ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಇಂದು(ಜ.19) ಕಲ್ಯಾಣ ಕರ್ನಾಟಕ್ಕೆ ಎಂಟ್ರಿ ನೀಡಲಿದ್ದಾರೆ. ರಾಜ್ಯ ಗಡಿ ಜಿಲ್ಲೆಯಾಗಿರುವ ಯಾದಗಿರಿ ಜಿಲ್ಲೆಯ ಜನರಿಗೆ ಸಾವಿರಾರು ಕೋಟಿ ಕೊಡುಗೆ ಕೊಡಲು ಮುಂದಾಗಿದ್ದಾರೆ. ಮೋದಿ(Narendra Modi Yadgir Visit) ಕಾರ್ಯಕ್ರಮಕ್ಕೆ ಯಾದಗಿರಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ. ಮೋದಿ ಕಾರ್ಯಕ್ರಮಕ್ಕಾಗಿ ಭವ್ಯ ವೇದಿಕೆ ಸಿದ್ದವಾಗಿದೆ.
ಇಂದು ಪ್ರಧಾನಿ ಮೋದಿ ಇದೆ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಮೋದಿ ಆಗಮನಕ್ಕಾಗಿ ಯಾದಗಿರಿ ಜನ ಕಾತರದಿಂದ ಕಾಯುತ್ತಿದ್ದಾರೆ. ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮಕ್ಕೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಪಿಎಂ ಮೋದಿ ಎಂಟ್ರಿ ನೀಡಲಿದ್ದಾರೆ. ಬೆಳಗ್ಗೆ 9 ಗಂಟೆಗೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಬಳಿಕ ಕಲಬುರ್ಗಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಕೊಡೆಕಲ್ ನಲ್ಲಿ ನಿರ್ಮಾಣ ಮಾಡಿರುವ ಹೆಲಿಫ್ಯಾಡ್ ಗೆ ಬಂದಿಳಿಯಲಿದ್ದಾರೆ. ಮೋದಿ ಜೊತೆಗೆ ರಾಜ್ಯದ ರಾಜಪಾಲರು, ಸಿಎಂ ಬಸವರಾಜ ಬೊಮ್ಮಾಯಿ, ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಹಲವು ಜನ ಸಚಿವರು ಹಾಗೂ ಶಾಸಕರು ಬರಲಿದ್ದಾರೆ. ಮೋದಿ ಕಾರ್ಯಕ್ರಮಕ್ಕಾಗಿ ಕೊಡೆಕಲ್ ಗ್ರಾಮದಲ್ಲಿ ಭವ್ಯವಾದ ವೇದಿಕೆಯನ್ನ ನಿರ್ಮಾಣ ಮಾಡಲಾಗುತ್ತಿದೆ.
ಸುಮಾರು 65 ಎಕರೆ ಪ್ರದೇಶದಲ್ಲಿ ಭವ್ಯವಾದ ವೇದಿಕೆಯನ್ನ ನಿರ್ಮಾಣ ಮಾಡಲಾಗುತ್ತಿದೆ. ವೇದಿಕೆಯನ್ನ 40 ಅಡಿ ಉದ್ದ 60 ಅಡಿ ಅಗಲ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇನ್ನು ಮೋದಿ ಕಾರ್ಯಕ್ರಮಕ್ಕಾಗಿ ಸುಮಾರು 2 ಲಕ್ಷ ಜನ ಬರುವ ನಿರೀಕ್ಷೆಯಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಬರುವ ಜನರಿಗಾಗಿ ಸುಮಾರು 1.10 ಲಕ್ಷ ಆಸನದ ವ್ಯವಸ್ಥೆ ಕೂಡ ಜಿಲ್ಲಾಡಳಿತ ಮಾಡಿಕೊಂಡಿದೆ. ಇನ್ನು ಕಾರ್ಯಕ್ರಮದ ವೇದಿಕೆ ಹಿಂಭಾಗದಲ್ಲಿ ಸುಮಾರು 300 ಮೀಟರ್ ದೂರದಲ್ಲಿ ಮೂರು ಹೆಲಿಫ್ಯಾಡ್ ಗಳನ್ನ ನಿರ್ಮಾಣ ಮಾಡಲಾಗಿದೆ. ಮೋದಿ ಹೆಲಿಕಾಪ್ಟರ್ ಇದೆ ಹೆಲಿಫ್ಯಾಡ್ ನಲ್ಲಿ ಲ್ಯಾಂಡ್ ಆಗಲಿದೆ. ಇನ್ನು ಕಾರ್ಯಕ್ರಮಕ್ಕೆ ಪೊಲೀಸರಿಂದ ಬಾರಿ ಬಂದೋಬಸ್ತ್ ಮಾಡಲಾಗಿದೆ. ಬಳ್ಳಾರಿ ಐಜಿಪಿ ಲೋಕೇಶ್ ಕುಮಾರ್ ನೇತೃತ್ವದಲ್ಲಿ ಎಲ್ಲಾ ರೀತಿಯ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಯಾದಗಿರಿ, ಬಾಗಲಕೋಟೆ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ವಿಜಯಪುರ ಸೇರಿದಂತೆ ಅನೇಕ ಜಿಲ್ಲೆಗಳಿಂದ 2 ಸಾವಿರಕ್ಕೂ ಅಧಿಕ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ.
ಇನ್ನು ಪ್ರಧಾನಿ ಮೋದಿ ಆಗಮಿಸುತ್ತಿದ್ದ ಹಾಗೆ ನಾರಾಯಣಪುರ ಎಡದಂಡೆ ಕಾಲುವೆ ನವೀಕರಣ ಹಾಗೂ ಆಧುನೀಕರಣ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಸುಮಾರು 4.5 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಯಂತ್ರಚಾಲಿತ ಸ್ಕಾಡಾ ಗೇಟ್ ಗಳನ್ನ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ದೇಶದಲ್ಲಿ ಮೊದಲ ಬಾರಿ ನಾರಾಯಣಪುರ ಎಡದಂಡೆ ಕಾಲುವೆಗಳಿಗೆ ಈ ಸ್ಕಾಡಾ ಗೇಟ್ ಗಳನ್ನ ಅಳವಡಿಸಲಾಗಿದೆ. ಇನ್ನು ಇದೆ ವೇದಿಕೆಯಿಂದ ಯಾದಗಿರಿ ಜಿಲ್ಲೆ ಜನರಿಗೆ ಕುಡಿಯುವ ನೀರಿನ ಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ. ಸುಮಾರು 2004 ಕೋಟಿ ಅನುದಾನದ ಜಲ ಜೀವನ ಮಿಷನ್ ಯೋಜನೆಯನ್ನ ಚಾಲನೆ ನೀಡಲಿದ್ದಾರೆ. ಇನ್ನು ಈ ಯೋಜನೆಯಿಂದ ಜಿಲ್ಲೆಯ ಮೂರು ಪಟ್ಟಣ ಹಾಗೂ 710 ಗ್ರಾಮೀಣ ಪ್ರದೇಶಗಳಿಗೆ ಕುಡಿಯಲು ನೀರು ಸಿಗಲಿದೆ. ಇದರ ಜೊತೆಗೆ ಸೂರತ್ ನಿಂದ ಚೆನ್ನೈಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 150 ಸಿ ರಸ್ತೆ ಕಾಮಗಾರಿಯ ಪ್ಯಾಕೇಜ್ 3 ನ ಕಾಮಗಾರಿಗೆ ಮೋದಿ ಚಾಲನೆ ನೀಡಲಿದ್ದಾರೆ. ಈ ಹೆದ್ದಾರಿ ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ 135 ಕಿ.ಮೀ ನಷ್ಟು ಹಾದು ಹೋಗಲಿದ್ದು ಈ ಯೋಜನೆಗೆ ಮೋದಿ ಚಾಲನೆ ನೀಡಲಿದ್ದಾರೆ. ಒಟ್ಟು ಇಂದು ಪ್ರಧಾನಿ ಮೋದಿ ಕೊಡೆಕಲ್ ಗ್ರಾಮದಲ್ಲಿ 10,800 ಕೋಟಿ ಅನುದಾನದ ಕಾಮಗಾರಿಗಳ ಉದ್ಘಾಟನೆ ಮತ್ತು ಅಡಿಗಲ್ಲು ಹಾಕಲಿದ್ದಾರೆ.
ವರದಿ: ಅಮೀನ್ ಹೊಸುರ್ ಟಿವಿ9, ಯಾದಗಿರಿ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:09 am, Thu, 19 January 23