ಯಾದಗಿರಿ, ಸೆಪ್ಟೆಂಬರ್ 23: ಪಿಎಸ್ಐ ಪರಶುರಾಮ (PSI Parashuram) ಸಾವಿಗೆ ಕಾರಣರಾದ ಯಾದಗಿರಿ ಶಾಸಕ ಚೆನ್ನಾರೆಡ್ಡಿ (Chenna Reddy) ಹಾಗೂ ಪುತ್ರ ಪಂಪನಗೌಡರನ್ನು ಬಂಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಪತ್ರ ಬರೆದಿದ್ದಾರೆ. ಅಲ್ಲದೇ, ಪಿಎಸ್ಐ ಪರಶುರಾಮ ಅವರ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದರು. ಆದರೆ ಇನ್ನುವರೆಗೂ ಪರಿಹಾರ ನೀಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮೃತ ಪಿಎಸ್‌ಐ ಪರಶುರಾಮ್ ಅವರ ಸ್ವಗ್ರಾಮಕ್ಕೆ ಆಗಸ್ಟ್ 08 ರಂದು ಗೃಹ ಸಚಿವರು ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಹಾಗೂ ಅವರ ಪತ್ನಿ ಶ್ವೇತಾ ಅವರಿಗೆ ಸೂಕ್ತ ಸರ್ಕಾರಿ ಕೆಲಸ ನೀಡುವುದಾಗಿ ಆಶ್ವಾಸನೆ ನೀಡಿರುವುದು ಗಮನಿಸಿದ್ದೇನೆ. ಆದರೆ ಆಶ್ವಾಸನೆಯನ್ನು ನೀಡಿ ಸುಮಾರು 45 ದಿನಗಳು ಕಳೆದರೂ ಕೂಡ ಅವರಿಗೆ ಯಾವುದೇ ರೀತಿಯ ಪರಿಹಾರ ನೀಡಿದೇ ಇರುವುದು ಮತ್ತು ಪರಿಹಾರ ಪ್ರಕ್ರಿಯೆಯನ್ನು ಪ್ರಾರಂಭ ಮಾಡದೇ ಇರುವುದೇ ಖೇಧಕರ ವಿಷಯವಾಗಿದೆ.
ಮೃತ ಪಿಎಸ್‌ಐ ಪರಶುರಾಮ್ ಅವರ ಸಾವಿಗೆ ಕಾರಣರಾದ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರ ಪಂಪನಗೌಡ ಇವರುಗಳ ವಿರುದ್ಧ ಜಾತಿ ನಿಂದನೆ (ಭಾರತೀಯ ನೀತಿ ಸಂಹಿತೆ 2023 (ಯು/ಎಸ್-352, 108, 3(5)); ಅಟ್ರಾಸಿಟಿ ಕಾಯ್ದೆ, 1989 (ಯು/ಎಸ್- 3(2(ವಿ), 3(1)(ಆರ್(ಎಸ್)) ಅಡಿಯಲ್ಲಿ ದೂರು ದಾಖಲಾದರೂ ಸಹ ಇದುವರೆಗೂ ಅವರ ವಿಚಾರಣೆ ನಡೆದಿಲ್ಲ ಹಾಗೂ ಅವರನ್ನು ಬಂಧಿಸಿ ವಿಚಾರಣೆಯನ್ನು ನಡೆಸುವ ಕಾರ್ಯವು ಆಗಿಲ್ಲ.
ಇದನ್ನೂ ಓದಿ: ಪಿಎಸ್ಐ ಪರಶುರಾಮ ಸಾವು ಕೇಸ್: ರಾಜ್ಯ ಸರ್ಕಾರದಿಂದ ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ
ಆದ್ದರಿಂದ ಮೃತ ಪಿಎಸ್‌ಐ ಪರಶುರಾಮ್ ಅವರ ಕುಟುಂಬಕ್ಕೆ ಅಪಾರವಾದ ಅನ್ಯಾಯವಾಗಿದೆ. ಹೀಗಾಗಿ ತಾವುಗಳು ನೀಡಿರುವ ಆಶ್ವಾಸನೆಗಳನ್ನು ಹಾಗೂ ಪರಿಹಾರಗಳನ್ನು ತಕ್ಷಣ ಪೂರೈಸಬೇಕು ಮತ್ತು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರ ಪಂಪನಗೌಡ ಇವರ ವಿರುದ್ಧ ವಿಳಂಬ ನೀತಿ ಅನುಸರಿಸದೇ ಕಾನೂನು ರೀತ್ಯಾ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಯಾದಗಿರಿ ಪಿಎಸ್‌ಐ ಪರಶುರಾಮ ಅವರ ಸಾವು ಪ್ರಕರಣ ಸಾಕಷ್ಟು ಅನುಮಾನಗಳಿಗೆ ಕಾರಣವಾಗುತ್ತಿದೆ. ಪಿಎಸ್‌ಐ ವರ್ಗಾವಣೆ ವಿಚಾರವಾಗಿ ಶಾಸಕ ಚೆನ್ನಾರೆಡ್ಡಿ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ವರ್ಗಾವಣೆಗಾಗಿ ಭಾರೀ ಲಂಚದ ಬೇಡಿಕೆ ಇಡಲಾಗಿತ್ತು. ಈ ವಿಚಾರವಾಗಿಯೇ ಪಿಎಸ್ಐ ಪರಶುರಾಮ ಮೃತಪಟ್ಟಿದ್ದಾರೆ ಎಂದು ಪರಶುರಾಮ ಅವರ ಕುಟುಂಬಸ್ಥರು ಆರೋಪಿಸಿದ್ದರು. ಹೀಗಾಗಿ, ಈ ನಿಗೂಢ ಸಾವಿನ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 am, Mon, 23 September 24