
ಯಾದಗಿರಿ, (ಜೂನ್ 26): ಜಿಲ್ಲೆಯ ಬೆಂಡೆಬೆಂಬಳಿ ಗ್ರಾಮದಲ್ಲಿ (Bendebembli village) ಹಿಂದೂ–ಮುಸ್ಲಿಂ (Hindu Muslim) ಭಾವೈಕ್ಯತೆ ಸಮ್ಮಿಲನವಾಗಿದೆ. ಹೌದು…ದೇವಸ್ಥಾನವನ್ನು (Temple) ತೆಗೆದು ದರ್ಗಾವನ್ನು ನಿರ್ಮಾಣ ಮಾಡಿ ಅದಕ್ಕೆ ಹಿಂದೂ ವ್ಯಕ್ತಿ ಹೆಸರು ನಾಮಕರಣ ಮಾಡಲಾಗಿದೆ. ಈ ರೀತಿಯ ಭಾವೈಕ್ಯತೆ ಯಾದಗಿರಿಯ (Yadgir) ಬೆಂಡೆಬೆಂಬಳಿ ಗ್ರಾಮ ಸಾಕ್ಷಿಯಾಗಿದೆ. ಹಿಂದೂ ಮುಸ್ಲಿಂ ಎನ್ನದೇ ಇಡೀ ಗ್ರಾಮದ ಜನ ಸೇರಿ ಲಕ್ಷಾಂತರ ರೂ. ಖರ್ಚು ಮಾಡಿ ಹಿಂದೂ ವ್ಯಕ್ತಿ ಹೆಸರಿನಲ್ಲಿ ದರ್ಗಾವನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಬೆಂಡೆಬೆಂಬಳಿ ಎನ್ನುವ ಒಂದು ಹಳ್ಳಿ ಸಮಾಜಕ್ಕೆ ಭಾವೈಕ್ಯತೆ ಸಂದೇಶ ಸಾರಿದೆ. ಇನ್ನು ದೇಗುಲವನ್ನು ತೆಗೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದರ್ಗಾವನ್ನು ಏಕೆ ನಿರ್ಮಿಸಲಾಯ್ತು? ಮುಸ್ಲಿಮರ ದರ್ಗಾಕ್ಕೆ ಏಕೆ ಹಿಂದೂ ವ್ಯಕ್ತಿ ಹೆಸರಿಡಲಾಯ್ತು ಎನ್ನುವುದಕ್ಕೆ ಒಂದು ಕಾರಣ ಸಹ ಇದೆ. ಅದು ಈ ಕೆಳಗಿನಂತಿದೆ ನೊಡಿ.
ಇನ್ನು ಈ ದರ್ಗಾ ನಿರ್ಮಾಣಕ್ಕೂ ಮುನ್ನ ಈ ಜಾಗದಲ್ಲಿ ಚಿಕ್ಕದೊಂದು ಮಂದಿರವಿತ್ತು. ಅದೆ ಈ ದರ್ಗಾದಲ್ಲಿರುವ ಈರಣ್ಣನ ಮುತ್ಯಾನ ಮಂದಿರ. 283 ವರ್ಷಗಳ ಹಿಂದೆ ಗ್ರಾಮಸ್ಥರು ಮಂದಿರವನ್ನ ನಿರ್ಮಾಣ ಮಾಡಿ ನಿತ್ಯ ಪೂಜೆಯನ್ನ ಮಾಡುತ್ತಿದ್ದರು. ಈಗ ಚಿಕ್ಕದಾಗಿದ್ದ ಮಂದಿರವನ್ನ ತೆಗೆದು ಹಾಕಿ ದರ್ಗಾವನ್ನ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ಈ ದರ್ಗಾಕ್ಕೆ ಈರಣ್ಣ ಮುತ್ಯಾನ ದರ್ಗಾ ಎಂದು ನಾಮಕರಣ ಮಾಡಿದ್ದಾರೆ. ಅರೇ ಇದೇನಿದು ಹಿಂದೂ ವ್ಯಕ್ತಿ ಹೆಸರನ್ನು ಮುಸ್ಲಿಮರ ದರ್ಗಾಕ್ಕೆ ಇಟ್ಟಿದ್ದಾರೆ ಎಂದು ಅಚ್ಚರಿಯಾದರೂ ಸತ್ಯ.
ಬೆಂಡೆಬೆಂಬಳಿ ಗ್ರಾಮದ ಜನರ ಸಮಾಜಕ್ಕೆ ಮಾದರಿ ಹಾಗೂ ಭಾವೈಕ್ಯತೆಯ ಸಂದೇಶವನ್ನ ಸಾರುವ ಕೆಲಸ ಮಾಡಿದ್ದಾರೆ. ಯಾಕೆಂದ್ರೆ ಹಿಂದೂ ವ್ಯಕ್ತಿ ಹೆಸರಲ್ಲಿ ದರ್ಗಾ ನಿರ್ಮಾಣ ಮಾಡಿದ್ದು, ಇಂದು (ಜೂನ್ 26) ದರ್ಗಾವನ್ನ ಲೋಕಾರ್ಪಣೆ ಮಾಡಿ ಜನರಿಗೆ ದರ್ಶನಕ್ಕಾಗಿ ವ್ಯವಸ್ಥೆ ಮಾಡಿದ್ದಾರೆ. ಅದರಂತೆ ಇಡೀ ಗ್ರಾಮದ ಜನ ಇವತ್ತು ನೈವೇದ್ಯವನ್ನ ಮಾಡಿಕೊಂಡು ಬಂದು ಈ ದರ್ಗಾದಲ್ಲಿರುವ ದೇವರಿಗೆ ಅರ್ಪಣೆ ಮಾಡಿದ್ದಾರೆ. ಈ ದರ್ಗಾಕ್ಕೆ ಈಗಿನಿಂದ ಗ್ರಾಮಸ್ಥರೆಲ್ಲ ಸೇರಿ ಈರಣ್ಣನ ಮುತ್ಯಾನ ದರ್ಗಾ ಎಂದು ಹೆಸರಿಡಲಾಗಿದೆ.
ಕಳೆದ 283 ವರ್ಷಗಳ ಹಿಂದೆ ಗ್ರಾಮದಲ್ಲಿ ನಡೆಯುವ ಮೊರಂನಲ್ಲಿ ಈರಣ್ಣ ಎಂಬವರು ಕಾಸಿಂ ಎಂಬ ಅಲೈ ದೇವರು ಹಿಡಿಯುತ್ತಿದ್ದರು. ಅಲೈ ದೇವರು ಹಿಡಿಯುವಾಗ ಈರಣ್ಣ ಮುತ್ಯಾ ದೈವ ಶಕ್ತಿಯಿಂದ ಸಾಕಷ್ಟು ಪವಾಡಗಳನ್ನ ಮಾಡಿ ತೋರಿಸಿದ್ದಾರೆ. ಈ ಪವಾಡವನ್ನ ನೋಡಿದ್ದ ಆಗಿನ ಹಿರಿಯರು ಹೇಳಿದ ಮಾತನ್ನ ಈಗಿನ ಜನ ಕೇಳಿಕೊಂಡು ಬರುತ್ತಿದ್ದಾರೆ. ಆದ್ರೆ ಮೊರಂನ ಕಾಸಿಂಸಾಬ್ ಅಲೈ ದೇವರು ಹಿಡಿಯುತ್ತಿದ್ದ ಈರಣ್ಣ ಮುತ್ಯಾ ಸಾವನ್ನಪ್ಪಿದ್ದಾಗ ಆಗಿನ ಕಾಲದಲ್ಲಿ ಗ್ರಾಮದಲ್ಲಿ ಸಣ್ಣದೊಂದು ಈರಣ್ಣ ಮುತ್ಯಾನ ದೇವಸ್ಥಾನ ನಿರ್ಮಾಣ ಮಾಡಿದ್ದರಂತೆ. ಅದೆ ದೇವಸ್ಥಾನದ ದರ್ಶನ ಪಡೆಯುತ್ತಾ ಪೂಜೆಗಳನ್ನ ಮಾಡುತ್ತಾ ಬರಲಾಗಿತ್ತು.
ಆದ್ರೆ ಕಳೆದ ಕೆಲ ವರ್ಷಗಳ ಹಿಂದೆ ಈರಣ್ಣ ಮುತ್ಯಾ ವಂಶಸ್ಥರ ಕನಸಲ್ಲಿ ಬಂದು ದೇವಸ್ಥಾನದ ಜಾಗದಲ್ಲಿ ದರ್ಗಾ ನಿರ್ಮಾಣ ಮಾಡುವಂತೆ ಕಾಡಿಸುತ್ತಿದ್ರಂತೆ. ಈ ವಿಚಾರವನ್ನು ಕುಟುಂಬಸ್ಥರು ಗ್ರಾಮಸ್ಥರು ಮುಂದೆ ಹೇಳಿದ್ದಾರೆ. ಇದೆ ಕಾರಣಕ್ಕೆ ಗ್ರಾಮಸ್ಥರು ಎಲ್ಲರೂ ಸೇರಿ ದರ್ಗಾ ನಿರ್ಮಾಣಕ್ಕೆ ಒಪ್ಪಿದ್ದಾರೆ. ಹೀಗಾಗಿ ಗ್ರಾಮದವರೆಲ್ಲ ಸೇರಿ ತಮಗೆ ಕೈಲಾದಷ್ಟು ದೇಣಿಗೆ ನೀಡಿ ದರ್ಗಾ ನಿರ್ಮಾಣಕ್ಕೆ ಆರ್ಥಿಕವಾಗಿ ಸಾಹಯ ಮಾಡಿದ್ದಾರೆ. ಹೀಗಾಗಿ ಈಗ ಸುಮಾರು 40 ಲಕ್ಷ ಖರ್ಚು ಮಾಡಿ ಸುಸಜ್ಜಿತವಾದ ದರ್ಗಾವನ್ನ ನಿರ್ಮಾಣ ಮಾಡಿದ್ದಾರೆ.
ಒಟ್ಟಿನಲ್ಲಿ ಕಳೆದ ಎರಡು ದಶಕಕ್ಕೂ ಹಿಂದೆ ನಡೆದ ಘಟನೆಯನ್ನ ಗ್ರಾಮಸ್ಥರು ನೆನಪಲ್ಲಿಟ್ಟುಕೊಂಡು ಈಗ ದರ್ಗಾ ನಿರ್ಮಾಣ ಮಾಡಿದ್ದಾರೆ. ದರ್ಗಾ ನಿರ್ಮಾಣ ಮಾಡಿದಷ್ಟೇ ಅಲ್ದೇ ದರ್ಗಾಕ್ಕೆ ಭಾವೈಕ್ಯತೆಯ ಸಂದೇಶ ಸಾರುವ ಹೆಸರನ್ನ ಇಟ್ಟಿದ್ದಾರೆ. ಈರಣ್ಣ ಮುತ್ಯಾನ ದರ್ಗಾ ನಿರ್ಮಾಣ ಮಾಡಿ ಸರ್ವ ಧರ್ಮಗಳ ಐಕೈತೆಯನ್ನ ಎತ್ತಿ ತೋರಿಸಿದ್ದಾರೆ.
Published On - 7:10 pm, Thu, 26 June 25