ಯಾದಗಿರಿ, ಜು.17: ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ ಹಿನ್ನಲೆ ಪ್ರೇಮಿಗಳಿಬ್ಬರು(Lovers) ಪೊಲೀಸರ ಮೊರೆ ಹೋದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಮೇಲ್ಜಾತಿಯ ಯುವತಿ ಜೊತೆ ಕೆಳ ಜಾತಿಯ ಯುವಕ ಮದುವೆಯಾಗಲು ಹೊರಟಿದ್ದಾನೆ ಎಂಬ ಕಾರಣಕ್ಕೆ ಕುಟುಂಬಸ್ಥರ ವಿರೋಧ ವ್ಯಕ್ತವಾಗಿದೆ. ಇನ್ನು ಯಾದಗಿರಿ(Yadgiri) ಜಿಲ್ಲೆಯ ಶಹಾಪುರ ತಾಲೂಕಿನ ಹುಲಕಲ್ ಗ್ರಾಮದ ರವಿಕಿರಣ್ ಎಂಬಾತ್ ಧಾರವಾಡ ಮೂಲದ ಸುಪ್ರೀತಾ ಎಂಬಾಕೆಯನ್ನ ಪ್ರೀತಿಸುತ್ತಿದ್ದಾನೆ. ಪರಸ್ಪರ ಪ್ರೀತಿ ಮಾಡಿದ ಜೋಡಿ ಈಗ ಮದುವೆಗೆ ಮುಂದಾಗಿದೆ. ಆದ್ರೆ, ಯುವಕ ದಲಿತ ಸಮುದಾಯಕ್ಕೆ ಸೇರಿದ್ರೆ, ಯುವತಿ ಜಂಗಮ ಸಮುದಾಯಕ್ಕೆ ಸೇರಿದ್ದಾಳೆ. ಇದೆ ಕಾರಣಕ್ಕೆ ಯುವತಿ ಕುಟುಂಬಸ್ಥರು ಮದುವೆಗೆ ಒಪ್ಪುತ್ತಿಲ್ಲ. ಮೇಲ್ನೋಟಕ್ಕೆ ಮದುವೆ ಮಾಡಿಸುತ್ತೆವೆ ಎಂದು ಹೇಳುತ್ತಿದ್ದಾರೆ. ಆದರೆ ಮದುವೆ ಹೆಸರಲ್ಲಿ ಏನಾದರೂ ಮಾಡುತ್ತಾರೆ ಎಂದು ಪ್ರೇಮಿಗಳಿಗೆ ಭಯ ಶುರುವಾಗಿದೆ.
ಯಾದಗಿರಿ ಮೂಲದ ರವಿಕಿರಣ್ ಸಹೋದರ ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಅದೇ ಕಾಲೇಜಿನಲ್ಲಿ ಸುಪ್ರೀತಾ ಕೂಡ ಪದವಿ ಓದುತ್ತಿದ್ದಾಳೆ. ಸಹೋದರನನ್ನ ನೋಡಿಕೊಂಡು ಮಾತಾಡಿಸಲು ಹೋದಾಗ ರವಿಕಿರಣ್ಗೆ ಸುಪ್ರೀತಾ ಪರಿಚಯವಾಗಿದ್ದಾಳೆ. ಇದೆ ವೇಳೆ ಪರಿಚಯ ಸ್ನೇಹಕ್ಕೆ ತಿರುಗಿದೆ. ಕೆಲ ತಿಂಗಳುಗಳ ಬಳಿಕ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಹೀಗಾಗಿ ಪರಸ್ಪರ ಫೋನ್ನಲ್ಲಿ ಕಳೆದ ಒಂದು ವರ್ಷದಿಂದ ಮಾತಾಡುತ್ತಾ ಬಂದಿದ್ದಾರೆ. ಕೊನೆಗೆ ಇಬ್ಬರು ಮದುವೆಯಾಗಲು ಸಹ ಸಿದ್ದರಾಗಿದ್ದರು. ಈ ವಿಚಾರ ಸುಪ್ರೀತಾ ಪೋಷಕರ ಮುಂದೆ ಹೇಳಿದ್ದಾಳೆ. ಆದ್ರೆ, ಪೋಷಕರು ಯುವಕ ಕೆಳ ಜಾತಿಗೆ ಸೇರಿದ್ದರಿಂದ ಮದುವೆಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ಕೊನೆಗೆ ಇಬ್ಬರು ಮನೆ ಬಿಟ್ಟು ಬಂದು ಮದುವೆಯಾಗಲು ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ:ಕೊಪ್ಪಳ: ಅಂತರ್ಜಾತಿ ವಿವಾಹವಾಗಿದ್ದಕ್ಕೆ ಕುಟುಂಬವೊಂದಕ್ಕೆ ಬಹಿಷ್ಕಾರ, ದೂರು ನೀಡಿದರೂ ಕ್ಯಾರೇ ಅನ್ನದ ಪೊಲೀಸರು
ಬಿಕಾಂ ಎರಡನೇ ಸೆಮಿಸ್ಟರ್ನಲ್ಲಿ ಓದುತ್ತಿರುವ ಸುಪ್ರೀತಾ ಕಳೆದ ಎರಡು ದಿನಗಳ ಹಿಂದೆ, ಪದವಿ ಮುಗಿಸಿರುವ ರವಿಕಿರಣ್ ಜೊತೆಗೆ ಮದುವೆ ಮಾಡಿಕೊಳ್ಳಲು ಧಾರವಾಡದಿಂದ ಯಾದಗಿರಿಗೆ ಮನೆ ಬಿಟ್ಟು ಬಂದಿದ್ದಾಳೆ. ಆದ್ರೆ, ಪೋಷಕರು ಮದುವೆಗೆ ಅಡ್ಡಿ ಪಡಿಸುತ್ತಾರೆ, ಮುಂದೆ ಜೀವಕ್ಕೆ ಹಾನಿಯುಂಟು ಮಾಡುತ್ತಾರೆ ಎನ್ನುವ ಭಯ ಈಗ ಪ್ರೇಮಿಗಳಿಗೆ ಕಾಡುತ್ತಿದೆ. ಹೀಗಾಗಿ ಪೊಲೀಸರ ಮೊರೆ ಹೋಗಿರುವ ಜೋಡಿ, ನಮಗೆ ರಕ್ಷಣೆ ಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಜಾತಿ ಎಂದು ಹೊಡೆದಾಡುವ ಕಾಲದಲ್ಲಿ ಯುವ ಪ್ರೇಮಿಗಳು ಜಾತಿಯ ಸರಪಳಿಯನ್ನ ಹರಿದು ಪ್ರೀತಿಸಿ ಮದುವೆಗೆ ಮುಂದಾಗಿದ್ದಾರೆ. ಆದ್ರೆ, ಪೋಷಕರು ಮುಂದೆ ಏನಾದರೂ ಮಾಡಬಹುದು ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಹೀಗಾಗಿ ಪೊಲೀಸರು ಪ್ರೇಮಿಗಳಿಗೆ ರಕ್ಷಣೆ ಕೊಡುವ ಭರವಸೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ