ವೈದ್ಯರ ನಿರ್ಲಕ್ಷ್ಯ ಆರೋಪ: ಹಾವೇರಿಯಲ್ಲಿ ತಾಯಿ ಗರ್ಭದಿಂದ ಜೀವಂತ ಹೊರ ಬರಲೇ ಇಲ್ಲ ಮಗು!

ಯಾದಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಹೊಟ್ಟೆಯಲ್ಲೇ ಗಂಡು ಮಗು ಸಾವನ್ನಪ್ಪಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸರಿಯಾದ ಚಿಕಿತ್ಸೆ ಮತ್ತು ಬೆಡ್ ಸಿಗದ ಕಾರಣ ಈ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಗುವಿನ ಮೃತದೇಹದೊಂದಿಗೆ ಆಸ್ಪತ್ರೆ ಮುಂದೆ ಕುಟುಂಬಸ್ಥರು ಪ್ರತಿಭಟನೆ ನಡೆಸಿ, ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯ ಆರೋಪ: ಹಾವೇರಿಯಲ್ಲಿ ತಾಯಿ ಗರ್ಭದಿಂದ ಜೀವಂತ ಹೊರ ಬರಲೇ ಇಲ್ಲ ಮಗು!
ಸಾಂದರ್ಭಿಕ ಚಿತ್ರ
Updated By: ಪ್ರಸನ್ನ ಹೆಗಡೆ

Updated on: Dec 07, 2025 | 2:08 PM

ಯಾದಗಿರಿ, ಡಿಸೆಂಬರ್​​ 07: ಪ್ರಪಂಚ ನೋಡುವ ಮೊದಲೇ ತಾಯಿ ಹೊಟ್ಟೆಯಲ್ಲೇ ಗಂಡು ಮಗು ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ನಗರದಲ್ಲಿರುವ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿಬಂದಿದ್ದು, ಹೆರಿಗೆ ನೋವಿನಿಂದ ಮಹಿಳೆ ನರಳುತ್ತಿದ್ದರೂ ಆಸ್ಪತ್ರೆಯಲ್ಲಿ ಬೆಡ್ ಕೊಡದೆ, ಚಿಕಿತ್ಸೆ ನೀಡಿಲ್ಲ ಎಂದು ದೂರಲಾಗಿದೆ. ಮಗುವಿನ ಮೃತದೇಹದ ಜೊತೆ ಆಸ್ಪತ್ರೆ ಮುಂದೆ ಕುಳಿತು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಘಟನೆ ಏನು?

ಯಾದಗಿರಿ ತಾಲೂಕಿನ ಬಳಿಚಕ್ರ ತಾಂಡದ ನೀಲಬಾಯಿ ಎಂಬ ಮಹಿಳೆಗೆ ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಅವರನ್ನು ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕುಟುಂಬಸ್ಥರು ಕರೆತಂದಿದ್ದರು. ಆದರೆ ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ಸರಿಯಾಗಿ ಸ್ಪಂದಿಸಿಲ್ಲ. ಅವರಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ್ದಲ್ಲದೆ ಕನಿಷ್ಠ ಬೆಡ್​​ ಕೂಡ ನೀಡಿಲ್ಲ. ಇವತ್ತು ಬೆಳಿಗ್ಗೆ ಅವರಿಗೆ ರಕ್ತಸ್ರಾವ ಶುರುವಾದ ಕಾರಣ ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಮಗುವನ್ನು ಹೊರತೆಗೆದಿದ್ದಾರೆ. ಆದರೆ ದುರಾದ್ರಷ್ಟವಶಾತ್​​ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ.

ಇದನ್ನೂ ಓದಿ: ಅಳಿಯನ ಜೊತೆ ಅಕ್ರಮ ಸಂಬಂಧ ಆರೋಪ; ಮಹಿಳೆ ಮೇಲೆ ಕುಟುಂಬಸ್ಥರಿಂದಲೇ ಅಮಾನವೀಯ ಕೃತ್ಯ

ಸಮಯಕ್ಕೆ ಸರಿಯಾಗಿ ನೀಲಬಾಯಿ ಅವರಿಗೆ ಹೆರಿಗೆ ಮಾಡಿಸಿದ್ದರೆ ಮಗು ಬದುಕುತ್ತಿತ್ತು ಎಂದು ಕುಟುಂಬಸ್ಥರು ಕಿಡಿ ಕಾರಿದ್ದು, ನಿರ್ಲಕ್ಷ್ಯ ವಹಿಸಿದ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮೃತ ನವಜಾತ ಶಿಶುವಿನ ಶವದ ಜೊತೆ ಆಸ್ಪತ್ರೆ ಮುಂದೆ ಕಣ್ಣೀರು ಹಾಕುತ್ತಾ ಪ್ರತಿಭಟನೆ ನಡೆಸಿದ್ದಾರೆ. ನೀಲಬಾಯಿ ದೇವಪ್ಪ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, 9 ವರ್ಷಗಳ ಬಳಿಕ ಈಗ ಗಂಡು ಮಗು ಆಗಿತ್ತು. ಆದರೆ, ಮಗು ತಾಯಿಯ ಹೊಟ್ಟೆಯಲ್ಲೇ ಮೃತಪಟ್ಟಿರೋದು ಕುಟುಂಬಸ್ಥರ ದುಃಖ ಇಮ್ಮಡಿಗೊಳಿಸಿದೆ.

ಇದೇ ಮಾದರಿಯ ಘಟನೆ ಕೆಲ ದಿನಗಳ ಹಿಂದೆ ಹಾವೇರಿಯಲ್ಲೂ ನಡೆದಿತ್ತು. ಆಸ್ಪತ್ರೆ ಶೌಚಾಲಯಕ್ಕೆ ಹೋಗೋ ಮಾರ್ಗದಲ್ಲೇ ಮಹಿಳೆಗೆ ಹೆರಿಗೆಯಾದ ಪರಿಣಾಮ, ಆಗತಾನೇ ಜನಿಸಿದ ನವಜಾತ ಶಿಶುವಿಗೆ ಪೆಟ್ಟಾಗಿ ಮಗು ಮೃತಪಟ್ಟಿತ್ತು. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರು , ನರ್ಸ್​ಗಳ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿಯಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಆದ್ರೆ, ಆರೋಪ ನಿರಾಕರಿಸಿದ್ದ ಆಸ್ಪತ್ರೆಯ ವೈದ್ಯರು, ಮಗು ಹೊಟ್ಟೆಯಲ್ಲೇ ಮೃತಪಟ್ಟಿತ್ತು ಎಂದು ಸ್ಪಷ್ಟನೆ ನೀಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.