Yadgiri News: ಟ್ಯಾಂಕರ್ ಹಾಗೂ ಕಾರು ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 6 ಜನ ದುರ್ಮರಣ
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದ ಒಂದೇ ಕುಟುಂಬದ 6 ಜನರು ಮೃತಪಟ್ಟಿದ್ದಾರೆ. ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದೆ.
ಯಾದಗಿರಿ: ಟ್ಯಾಂಕರ್ ಹಾಗೂ ಕಾರು ನಡುವೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, 6 ಜನ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಗುರುಮಠಕಲ್ ಬಳಿ ನಡೆದಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದ ಒಂದೇ ಕುಟುಂಬದ 1 ವರ್ಷದ ಹೆಣ್ಣುಮಗು ಸೇರಿ ಒಟ್ಟು 6 ಜನ ಮೃತಪಟ್ಟಿದ್ದಾರೆ. ಒಂದೇ ಕಾರ್ನಲ್ಲಿ ಒಟ್ಟು ಏಳು ಜನ ಪ್ರಯಾಣಿಸುತ್ತಿದ್ದು, ಮೂರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸೊ ಮಾರ್ಗ ಮಧ್ಯೆ ನಾಲ್ವರು ಮೃತಪಟ್ಟಿದ್ದಾರೆ. ಮೃತರ ಪೈಕಿ ಬಾಲಕಿ ಸೇರಿ ಮೂವರು ಮಹಿಳೆಯರು, ಮೂವರು ಪುರುಷರು ಸಾವನ್ನಪ್ಪಿದ್ದಾರೆ. ತೆಲಂಗಾಣದ ಕೊಡಂಗಲ್ಗೆ ಜವಳ ಕಾರ್ಯಕ್ಕೆ ಹೋಗಿದ್ದು, ಹಟ್ಟಿಗೆ ವಾಪಸಾಗುವಾಗ ಭೀಕರ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಗುರುಮಠಕಲ್ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಮೃತ ಪಟ್ಟವರ ವಿವರ
ಮಹ್ಮದ್ ವಾಜೀದ್ ಹುಸೇನ್ (39), ಮಹ್ಮದ್ ಮಜರ್ ಹುಸೇನ್ (79), ನೂರ್ ಜಹಾನ್ ಬೇಗಂ (70), ಹೀನಾ ಬೇಗಂ (30), ಇಮ್ರಾನ್ (22), ಮಗು ಉಮೇಜಾ (ಆರು ತಿಂಗಳು), ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಮಹ್ಮದ್ ಫಾಜೀಲ್ ಹುಸೇನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯಾದಗಿರಿ SP ವೇದಮೂರ್ತಿ ಪ್ರತಿಕ್ರಿಯೆ
ಅಪಘಾತ ಕುರಿತು ಯಾದಗಿರಿ SP ವೇದಮೂರ್ತಿ ಪ್ರತಿಕ್ರಿಯೆ ನೀಡಿದ್ದು, ಕಾರು ಹಾಗೂ ಗೂಡ್ಸ್ ವಾಹನದ ಮಧ್ಯೆ ಅಪಘಾತ ನಡೆದಿದೆ. ಕಾರಿನಲ್ಲಿದ್ದ ಒಂದೇ ಕುಟುಂಬದ 6 ಜನರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಫಾಜಿಲ್ ಎಂಬ ಮಗುಗೆ ಗಾಯಗಳಾಗಿವೆ. ಗಾಯಾಳು ಮಗು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಡಿ ಕೊಡುವ ಕಾರ್ಯಕ್ರಮ ಮುಗಿಸಿ ಬರುವಾಗ ಘಟನೆ ನಡೆದಿದೆ ಎಂದು ಹೇಳಿದರು.
ವಾಜೀದ್ ಹುಸೇನ್ ಸಾವಿನಿಂದ ನೊಂದಿರೋ ಕುಟುಂಬ
ಅನೇಕರ ಜೀವ ಉಳಿಸಿದ್ದ ಮಹ್ಮದ ವಾಜೀದ್ ಹುಸೇನ್, ಅಪಘಾತ ಸೇರಿದಂತೆ ಅನೇಕ ಕಡೆ ಮುಂದೆ ನಿಂತು ಜನರ ಜೀವ ರಕ್ಷಣೆ ಮಾಡುತ್ತಿದ್ದ. ಅಪಘಾತಗಳಾದಾಗ ಪೊಲೀಸರಿಗಿಂತ ಮೊದಲು ಸ್ಥಳಕ್ಕೆ ಹೋಗಿ ಗಾಯಾಳುಗಳ ರಕ್ಷಣೆ ಮಾಡುತ್ತಿದ್ದ. ಅನೇಕ ಸಲ ರಕ್ತದಾನ ಮಾಡಿ ಅನೇಕರ ಜೀವ ಕಾಪಾಡಿದ್ದ. ಆದರೆ ಆತನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ವಾಜೀದ್ ಹುಸೇನ್ ಮತ್ತು ಕುಟುಂಬದವರು ಮೃತಪಟ್ಟಿದ್ದಾರೆ. ತುರ್ತು ಚಿಕಿತ್ಸೆ ಸಿಕ್ಕಿದ್ದರೆ ಅನೇಕರು ಬದುಕುಳಿಯುವ ಸಾಧ್ಯತೆ ಇತ್ತು. ವಾಜೀದ್ ಹುಸೇನ್ ಸಾವಿನಿಂದ ಕುಟುಂಬದವರು ನೊಂದಿದ್ದಾರೆ.
Published On - 6:50 am, Fri, 5 August 22