ಮಂಗಳೂರಿನ ಉಗ್ರ ಗೋಡೆ ಬರಹ ಪ್ರಕರಣ: NIA ಕಚೇರಿ ತೆರೆಯಲು ವಿಶ್ವ ಹಿಂದೂ ಪರಿಷತ್ನಿಂದ ಆಗ್ರಹ
ಕೆಲ ಹಿರಿಯ ಅಧಿಕಾರಿಗಳು ತನಿಖೆಗೆ ಸ್ವಾತಂತ್ರ ನೀಡಿಲ್ಲ ಎಂದು ಹಿಂದುಪರ ಸಂಘಟನೆಗಳು ಆರೋಪಿಸಿದ್ದು, ಆದ್ದರಿಂದ ರಾಷ್ಟ್ರೀಯ ತನಿಖಾ ದಳಕ್ಕೆ ಸಂಪೂರ್ಣ ತನಿಖಾ ಜವಾಬ್ದಾರಿಯನ್ನು ವಹಿಸಿ ಎಂದು ವಿಶ್ವ ಹಿಂದು ಪರಿಷತ್ನ ಕಾರ್ಯಕರ್ತರು ನಿನ್ನೆ ಮಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ದಾರೆ. ಜೊತೆಗೆ ಈ ಪ್ರಕರಣದ ತನಿಖೆಗಾಗಿ ಎನ್ಐಎ ಶೀಘ್ರವಾಗಿ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ: ಮಂಗಳೂರಿನಲ್ಲಿ ಉಗ್ರ ಗೋಡೆ ಬರಹಕ್ಕೆ ಸಂಬಂಧಿಸಿದಂತೆ ಮಹಮ್ಮದ್ ಶಾರೀಖ್ ಮತ್ತು ಅಬ್ದುಲ್ ಮುನೀರ್ ಮಾಝ್ ಎಂಬಿಬ್ಬರು ಆರೋಪಿಗಳ 14 ದಿನಗಳ ಪೊಲೀಸರ ಕಸ್ಟಡಿ ಅಂತ್ಯಾವಾಗಿದ್ದು, ವಿಚಾರಣೆ ಮುಗಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂದಪಟ್ಟಂತೆ ಇವರಿಗೆ ಸಹಕಾರ ನೀಡಿದ ಶಾರೀಖ್ ಚಿಕ್ಕಪ್ಪ ಸಾದತ್ಗೆ ಜಾಮೀನು ಮಂಜೂರಾಗಿದೆ. ಈ ಬೆನ್ನಲ್ಲೆ ಪೊಲೀಸರ ತನಿಖೆ ಸರಿಯಾಗಿ ನಡೆದಿಲ್ಲ. ಎನ್ಐಎ ಶೀಘ್ರವಾಗಿ ಕಾರ್ಯಗತವಾಗಲಿ ಎಂದು ವಿ.ಎಚ್.ಪಿ (ವಿಶ್ವ ಹಿಂದೂ ಪರಿಷತ್ VHP) ಆಗ್ರಹಿಸಿದೆ.
ಮಂಗಳೂರಿನಲ್ಲಿ ಉಗ್ರ ಗೋಡೆ ಬರಹ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದ್ದು, ಬಂಧಿತ ಆರೋಪಿಗಳು ತೀರ್ಥಹಳ್ಳಿ ಮೂಲದ ಉಗ್ರನೊಂದಿಗೆ ನಂಟನ್ನು ಹೊಂದಿದ್ದರು ಎನ್ನುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇನ್ನು ಈ ಪ್ರಕರಣದಲ್ಲಿ ಪೊಲೀಸರ ತನಿಖೆ ಮುಗಿದು ಆರೋಪಿಗಳಿಬ್ಬರು ಜೈಲು ಸೇರಿದ್ದು, ಇಂತಹ ದೇಶದ್ರೋಹಿಗಳಿಗೆ ಸಪೋರ್ಟ್ ಮಾಡಿದವನಿಗೆ ಜಾಮೀನು ಸಿಕ್ಕಿದೆ ಎಂದೂ ವಿಶ್ವ ಹಿಂದೂ ಪರಿಷತ್ ಕಿಡಿಕಾರಿದೆ.
ಈ ನಿಟ್ಟಿನಲ್ಲಿ ಪೊಲೀಸರಿಂದ ಸರಿಯಾಗಿ ತನಿಖೆ ನಡೆದಿಲ್ಲ. ಕೆಲ ಹಿರಿಯ ಅಧಿಕಾರಿಗಳು ತನಿಖೆಗೆ ಸ್ವಾತಂತ್ರ ನೀಡಿಲ್ಲ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿದ್ದು, ಸಂಪೂರ್ಣ ತನಿಖಾ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿ ಎಂದು ವಿಶ್ವ ಹಿಂದೂ ಪರಿಷತ್ನ ಕಾರ್ಯಕರ್ತರು ನಿನ್ನೆ ಮಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ದಾರೆ. ಜೊತೆಗೆ ಈ ಪ್ರಕರಣದ ತನಿಖೆಗಾಗಿ ಎನ್ಐಎ ಶೀಘ್ರವಾಗಿ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಮಂಗಳೂರಿನ ಗೋಡೆ ಬರಹದ ಬೆನ್ನಲ್ಲೇ, ಪೊಲೀಸರ ಮೇಲೆ ಸಾಲು ಸಾಲು ದಾಳಿಗಳು ನಡೆದಿದ್ದಕ್ಕೂ ಉಗ್ರ ಸಂಘಟನೆಗಳಿಗೂ ಸಂಬಂಧ ಇದೆ ಎಂದು ವಿ.ಎಚ್.ಪಿ ಆರೋಪಿಸಿದ್ದು, ಮಂಗಳೂರಿನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್ಗೆ ಪ್ರತಿಕಾರವಾಗಿ ಪೊಲೀಸರ ಮೇಲೆ ಉಗ್ರರು ದ್ವೇಷ ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಉಗ್ರ ಸಂಘಟನೆಯಲ್ಲಿ ಗುರಿತಿಸಿಕೊಂಡವರು ಇಲ್ಲಿನ ಯುವಕರನ್ನು ಬಳಸಿಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸದ್ಯ ಈ ಪ್ರತಿಭಟನೆ ಮಂಗಳೂರು ಪೊಲೀಸರ ತನಿಖೆಯನ್ನೇ ಅನುಮಾನದ ದೃಷ್ಟಿಯಿಂದ ನೋಡಿದಂತಾಗಿದೆ. ಇನ್ನು ಪೊಲೀಸರ ಮೇಲೆ ಹಲ್ಲೆ ನಡೆದಿದ್ದರು, ಪೊಲೀಸ್ ಕಮಿಷನರ್ ಕಣ್ಮುಚ್ಚಿ ಕುಳಿತಿರುವುದು ಕೂಡ ಪೊಲೀಸ್ ಸಿಬ್ಬಂದಿಯಲ್ಲಿ ಆತಂಕ ಉಂಟುಮಾಡುವಂತೆ ಮಾಡಿದೆ. ಅದೇನೆ ಇದ್ದರೂ ಈ ಎಲ್ಲಾ ಗೊಂದಲಗಳಿಗೆ ಸರಿಯಾದ ತನಿಖೆಯಿಂದ ಇಲಾಖೆ ಉತ್ತರ ಕೊಡಬೇಕಾಗಿದೆ.
Published On - 11:41 am, Thu, 24 December 20