ಬರದ ನಾಡಲ್ಲೂ ಬಂಗಾರದಂತ ಬೆಳೆ ಬೆಳೆದ ರೈತ; ಸಮಗ್ರ ಕೃಷಿ ಮೂಲಕ ಲಕ್ಷಾಂತರ ರೂ. ಲಾಭ
ಯಾದಗಿರಿ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿಕೊಂಡಿದೆ. ಹನಿ ನೀರು ಸಿಗದೆ ಲಕ್ಷಾಂತರ ರೈತರು ಬೆಳೆಯನ್ನ ಕಳೆದುಕೊಂಡಿದ್ದಾರೆ. ಮಳೆ ಇಲ್ಲದೆ ಸಾಲ ಸೂಲ ಮಾಡಿ ಬೆಳೆ ಹಾಳಾಗಿದೆ.ಇದೆ ಕಾರಣಕ್ಕೆ ರೈತರು ಅಕ್ಷರಶ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ರೆ, ಇದರ ಮದ್ಯೆ ರೈತನೊಬ್ಬ ಬರದ ನಾಡದಲ್ಲೂ ಬಂಗಾರದಂತ ಬೆಳೆಯನ್ನ ಬೆಳೆದು ಲಕ್ಷ ಲಕ್ಷ ಲಾಭ ಪಡೆಯುತ್ತಿದ್ದಾನೆ. ಅಷ್ಟಕ್ಕೂ ಬರದ ನಾಡಿನ ಬಂಪರ್ ರೈತ ಯಾರು ಅಂತೀರಾ? ಈ ಸ್ಟೋರಿ ಓದಿ.
ಯಾದಗಿರಿ, ಮಾ.31: ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಅದರಲ್ಲೂ ಮಳೆ ಇಲ್ಲದ್ದಕ್ಕೆ ರೈತರು(Farmer) ಬೆಳೆಯನ್ನ ಕಳೆದುಕೊಂಡು ಕಂಗಲಾಗಿ ಹೋಗಿದ್ದಾರೆ. ಅದರಲ್ಲೂ ಈಗ ಬೇಸಿಗೆ ಆರಂಭವಾಗಿದ್ದರಿಂದ ದಿನೆ ದಿನೆ ತಾಪಮಾನ ಕೂಡ ಹೆಚ್ಚಾಗ ತೊಡಗಿದೆ. ಕೆರೆ ಕಟ್ಟೆಗಳು ಭತ್ತಿ ಹೋಗುತ್ತಿದ್ದು, ಅಂತರ್ಜಲ ಮಟ್ಟ ಕುಸಿತದಿಂದ ಬೋರವೆಲ್ಗಳು ಬಂದ್ ಆಗಿ ಹೋಗಿದೆ. ಆದ್ರೆ, ಇಂತಹ ಸಂಕಷ್ಟದ ಸಮಯದಲ್ಲೂ ಜಿಲ್ಲೆಯ ಸುರಪುರ(Surapura) ತಾಲೂಕಿನ ಲಕ್ಷ್ಮಿಪುರ ಗ್ರಾಮದ ರೈತ ಶಿವರಾಜ್ ಭರ್ಜರಿಯಾಗಿ ಬೆಳೆ ಬೆಳೆದಿದ್ದಾನೆ. ತನ್ನ ಒಂಬತ್ತು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು ನಾನಾ ಬೆಳೆಗಳನ್ನ ಬೆಳೆದು ವರ್ಷಕ್ಕೆ ಲಕ್ಷ ಲಕ್ಷ ಲಾಭ ಪಡೆಯುತ್ತಿದ್ದಾನೆ.
ದ್ರಾಕ್ಷಿ
ಮೂರು ಎಕರೆಯಲ್ಲಿ ಕಳೆದ ವರ್ಷ ದ್ರಾಕ್ಷಿ ಬೆಳೆಯನ್ನ ಹಾಕಿದ ರೈತನಿಗೆ ಈಗ ಬೆಳೆ ಕೈಗೆ ಬಂದಿದೆ. ಚಿಕೋಟಾದಿಂದ ಸಸಿಗಳನ್ನ ತಂದು ಹಾಕಿದ ರೈತ ಸುಮಾರು 30 ಲಕ್ಷ ಖರ್ಚು ಮಾಡಿ ಬೆಳೆಯನ್ನ ಬೆಳೆದಿದ್ದಾನೆ. ಈ ವರ್ಷ ಆರಂಭದ ವರ್ಷವಾಗಿದ್ದರಿಂದ ಮೊದಲ ಬೆಳೆಯಿಂದ 6.5 ಲಕ್ಷ ಲಾಭ ಪಡೆದಿದ್ದಾನೆ. ಇನ್ನು ಹತ್ತು ವರ್ಷಗಳ ಕಾಲ ಬೆಳೆ ಬರಲಿದೆ. ಸದ್ಯ ಹಸಿ ದ್ರಾಕ್ಷಿ ಮಾರಾಟ ಮಾಡುತ್ತಿದ್ದರಿಂದ ಕಡಿಮೆ ಲಾಭ ಬಂದಿದೆ. ಆದ್ರೆ, ಇದೀಗ ತನ್ನ ಜಮೀನಿನಲ್ಲೇ ಒಣ ದ್ರಾಕ್ಷಿ ಮಾಡಲು ಪ್ಲ್ಯಾನ್ ಮಾಡಿದ್ದಾನೆ. ಹೀಗಾಗಿ ಮುಂದಿನ ವರ್ಷದಿಂದ ವರ್ಷಕ್ಕೆ 20 ಲಕ್ಷ ಲಾಭ ಬರುವ ನಿರೀಕ್ಷೆಯಲ್ಲಿದ್ದಾನೆ.
ಇದನ್ನೂ ಓದಿ:ದೇವನಹಳ್ಳಿ: ಯೂಟ್ಯೂಬ್ ನೋಡಿ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ಭರ್ಜರಿ ಸೇಬು ಬೆಳೆದ ರೈತ\
ಡ್ರ್ಯಾಗನ್ ಫ್ರೂಟ್
ಅಷ್ಟೇ ಅಲ್ದೆ ರೈತ ಶಿವರಾಜ್ ಅವರು, ತನ್ನ ಇನ್ನೊಂದು ಎಕರೆಯಲ್ಲಿ ಕಳೆದ ವರ್ಷ ಡ್ರ್ಯಾಗನ್ ಫ್ರೂಟ್ಸ್ ಬೆಳೆಯನ್ನ ಹಾಕಿದ್ದಾರೆ. ಒಂದು ಲಕ್ಷ ಖರ್ಚು ಮಾಡಿ ಬೆಳೆಯನ್ನ ಬೆಳೆದಿದ್ದ ರೈತನಿಗೆ ಈಗ ಮೊದಲ ಬೆಳೆ ಕೈಗೆ ಬಂದಿದ್ದು, ಬೆಳೆ ಕಟಾವ್ ಮಾಡಿದ್ದಾರೆ. ಮೊದಲ ಬೆಳೆ ಬಂದ ಹಿನ್ನಲೆ ಸುಮಾರು 50 ಸಾವಿರ ಲಾಭ ಪಡೆದಿದ್ದು, ಇನ್ನು ಈ ಬೆಳೆ ಕೂಡ ಹತ್ತು ವರ್ಷಗಳ ಕಾಲ ಬರಲಿದ್ದು, ಲಕ್ಷಾಂತರ ಲಾಭ ಬರುವ ನಿರೀಕ್ಷೆಯಲ್ಲಿದ್ದಾರೆ.
ದಾಳಿಂಬೆ
ಐದು ಎಕರೆಯಲ್ಲಿ ಮೂರು ವರ್ಷಗಳ ಹಿಂದೆ ದಾಳಿಂಬೆ ಬೆಳೆಯನ್ನ ಬೆಳೆದಿದ್ದರು. ದಾಳಿಂಬೆ ಬೆಳೆಯಿಂದ ಕೂಡ ಲಕ್ಷಾಂತರ ರೂ. ಲಾಭ ಪಡೆದ ಬಳಿಕ ಈಗ ಇದೆ ಐದು ಎಕರೆಯಲ್ಲಿ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಐದು ಎಕರೆಯಲ್ಲಿ ಮೂರು ಲಕ್ಷ ಖರ್ಚು ಮಾಡಿ ಕುರುಗೋಡನಿಂದ ಅಂಜೂರ್ ಬೆಳೆಯ ಸಸಿಗಳನ್ನ ತಂದು ಹಾಕಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಮೊದಲ ಬಾರಿ ಅಂಜೂರ್ ಬೆಳೆ ಬೆಳೆಯನ್ನ ರೈತ ಶಿವರಾಜ್ ಬೆಳೆಯೋಕೆ ಮುಂದಾಗಿದ್ದಾರೆ. ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇರುವ ಬೆಳೆಯಾಗಿದ್ದರಿಂದ ಮುಂದಿನ ವರ್ಷದಿಂದ ಲಕ್ಷಾಂತರ ರೂ. ಲಾಭ ಬರುವ ನಿರೀಕ್ಷೆಯಲ್ಲಿದ್ದಾರೆ. ಈ ಬೆಳೆ ಕೂಡ ಹತ್ತು ವರ್ಷಗಳ ಕಾಲ ಬೆಳೆ ಬರೋದ್ದರಿಂದ ಮುಂದಿನ ವರ್ಷದಿಂದ ಲಕ್ಷಾಂತರ ರೂ.ಲಾಭ ಬರಲಿದೆ.
ಒಂದೇ ಬೋರ್ವೆಲ್
ಇನ್ನು ಒಂಬತ್ತು ಎಕರೆಯಲ್ಲಿ ತೋಟಗಾರಿಕೆ ಬೆಳೆಯನ್ನ ಬೆಳೆಯೋಕೆ ಒಂದೆ ಒಂದು ಬೋರ್ವೆಲ್ ನೀರು ಬಳಸುತ್ತಿದ್ದಾರೆ. ಇನ್ನು ತೋಟಗಾರಿಕೆ ಇಲಾಖೆಯಿಂದ ತರಬೇತಿ ಪಡೆದು ಸರ್ಕಾರದಿಂದ ಬರುವ ಸೌಲತ್ತುಗಳನ್ನ ಪಡೆದು ,ರೈತ ಶಿವರಾಜ್ ಅವರು ಬೆಳೆಯನ್ನ ಬೆಳೆದು ಇತರೆ ಮಾದರಿಯಾಗಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಹೇಳಿದ್ದಾರೆ. ಒಟ್ಟಿನಲ್ಲಿ ಭೀಕರ ಬರ, ದಿನೆ ದಿನೆ ಹೆಚ್ಚಾಗುತ್ತಿರುವ ತಾಪಮಾನದ ಮದ್ಯ ರೈತ ಶಿವರಾಜ್ ಭರ್ಜರಿಯಾಗಿ ಬೆಳೆಯನ್ನ ಬೆಳೆದು ಬೇರೆ ರೈತರಿಗೆ ಮಾದರಿಯಾಗಿದ್ದಾರೆ. ಇನ್ನು ಸಾಂಪ್ರದಾಯಿಕ ಬೆಳೆಯನ್ನ ಬೆಳೆದು ಕೈ ಸುಟ್ಟುಕೊಳ್ಳುತ್ತಿರುವ ರೈತರು, ರೈತ ಶಿವರಾಜ್ ಅವರನ್ನು ನೋಡಿ ಕಲಿಯಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ