ಯಾದಗಿರಿಯಲ್ಲಿ ಅದ್ದೂರಿಯಾಗಿ ನಡೆದ ಮೈಲಾರಲಿಂಗೇಶ್ವರನ ಜಾತ್ರೆ; ಸರಪಳಿ ಪವಾಡ ಕಂಡು ಮುಖವಿಸ್ಮಿತರಾದ ಭಕ್ತರು
ಜಿಲ್ಲೆಯ ಮೈಲಾಪುರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ಬಾರಿಯು ಮೈಲಾರಲಿಂಗನ ಜಾತ್ರೆ ಅದ್ದೂರಿಯಾಗಿ ನಡೆದಿದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ದೇವಸ್ಥಾನದ ಅರ್ಚಕರು ಕಬ್ಬಿಣದ ಸರಪಳಿಯನ್ನ ತುಂಡರಿಸುವುದನ್ನ ನೋಡಲು ಜಿಲ್ಲೆ ಅಷ್ಟೇ ಅಲ್ಲದೆ ಹೊರ ಜಿಲ್ಲೆಗಳಿಂದಲೂ ಭಕ್ತರು ಬಂದು ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ.
ಯಾದಗಿರಿ: ತಾಲೂಕಿನ ಮೈಲಾಪುರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಭಂಡಾರದ ಒಡೆಯ ಮೈಲಾರಲಿಂಗನ ಜಾತ್ರೆ ಅದ್ದೂರಿಯಾಗಿ ನಡೆದಿದೆ. ಪ್ರತಿ ಸಂಕ್ರಾಮಣ ದಿನದಂದು ನಡೆಯುವ ಜಾತ್ರೆಯಲ್ಲಿ ಜಿಲ್ಲೆ ಸೇರಿದಂತೆ ಕಲಬುರ್ಗಿ,ರಾಯಚೂರು,ಬೀದರ್,ಬಾಗಲಕೋಟ,ವಿಜಯಪುರ ಜೊತೆಗೆ ತೆಲಂಗಾಣ, ಆಂಧ್ರಪ್ರದೇಶ್, ಮಹಾರಾಷ್ಟ್ರ ಹಾಗೂ ತಮಿಳುನಾಡಿನಿಂದ ಲಕ್ಷಾಂತರ ಭಕ್ತರ ದಂಡೆ ಹರಿದು ಬಂದಿತ್ತು. ಬೆಳಗ್ಗೆ ದೇವಸ್ಥಾನದಿಂದ ಮೈಲಾರನ ಮೂರ್ತಿಯನ್ನ ಪಲ್ಲಕ್ಕಿಯಲ್ಲಿ ಕುರಿಸಿಕೊಂಡು ದೇವಸ್ಥಾನದ ಹಿಂಭಾಗದಲ್ಲಿರುವ ಹೊನ್ನ ಕೆರೆಗೆ ಗಂಗಾ ಸ್ನಾನಕ್ಕೆ ಅದ್ದೂರಿ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಗುತ್ತದೆ. ದೇವಸ್ಥಾನದಿಂದ ಕೆರೆಗೆ ಹೋಗುವ ತನಕ ಲಕ್ಷಾಂತರ ಭಕ್ತರು ಪಲ್ಲಕ್ಕಿ ಜೊತೆಗೆ ಮೈಲಾರನಿಗೆ ಜೈಘೋಷ ಹಾಕುತ್ತ ಹೆಜ್ಜೆ ಹಾಕುತ್ತಾರೆ. ಈ ಪಲ್ಲಿಕ್ಕಿ ಮೆರವಣಿಗೆಯನ್ನ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗುಡ್ಡ ಮನೆಗಳ ಮೇಲೆ ನಿಂತುಕೊಂಡು ವಿಕ್ಷಿಸುತ್ತಾರೆ.
ಹೊನ್ನ ಕೆರೆಯಲ್ಲಿ ಮೈಲಾರಲಿಂಗನಿಗೆ ಗಂಗಾ ಸ್ನಾನವನ್ನ ಮಾಡಿಕೊಂಡು ಮತ್ತೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆ ತರಲಾಗುತ್ತೆ. ಲಕ್ಷಾಂತರ ಭಕ್ತರು ಭಂಡಾರವನ್ನ ಎರಚುವ ಮೂಲಕ ಭಕ್ತಿ ಪರಾಕಾಷ್ಠೆಯನ್ನ ಮೆರೆಯುತ್ತಾರೆ. ಇನ್ನು ದೇವಸ್ಥಾನದತ್ತ ಬರ್ತಾಯಿದ್ದ ಹಾಗೆ ಮೈಲಾರನ ಪೂಜಾರಿಗಳು ದಪ್ಪದಾದ ಕಬ್ಬಿಣದ ಸರಪಳಿಯನ್ನ ಒಂದೇ ಏಟಿಗೆ ತುಂಡರಿಸುತ್ತಾರೆ. ನೆರೆದಿದ್ದ ಭಕ್ತರು ಸರಪಳಿ ತುಂಡುರಿಸಿದ ಕೂಡಲೇ ಮೈಲಾರಲಿಂಗನಿಗೆ ಜೈಘೋಷ ಕೂಗುವ ಮೂಲಕ ಭಂಡಾರವನ್ನ ಎರಚುತ್ತಾರೆ
ಇನ್ನು ಮೈಲಾರಲಿಂಗೇಶ್ವರನ ಪಲ್ಲಕ್ಕಿ ಮೇಲೆ ಕುರಿ ಮರಿಗಳನ್ನ ಎಸೆಯುವ ವಾಡಿಕೆಯಿತ್ತು. ಆದರೆ ಪ್ರಾಣಿ ಹಿಂಸೆ ನಿಷೇಧವಾಗಿದ್ದರಿಂದ ಈ ಬಾರಿ ಮುಖ್ಯ ರಸ್ತೆಯ ಚೆಕ್ ಪೋಸ್ಟ್ಗಳಲ್ಲಿಯೇ ಕುರಿ ಮರಿಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ. ಇದರ ಬದಲಾಗಿ ರೈತರು ಬೆಳೆದ ಜೋಳದ ದಂಡು (ಸೊಪ್ಪೆ) ಹಾಗೂ ಕುರಿಗಳ ಉಣ್ಣೆಯನ್ನ ಪಲ್ಲಕ್ಕಿ ಮೇಲೆ ಎಸೆಯುತ್ತಾರೆ ಹೀಗೆ ಮಾಡುವುದರಿಂದ ಕುರಿಗಳಿಗೆ ಯಾವುದೇ ರೋಗಗಳು ಬರುವುದಿಲ್ಲ ಜೊತೆಗೆ ಬೆಳೆ ಕೂಡ ಚೆನ್ನಾಗಿ ಬರುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.
ಒಟ್ಟಿನಲ್ಲಿ ಪ್ರತಿ ವರ್ಷ ಸಂಕ್ರಮಣ ದಿನದಂದು ನಡೆಯುವ ಈ ಮೈಲಾರಲಿಂಗನ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದರು. ಭಕ್ತಿಯಿಂದ ತಂದಿದ್ದ ಭಂಡಾರ, ಕುರಿಯ ಉಣ್ಣೆ ಹಾಗೂ ಜೋಳದ ದಂಟು ಪಲ್ಲಕ್ಕಿ ಮೇಲೆ ಎಸೆಯುವ ಮೂಲಕ ಭಕ್ತ ಪರಾಕಾಷ್ಠೆಯನ್ನ ಮೆರೆದಿದ್ದು ವಿಶೇಷವಾಗಿತ್ತು.
ವರದಿ:ಅಮೀನ್ ಹೊಸುರ್ ಟಿವಿ9 ಯಾದಗಿರಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ