PM Modi Yadgir Visit: ಮುಂದಿನ ದಶಕ ‘ನೀರಾವರಿ ದಶಕ’ ಎಂದು ಘೋಷಿಸಿದ ಸಿಎಂ ಬೊಮ್ಮಾಯಿ
ಭಾಷಣದಲ್ಲಿ ಪ್ರತಿ ಹನಿಯ ಸಮಗ್ರ ಬಳಕೆ ಮಾಡುವ ಮೋದಿ ಅವರ ಆಶಯವನ್ನು ಸಿಎಂ ಬೊಮ್ಮಾಯಿ ಅವರು ವಿವರಿಸಿದರು. ತಿ ಹನಿ ನೀರನ್ನೂ ಸಮಗ್ರವಾಗಿ ಬಳಸಬೇಕು ಎಂಬ ಮೋದಿ ಅವರ ಆಶಯವನ್ನು ಸಾಕಾರಗೊಳಿಸಲು ನಾವು ಶ್ರಮಿಸುತ್ತಿದ್ದೇವೆ ಎಂದರು.
ಯಾದಗಿರಿ: ಮುಂದಿನ ದಶಕವನ್ನು ನೀರಾವರಿ ದಶಕ ಎಂದು ಘೋಷಣೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು, ಹೆಚ್ಚು ಸಂಪನ್ಮೂಲ, ಹಣ ಒದಗಿಸಿ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವ ಸಂಕಲ್ಪ ತೊಟ್ಟರು. ಸುಮಾರು 10,000 ಕೋಟಿ ಮೌಲ್ಯದ ಹಲವು ಯೋಜನೆಗಳಿಗೆ ಚಾಲನೆ ನೀಡುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಯಾದಗಿರಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದರು. ಬೋಲೋ ಭಾರತ್ ಮಾತಾ ಕಿ ಜೈ ಎಂದು ಭಾಷಣ ಆರಂಭಿಸಿದ ಸಿಎಂ ಬೊಮ್ಮಾಯಿ, ಸುರಪುರದ ರಾಜಮನೆತನದ ಕೊಡುಗೆಯನ್ನು ಸ್ಮರಿಸಿದರು. ರಾಜಾ ವೆಂಕಟಪ್ಪನಾಯಕರ ಸ್ವಾತಂತ್ರ್ಯ ಹೋರಾಟವನ್ನು ವಿವರಿಸಿದರು.
ಭಾಷಣದಲ್ಲಿ ಪ್ರತಿ ಹನಿಯ ಸಮಗ್ರ ಬಳಕೆ ಮಾಡುವ ಮೋದಿ ಅವರ ಆಶಯವನ್ನು ವಿವರಿಸಿದರು. ಪ್ರತಿ ಹನಿ ನೀರನ್ನೂ ಸಮಗ್ರವಾಗಿ ಬಳಸಬೇಕು ಎಂಬ ಮೋದಿ ಅವರ ಆಶಯವನ್ನು ಸಾಕಾರಗೊಳಿಸಲು ನಾವು ಶ್ರಮಿಸುತ್ತಿದ್ದೇವೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಆರಂಭವಾಗಿತ್ತು. ಆದರೆ ನಂತರ ಯುಪಿಎ ಸರ್ಕಾರದಿಂದ ನಮಗೆ ಬರಬೇಕಿದ್ದ ಈ ಯೋಜನೆ ತಡವಾಯಿತು. ಮುಂದೆ 2014ರಲ್ಲಿ ಮೋದಿ ಪ್ರಧಾನಿಯಾದ ನಂತರ 2015ರಲ್ಲಿ ತ್ವರಿತಗತಿಯ ಯೋಜನೆಯಲ್ಲಿ ಈ ಕಾಮಗಾರಿ ಆರಂಭವಾಯಿತು ಎಂದರು.
ಇದನ್ನೂ ಓದಿ: PM Modi in Kalaburagi: ಕಲಬುರಗಿಯಲ್ಲಿ ಮೋದಿ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ರೆಡಿ ಆಯ್ತು ಬಗೆಬಗೆ ತಿಂಡಿ, ಊಟ
ಅಚ್ಚುಕಟ್ಟು ಪ್ರದೇಶದ ಎಲ್ಲರಿಗೂ ನೀರು: ಬೊಮ್ಮಾಯಿ
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರುತ್ತಿದೆ. 4.5 ಲಕ್ಷ ಎಕರೆಯ ವಿಸ್ತೀರ್ಣದಲ್ಲಿ ಕೊನೆಯ ಹಂತದಲ್ಲಿ ನೀರು ತಲುಪುತ್ತಲೇ ಇರಲಿಲ್ಲ. ಇಂದು ಎಲ್ಲ ಶಾಖಾ ನಾಲೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತದೆ. ಹೀಗಾಗಿ ಈ ಯೋಜನೆಯು ಬಹಳ ಮುಖ್ಯವಾಗುತ್ತದೆ. ನಮ್ಮ ನಾಲೆಗಳಲ್ಲಿ ಶೇ 20ರಷ್ಟು ಹೆಚ್ಚು ನೀರು ಹರಿಸಲು ಸಾಧ್ಯವಾಗುತ್ತಿದೆ. ನೀರು ಹರಿಯುವ ಸಮಗ್ರ ಮಾಹಿತಿ ದಾಖಲಾಗುವುದರಿಂದ ನಿರ್ವಹಣೆ ಸುಲಭವಾಗುತ್ತದೆ ಎಂದರು.
ನೀರಿನ ಸಮರ್ಪಕ ಬಳಕೆಗೆ ಒತ್ತು: ಬೊಮ್ಮಾಯಿ
ಅತಿಹೆಚ್ಚು ನೀರುಕೊಟ್ಟು ಸವುಳು ಜವುಳು ಆಗುವುದನ್ನು ತಪ್ಪಿಸಬಹುದು. ದೇಶದಲ್ಲಿ ಅಷ್ಟೇಕೆ, ಏಷ್ಯಾದಲ್ಲಿಯೇ ಅತಿಹೆಚ್ಚು ಸ್ಕಾಡಾ ತಂತ್ರಜ್ಞಾನ ಅಳವಡಿಕೆಯಾದ ಯೋಜನೆ ನಾರಾಯಣಪುರ ಎಡದಂಡೆ ಕಾಲುವೆ ಯೋಜನೆ ಎಂದರು. ನೀರಿನ ಸಮರ್ಪಕ ವಿತರಣೆಯ ಪ್ರಧಾನಿಯ ಕನಸು ಈ ಯೋಜನೆಯ ಮೂಲಕ ಸಾಕಾರಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿಯೂ ಇಂತಹ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತೇವೆ. ಹೆಚ್ಚು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಹಾಗೂ ಎಲ್ಲ ಊರುಗಳಿಗೆ ಸಮರ್ಪಕ ನೀರು ಒದಗಿಸಲು ಚಿಂತನೆ ನಡೆಸಿದ್ದೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Thu, 19 January 23