅನುಭವಿಸಬೇಕಾಯಿತು ಎಂದು ಅಂದು ನಡೆದ ಪರಿಸ್ಥಿತಿಯನ್ನು ಸಚಿವರ ಮುಂದೆ ವಿವರಿಸಿದರು.
ನಂತರ ಸಚಿವ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಹಿಂಸಾಚಾರ ದಂತಹ ಅನವಶ್ಯಕ ಘಟನೆಗಳಿಂದ ಯಾವುದೇ ಸಮಸ್ಯೆಗೂ ಪರಿಹಾರ ದೊರಕುವುದಿಲ್ಲ. ಅಂದು ನಡೆದ ಘಟನೆಯಿಂದಾಗಿ ಕಾರ್ಖಾನೆ ಮುಚ್ಚಬೇಕಾಯಿತು. ಅಲ್ಲದೆ, ಸಾವಿರಾರು ಕಾರ್ಮಿಕರು ಹಲವಾರು ಅನವಶ್ಯಕ ಗೊಂದಲಕ್ಕೀಡಾಗಬೇಕಾಯಿತು. ಆದ್ದರಿಂದ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಭವವಾದಲ್ಲಿ ನಿಮ್ಮ ಮೇಲಾಧಿಕಾರಿಗಳೀಗೆ ಮೊದಲು ತಿಳಿಸಬೇಕು. ಅಲ್ಲಿಯೂ ಪರಿಹಾರ ದೊರಕದೇ ಇದ್ದ ಸಂಧರ್ಭದಲ್ಲಿ ಸರಕಾರಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು.
10 ವರ್ಷಗಳ ಹಿಂದೆ ಕೋಲಾರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಲ್ಲಿನ ಜನರು ಉದ್ಯೋಗಕ್ಕಾಗಿ ಬೆಂಗಳೂರು ನಗರಕ್ಕೆ ದಿನ ನಿತ್ಯ ಅಲೆದಾಡುತ್ತಿದ್ದ ಪರಿಸ್ಥಿತಿ ಇತ್ತು. ಈಗ ಜಿಲ್ಲೆಗೆ ಕೈಗಾರಿಕೆಗಳು ಹೆಚ್ಚಾಗಿ ಬರುತ್ತಿದ್ದು, ಸ್ಥಳೀಯವಾಗಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ. ಇದನ್ನ ಅಭಿವೃದ್ದಿ ಪಡಿಸಬೇಕೇ ಹೊರತು ಇಂತಹ ಘಟನೆಗಳಿಂದ ಕೆಟ್ಟ ಅಭಿಪ್ರಾಯ ಮೂಡಿಸುವಂತಾಗಬಾರದು ಎಂದು ಹೇಳಿದರು.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಗೌರವ್ ಗುಪ್ತಾ ಮಾತನಾಡಿ, ಸಮಸ್ಯೆ ಉದ್ಭವವಾಗುವ ಸಮಯದಲ್ಲಿ ಅಧಿಕಾರಿಗಳು ಭೇಟಿ ನೀಡುವ ಪರಿಪಾಠವನ್ನು ಬಿಡಬೇಕು. ಆಗಾಗ್ಗೆ ಕೈಗಾರಿಕೆಗಳಿಗೆ ಭೇಟಿ ನೀಡಿ ಅಲ್ಲಿನ ಸೌಕರ್ಯಗಳು ಹಾಗೂ ಆಗಬೇಕಾದ ಕಾರ್ಯಗಳ ಬಗ್ಗೆ ಸಲಹೆ ನೀಡಬೇಕು ಮತ್ತು ಕಾರ್ಮಿಕರ ಸಂಕಷ್ಟಗಳನ್ನು ಆಲಿಸಬೇಕು ಎಂದು ಸೂಚನೆ ನೀಡಿದರು.
ಈ ಸಮಯದಲ್ಲಿ ಕೆಐಎಡಿಬಿ ಸಿಇಓ ಡಾ. ಶಿವಶಂಕರ್, ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣಾ, ವಿಸ್ಟ್ರಾನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುದಿಪ್ತೋ ಗುಪ್ತಾ, ಕೊಲಾರ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳ, ಕೆಐಎಡಿಬಿ ಮುಖ್ಯ ಇಂಜಿನೀಯರ್ ಬಿ.ಕೆ ಪವಿತ್ರ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಡಿಸೆಂಬರ್ 12, 2020ರಂದು ಆಗಿದ್ದೇನು? ಡಿಸೆಂಬರ್ 12, 2020ದೇಶದ ಕೈಗಾರಿಕಾ ರಂಗದ ಇತಿಹಾಸದಲ್ಲೇ ಒಂದು ರೀತಿಯ ಕರಾಳ ದಿನ ಎಂದರೆ ತಪ್ಪೇನಿಲ್ಲ. ಅಂದು ಕೋಲಾರ ಜಿಲ್ಲೆ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿದ್ದ ವಿಶ್ವದ ಪ್ರತಿಷ್ಠಿತ ಐಪೋನ್ ತಯಾರಿಕಾ ಕಂಪನಿ ವಿಸ್ಟ್ರಾನ್ ಕಂಪನಿಯ ಮೇಲೆ ಅಲ್ಲಿನ ಕಾರ್ಮಿಕರು ದಾಂಧಲೆ ನಡೆಸಿದ್ದರು. ಕಂಪನಿ ಸರಿಯಾಗಿ ಕಾರ್ಮಿಕರಿಗೆ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ ಏಕಾಏಕಿ ಕಂಪನಿ ಕಟ್ಟಡದ ಮೇಲೆ ಮುಗಿಬಿದ್ದಿದ್ದರು.
ಒಂದು ವರ್ಷದ ಹಿಂದಷ್ಟೇ ಕಾರ್ಯಾರಂಭ ಮಾಡಿದ್ದ ಕಂಪನಿಯನ್ನು ಸಾವಿರಾರು ಜನ ಕಾರ್ಮಿಕರು ನೋಡ ನೋಡುತ್ತಿದ್ದಂತೆ ಕೇವಲ ಒಂದೇ ಗಂಟೆಯಲ್ಲಿ, ಅಸ್ಥಿಪಂಜರದಂತೆ ಮಾಡಿದ್ದರು. ಇದು ದೇಶದ ಕೈಗಾರಿಕಾ ಇತಿಹಾಸದಲ್ಲೇ ಒಂದು ದೊಡ್ಡ ಕಪ್ಪುಚುಕ್ಕೆಯಾಗಿತ್ತು. ಅಲ್ಲದೆ ವಿಶ್ವ ಮಟ್ಟದಲ್ಲಿ ಭಾರತಕ್ಕೆ ಹೂಡಿಕೆ ಮಾಡಲು ಆಲೋಚನೆ ಮಾಡಬೇಕಾದಂತ ಸ್ಥಿತಿ ನಿರ್ಮಾಣವಾಗಿತ್ತು.
ಕಾರ್ಮಿಕರ ಕ್ಷಮೆ ಕೇಳಿದ್ದ ವಿಸ್ಟ್ರಾನ್ ದಾಂಧಲೆ ಪ್ರಕರಣ ನಡೆದು ಒಂದೇ ವಾರದಲ್ಲಿ ವಿಸ್ಟ್ರಾನ್ ಕಂಪನಿ ಆತಂಕರಿಕ ತನಿಖೆ ನಡೆಸಿತ್ತು. ಇದಾದ ನಂತರ ಕಂಪನಿಯಲ್ಲೇ ಕೆಲವೊಂದು ತಪ್ಪುಗಳಿದೆ ಎಂದು ಗೊತ್ತಾದ ಹಿನ್ನೆಲೆಯಲ್ಲಿ ಬಹಿರಂಗವಾಗಿಯೇ ಕಾರ್ಮಿಕರ ಕ್ಷಮೆ ಕೇಳಿತ್ತು. ಅಷ್ಟೇ ಅಲ್ಲದೇ ಕಂಪನಿಯ ಉಪಾಧ್ಯಕ್ಷ ವಿನ್ಸೆಂಟ್ ಲೀ ಅವರನ್ನು ವಜಾಮಾಡಿತ್ತು. ಜೊತೆಗೆ ಕಾರ್ಮಿಕರ ಬಾಕಿ ಇರುವ ವೇತನ ಅತಿ ಶೀಘ್ರದಲ್ಲಿ ಇತ್ಯರ್ಥಪಡಿಸುವ ಭರವಸೆಯನ್ನು ಸಹ ನೀಡಿತ್ತು.
ಇದನ್ನೂ ಓದಿ: ವಿಸ್ಟ್ರಾನ್ ಕಂಪನಿ ದಾಂಧಲೆ ಪ್ರಕರಣ: ಕಂಪನಿಯ ಉಪಾಧ್ಯಕ್ಷ ವಿನ್ಸೆಂಟ್ ಲೀ ತಲೆದಂಡ
Published On - 12:36 pm, Wed, 10 March 21