
ಯಾದಗಿರಿ, ಅಕ್ಟೋಬರ್ 22: ಮುಂಗಾರು ಮಳೆಯ ಅಭಾವದಿಂದಾಗಿ ಕರ್ನಾಟಕವನ್ನು ಭೀಕರ ಬರಗಾಲ ಕಾಡಿದ್ದು, ಅದಾಗಲೇ ಸಾವಿರಾರು ಕೆರೆ ಕಟ್ಟೆಗಳು ನೀರಿಲ್ಲದೆ ಒಣಗಿ ಭಣಗುಡುತ್ತಿವೆ. ಈ ನಡುವೆ ಯಾದಗಿರಿ, ರಾಯಚೂರು, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಬಸವಸಾಗರ ಜಲಾಶಯವೂ ಸಂಪೂರ್ಣ ಖಾಲಿ ಖಾಲಿಯಾಗಿರೋದು ಅನ್ನದಾತರನ್ನು ಕಂಗೆಡಿಸಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯದಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಕುಡಿಯುವ ನೀರಿಗೂ ಸಂಕಷ್ಟ ಎದುರಾಗುವ ಎಲ್ಲ ಲಕ್ಷಣಗಳು ಗೋಚರಿಸಿವೆ.

ಬಸವಸಾಗರ ಜಲಾಶಯ
33.33 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಹಾಲಿ ಕೇವಲ 24 ಟಿಎಂಸಿ ಮಾತ್ರ ನೀರಿನ ದಾಸ್ತಾನಿದೆ. ಈ ಪೈಕಿ 14 ಟಿಎಂಸಿ ಡೆಡ್ ಸ್ಟೋರೇಜ್ ಆಗಿದ್ದರೆ, 6 ಟಿಎಂಸಿ ನೀರನ್ನು ರಿಸರ್ವ್ ಆಗಿ ಇಡಲಾಗುತ್ತದೆ. ಹೀಗಾಗಿ ಬಳಕೆಗೆ ಸಿಗೋದು ಕೇವಲ 4 ಟಿಎಂಸಿ ಮಾತ್ರವಾಗಿದೆ. ಈ 4 ಟಿಎಂಸಿ ನೀರಲ್ಲೇ ಅಗತ್ಯತೆಗಳನ್ನು ಪೂರೈಸಿಕೊಳ್ಳಬೇಕಿದೆ. ಮುಂಗಾರು ಬೆಳೆಗೆ ನೀರಿನ ಕೊರತೆ ಹಿನ್ನಲೆ ವಾರಬಂದಿ ಮೂಲಕ ನೀರು ಹರಿಸಲಾಗುತ್ತಿದ್ದು, ಪ್ರತಿ ಬಾರಿ ನೀರು ಹೆಚ್ಚಿನ ಪ್ರಮಾಣದಲ್ಲಿ ಇರುತ್ತಿರುವ ಕಾರಣ ಮೊದಲ ಬೆಳೆಗೆ ನಿರಂತರವಾಗಿ ಹರಿಸಲಾಗುತ್ತಿತ್ತು. ಆದರೆ ಈ ಬಾರಿ ನೀರಿನ ಲಭ್ಯತೆ ಮೇಲೆ ಬಿಡಲಾಗುತ್ತಿದೆ.
ಇದನ್ನೂ ಓದಿ: ಬರದಿಂದ ಹೆಚ್ಚಿದ ನೀರಿನ ಕೊರತೆ: ಕರ್ನಾಟಕದಲ್ಲಿ ಅಂತರ್ಜಲ ಬಳಕೆ ಶೇ 70ರ ಗಡಿ ದಾಟುವ ಆತಂಕ
ಮೇ, ಜೂನ್ನಲ್ಲಿ ಮಳೆ ಆಗದ ಹಿನ್ನಲೆ ಆ ಸಮಯದಲ್ಲಿಯೇ ಜಲಾಶಯ ಬತ್ತಿ ಹೋಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಜುಲೈ ಹಾಗೂ ಆಗಸ್ಟ್ ತಿಂಗಳುಗಳಲ್ಲಿ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿದ್ದ ಪರಿಣಾಮ ಜಲಾಶಯ ಭರ್ತಿ ಆಗಿತ್ತು. ಆದರೆ ಬಳಿಕ ಮಳೆಯಾಗದ ಕಾರಣ ಈಗ ಡ್ಯಾಂ ಮತ್ತೆ ಬರಿದಾಗುತ್ತಿದೆ. ಹೀಗಾಗಿ ನೀರಿನ ಅಭಾವದ ಕಾರಣ ಹಿಂಗಾರು ಬೆಳೆಗೆ ಅಗತ್ಯವಿರುವ ನೀರಿನ ಜೊತೆಗೆ ಮುಂದೆ ಕುಡಿಯುವ ನೀರಿಗೂ ಸಾಕಷ್ಟು ತೊಂದರೆ ಆಗುವ ಮುನ್ಸೂಚನೆ ಸಿಕ್ಕಿದೆ. ಇದೇ ಜಲಾಶಯದ ನೀರು ನಂಬಿ ನಾಲ್ಕು ಜಿಲ್ಲೆಗಳ 4.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತದೆ. ಡ್ಯಾಂ ಬರಿದಾಗುತ್ತಿರುವ ಕಾರಣ ಅನ್ನದಾತರಲ್ಲಿ ಚಿಂತೆ ಹೆಚ್ಚಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.