ಯಾದಗಿರಿ: ಯಾದಗಿರಿ ಪೊಲೀಸ್ ಠಾಣೆಯ ಪಿಎಸ್‌ಐ ಪರಶುರಾಮ ಅವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಳಿ ಹಣ ಪಡೆದು ಸಂಧಾನ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಮೃತ ಪರಶುರಾಮ ಅವರ ಮಾವ ಹಾಗೂ ಕುಟುಂಬಸ್ಥರ ವಿರುದ್ಧ ಈ ಆರೋಪ ಕೇಳಿಬಂದಿದೆ. ಆದರೆ, ನಾವು ಯಾರ ಬಳಿಯೂ ಹಣ ಪಡೆದಿಲ್ಲ ಎಂದು ಪರಶುರಾಮ ಅವರ ಮಾವ ವೆಂಕಟಸ್ವಾಮಿ ಯಾದಗಿರಿ ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ನಾವು ಅಳಿಯನನ್ನು ಕಳೆದುಕೊಂಡ ದುಃಖದಿಂದ ಇನ್ನೂ ಹೊರಬಂದಿಲ್ಲ. ಆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಇನ್ನೂ ನಮಗೆ ಕೊಟ್ಟಿಲ್ಲ. ಈಗಾಗಲೇ ಈ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ನಡೆಸುತ್ತಿದ್ದಾರೆ. ಸಿಐಡಿ ಅಧಿಕಾರಿಗಳು ಸರಿಯಾಗಿಯೇ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ನಮ್ಮ ಮನೆಗೆ ಬಂದು ನಮ್ಮ ಮಗಳಿಂದ ಮಾಹಿತಿ ಪಡೆದಿದ್ದಾರೆ. ನಮ್ಮ ಹೋರಾಟಕ್ಕೆ ಸಾಕಷ್ಟು ಸಂಘಟನೆಗಳು ಸಹಕಾರ ನೀಡಿದ್ದವು. ಹೋರಾಟಗಾರರು ಸಹ ಯಾರಿಂದಲೂ ಹಣ ಪಡೆದಿಲ್ಲ ಎಂದು ವೆಂಕಟಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಪಿಎಸ್ಐ ಪರಶುರಾಮ ನಿಗೂಢ ಸಾವು ಕೇಸ್: ಯಾದಗಿರಿಗೆ ಎಂಟ್ರಿಕೊಟ್ಟ ಸಿಐಡಿ ತಂಡ, ಇಂಚಿಂಚು ಮಾಹಿತಿ ಕಲೆ
ಯಾದಗಿರಿ ಪಿಎಸ್ಐ ಪರಶುರಾಮ ಸಾವು ಪ್ರಕರಣದಲ್ಲಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಮತ್ತು ಅವರ ಮಗ ಪಂಪಣ್ಣ ಗೌಡ ಕಾರಣ ಎಂದು ಪರಶುರಾಮ ಅವರ ಪತ್ನಿ ಕೇಸ್ ದಾಖಲಿಸಿದ್ದರು. ಈ ಸಾವಿನ ಕೇಸ್ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಪರಶುರಾಮ ಅವರ ಸಾವಿಗೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ತುನ್ನೂರ್ ಹಾಗೂ ಪುತ್ರ ಪಂಪನಗೌಡ ವಿರುದ್ಧ ಆರೋಪ ವಿಚಾರವಾಗಿ ಆರೋಪಿಗಳ ಬಳಿ ದುಡ್ಡು ಪಡೆದು ಸಂದಾನ ಮಾಡಿಕೊಂಡಿರುವ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ಪಿಎಸ್ಐ ಪರಶುರಾಮ ಸಾವು ಕೇಸ್: ರಾಜ್ಯ ಸರ್ಕಾರದಿಂದ ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ
ಮೃತ ಪರಶುರಾಮ ಅವರ ಮಾವ ಹಾಗೂ ಕುಟುಂಬಸ್ಥರು ಸಂಧಾನ ಮಾಡಿಕೊಂಡಿರುವ ಚರ್ಚೆ ನಡೆಯುತ್ತಿದ್ದು, ಯಾದಗಿರಿ ನಗರದಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ಮೃತ ಪರಶುರಾಮ ಮಾವ ವೆಂಕಟಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಏನಿದು ಪ್ರಕರಣ?:
ಯಾದಗಿರಿ ಪಿಎಸ್ಐ ಪರಶುರಾಮ ಅವರ ಸಾವು ಪ್ರಕರಣ ಸಾಕಷ್ಟು ಅನುಮಾನಗಳಿಗೆ ಕಾರಣವಾಗುತ್ತಿದೆ. ಪಿಎಸ್‌ಐ ವರ್ಗಾವಣೆ ವಿಚಾರವಾಗಿ ಶಾಸಕ ಚೆನ್ನಾರೆಡ್ಡಿ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ವರ್ಗಾವಣೆಗಾಗಿ ಭಾರೀ ಲಂಚದ ಬೇಡಿಕೆ ಇಡಲಾಗಿತ್ತು ಎಂದು ಪರಶುರಾಮ ಅವರ ಕುಟುಂಬಸ್ಥರು ಆರೋಪಿಸಿದ್ದರು. ಹೀಗಾಗಿ, ಈ ನಿಗೂಢ ಸಾವಿನ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು.
ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ