ಅಳಿಯನ ಜೊತೆ ಅಕ್ರಮ ಸಂಬಂಧ ಆರೋಪ: ಮಹಿಳೆ ಮೇಲೆ ಕುಟುಂಬಸ್ಥರಿಂದಲೇ ಅಮಾನವೀಯ ಕೃತ್ಯ
ಅಳಿಯನ ಜೊತೆ ಅಕ್ರಮ ಸಂಬಂಧ ಆರೋಪ ಹಿನ್ನಲೆ ಕುಟುಂಬಸ್ಥರೇ ಮಹಿಳೆಯೋರ್ವರನ್ನ ನಗ್ನಗೊಳಿಸಿ, ತಲೆ ಬೋಳಿಸಿ ವಿಕೃತಿ ಮೆರೆದಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ ತಾಂಡಾದಲ್ಲಿ ನಡೆದಿದೆ. ಅಕ್ಟೋಬರ್ 16ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಯಾದಗಿರಿ/ಬೆಂಗಳೂರು, ಅಕ್ಟೋಬರ್ 26: ಅಳಿಯನ ಜೊತೆ ಅನೈತಿಕ ಸಂಬಂಧ ಆರೋಪ ಹಿನ್ನಲೆ ಮಹಿಳೆಯೋರ್ವರನ್ನ ನಗ್ನಗೊಳಿಸಿ ಕುಟುಂಬಸ್ಥರೇ ಅಟ್ಟಹಾಸ ಮೆರೆದಿರುವ ಅಮಾನವೀಯ ಘಟನೆ ಯಾದಗಿರಿ (Yadgir) ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ ತಾಂಡಾದಲ್ಲಿ ನಡೆದಿದೆ. ಘಟನೆ ಸಂಬಂಧ 11 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಆ ಪೈಕಿ ಇಬ್ಬರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಕುಟುಂಬಸ್ಥರೇ ಮಹಿಳೆಯನ್ನು ನಗ್ನಗೊಳಿಸಿದ್ದು ಮಾತ್ರವಲ್ಲದೆ, ತಲೆ ಬೋಳಿಸಿ ಸುಣ್ಣ ಹಚ್ಚಿ, ಮೈಮೇಲೆ ಖಾರದ ಪುಡಿ ಎರಚಿ ದೌರ್ಜನ್ಯ ಎಸಗಿದ್ದಾರೆ. ಅಕ್ಟೋಬರ್ 16ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ದೌರ್ಜನ್ಯಕ್ಕೊಳಗಾದ ಮಹಿಳೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಅ.17ರಂದು ಈ ಬಗ್ಗೆ ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಕಲಬುರಗಿಯಲ್ಲಿ ಇರುವ ತನ್ನ ಚಿಕ್ಕಮ್ಮನ ಮನೆಗೆ ಆಗಾಗ ಹೋಗುತ್ತಿದ್ದರು. ಆಕೆಯ ಅಳಿಯ ಕರೆದುಕೊಂಡು ಹೋಗುವುದು ಮತ್ತು ಕರೆದುಕೊಂಡು ಬರುವ ಕೆಲಸ ಮಾಡುತ್ತಿದ್ದ. ಹೀಗಾಗಿ ಆತನ ಜೊತೆಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ. 11 ಮಂದಿ ಕುಟುಂಬಸ್ಥರು ಸೇರಿ ಮಹಿಳೆ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: 4 ಮಕ್ಕಳ ತಾಯಿ ಕೊಂದು ಆಟೋದಲ್ಲಿ ಶವವಿಟ್ಟು ದುಷ್ಕರ್ಮಿ ಪರಾರಿ
ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಉಳಿದ 9 ಮಂದಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳಾದ ಕಸ್ತೂರಿಬಾಯಿ ಮತ್ತು ಡಾಕಪ್ಪ ಎಂಬವರು ಈಗಾಗಲೇ ಅರೆಸ್ಟ್ ಆಗಿದ್ದು, ಇನ್ನುಳಿದ ವಿಜಯಕುಮಾರ್, ತಿಪ್ಪಣ್ಣ, ರಮೇಶ, ದೇವಿಬಾಯಿ, ತಿಪ್ಪಿಬಾಯಿ, ರೂಪ್ಲಿಬಾಯಿ, ಅನುಸೂಯಾ, ಚಾವಳಿಬಾಯಿ ಮತ್ತು ತಿಪ್ಪಣ್ಣ ನಾಯ್ಕ್ ಪರಾರಿಯಾಗಿದ್ದಾರೆ.
ಹೊತ್ತಿ ಉರಿದ ದಿನಸಿ ಅಂಗಡಿ
ದಿನಸಿ ಅಂಗಡಿಯೊಂದು ಹೊತ್ತಿ ಉರಿದಿರುವ ಘಟನೆ ಬೆಂಗಳೂರಿನ ಬನಶಂಕರಿಯ ಬ್ಯಾಂಕ್ ಕಾಲೋನಿಯಲ್ಲಿ ನಡೆದಿದೆ. ರಾತ್ರಿ 10.30ಕ್ಕೆ ದಿನಸಿ ಅಂಗಡಿಯನ್ನ ಕ್ಲೋಸ್ ಮಾಡಲಾಗಿತ್ತು. ಬಳಿಕ ರಾತ್ರಿ 11 ಗಂಟೆ ವೇಳೆಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಚಾರ ಗೊತ್ತಾಗುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಅಂಗಡಿಯಲ್ಲಿ ಅಡುಗೆ ಎಣ್ಣೆ, ತುಪ್ಪ ಇದ್ದ ಕಾರಣ ಬೆಂಕಿಯ ಜ್ವಾಲೆ ಬೇಗ ಆವರಿಸಿದೆ ಎನ್ನಲಾಗಿದ್ದು, ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



