ಭಿಕ್ಷಾಟನೆ ಮಾಡುತ್ತಿದ್ದ ಬಾಲಕಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸ್; ಅಲೆಮಾರಿ ಕುವರಿಯ ಭವಿಷ್ಯಕ್ಕೆ ಬೆಳಕಾದ ಟೆಂಟ್ ಶಾಲೆ
ಗುರುಮಠಕಲ್ ಪಟ್ಟಣದ ಕಟ್ಟಲಗೇರಾ ಸರಕಾರಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿರುವಾಗ ಶಾಲೆ ಬಿಟ್ಟು ತಂದೆ-ತಾಯಿಯೊಂದಿಗೆ ಅನಿವಾರ್ಯವಾಗಿ ಭೀಕ್ಷಾಟನೆಗೆ ತೆರಳುತ್ತಿದ್ದ ಮೋನಮ್ಮಳ ಮನದಲ್ಲಿ ಅಕ್ಷರ ಕಲಿಯುವ ಆಸೆ ಮಾಸಿರಲಿಲ್ಲ.

ಯಾದಗಿರಿ: ಜಿಲ್ಲೆಯ ಗಡಿ ಅಂಚಿನ ಗುರುಮಠಕಲ್ ಪಟ್ಟಣದ ಜೋಪಡಿಯಲ್ಲಿ ಬದುಕಿನ ದೋಣಿ ನಡೆಸುತ್ತಿರುವ ಭಾಸ್ಕರ್ ಹಾಗೂ ಜಯಮ್ಮ ದಂಪತಿಗಳ ಇಬ್ಬರು ಮಕ್ಕಳಲ್ಲಿ ಹಿರಿಯ ಮಗಳು ಮೋನಮ್ಮ. ಅತ್ತ ಮನೆ ಇಲ್ಲ, ಇತ್ತ ಹೊಲವೂ ಇಲ್ಲದೆ ಜೀವನ ನಿರ್ವಹಣೆಗಾಗಿ ಊರಿಂದ ಊರಿಗೆ ಅಲೆಯುತ್ತಿದ್ದ ಅಲೆಮಾರಿ ಜನಾಂಗದ ಮೋನಮ್ಮ ಎಸ್ಎಸ್ಎಲ್ಸಿ ಪಾಸ್ ಮಾಡಿದ್ದು ಇತಿಹಾಸವೇ ಸರಿ.
ಮೋನಮ್ಮ ಬಡನದಿಂದ 3ನೇ ಕ್ಲಾಸ್ಗೆ ಶಾಲೆ ಬಿಟ್ಟಿದ್ದಳು. ತಂದೆ-ತಾಯಿ ಜೊತೆ ಜೀವನ ನಡೆಸುವುದಕ್ಕೆ ಊರು ಅಲೆಯುತ್ತ ಭೀಕ್ಷೆ ಬೇಡಿಕೊಂಡು ಪೋಷಕರ ಜತೆ ಜೀವನ ನಡೆಸುತ್ತಿದ್ದಳು. ಗುರುಮಠಕಲ್ ಪಟ್ಟಣದಲ್ಲಿ ಜೋಪಡಿಯಲ್ಲಿ ಜೀವನ ಸಾಗಿಸುತ್ತಿದ್ದ ಮೋನಮ್ಮಳಿಗೆ ಅಕ್ಷರ ಕಲಿಯಬೇಕು ಎನ್ನುವ ಆಸೆ ಇತ್ತು. ಆದರೆ ಬಡತನ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆದರೆ ಮೋನಮ್ಮಳ ಅಕ್ಷರ ಕಲಿಯುವ ಕನಸು ನನಸಾಗಿದೆ. ಇದಕ್ಕೆ ಕಾರಣ ಮೊನ್ನಮ್ಮ 3ನೇ ತರಗತಿಯಿಂದ ನೇರವಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾಳೆ.
ಅಲೆಮಾರಿ ಕುವರಿಯ ಭವಿಷ್ಯಕ್ಕೆ ಬೆಳಕಾದ ಟೆಂಟ್ ಶಾಲೆ ಗುರುಮಠಕಲ್ ತಾಲೂಕಿನ ಯಲಸತ್ತಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶಾಂತಪ್ಪ ಯಾಳಗಿ ಅವರು ಸ್ವಹಿತಾಸಕ್ತಿ ವಹಿಸಿ ಗುರುಮಠಕಲ್‍ನ ಅಲೆಮಾರಿ ಬುಡ್ಗ ಜಂಗಮ ಮಕ್ಕಳಿಗಾಗಿ ಮತ್ತೋರ್ವ ಶಿಕ್ಷಕ ರಮೇಶ ಜಾದವ್ ಅವರೊಂದಿಗೆ ಸೇರಿ ಕಳೆದ ವರ್ಷ ಸಾಯಂಕಾಲದ ಟೆಂಟ್ ಶಾಲೆ ಆರಂಭಿಸಿದ್ದಾರೆ. ಈ ವೇಳೆ ಇತರೆ ವಿದ್ಯಾರ್ಥಿಗಳಿಂಗಿಂತಲೂ ಕಲಿಕೆಯಲ್ಲಿ ಅತ್ಯಂತ ಉತ್ಸಾಹ ಹಾಗೂ ಆಸಕ್ತಿ ತೋರುತ್ತಿದ್ದ ಮೋನಮ್ಮ ಸಹಜವಾಗಿ ಶಿಕ್ಷಕರ ಗಮನ ಸೆಳೆದಿದ್ದಾಳೆ.
ಹೀಗಾಗಿ ಶಿಕ್ಷಕರು ಬಾಲಕಿ ಬಗೆಗಿನ ಪೂರ್ವ ಮಾಹಿತಿ ಕಲೆ ಹಾಕಿ ವಯೋಮಿತಿಯ ಆಧಾರದ ಮೇಲೆ ನೇರವಾಗಿ ಎಸ್ಎಸ್ಎಲ್ಸಿ ಪರೀಕ್ಷೆಗೆ ನೊಂದಣಿ ಮಾಡಿಸಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಮೋನಮ್ಮ ಕನ್ನಡ(54), ಇಂಗ್ಲೀಷ್(50), ಹಿಂದಿ(45), ಗಣಿತ(35), ವಿಜ್ಞಾನ(43) ಹಾಗೂ ಸಮಾಜ ವಿಜ್ಞಾನ(73) ಅಂಕ ಪಡೆದಿದ್ದು, ಒಟ್ಟು 625ಕ್ಕೆ 300 ಅಂಕ ಪಡೆದು ಮೆಟ್ರಿಕ್ ಪಾಸ್ ಆಗುವ ಮೂಲಕ ಬುಡ್ಗ ಜಂಗಮ ಸಮುದಾಯದ ಜನ ಹೆಮ್ಮೆ ಪಡುವಂತೆ ಸಾಧನೆಗೈದಿದ್ದಾಳೆ.
ಮೋನಮ್ಮಳಿಗೆ ಆಸರೆಯಾದ ಶಿಕ್ಷಕ ಶಾಂತಪ್ಪ ಗುರುಮಠಕಲ್ ಪಟ್ಟಣದ ಕಟ್ಟಲಗೇರಾ ಸರಕಾರಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿರುವಾಗ ಶಾಲೆ ಬಿಟ್ಟು ತಂದೆ-ತಾಯಿಯೊಂದಿಗೆ ಅನಿವಾರ್ಯವಾಗಿ ಭೀಕ್ಷಾಟನೆಗೆ ತೆರಳುತ್ತಿದ್ದ ಮೋನಮ್ಮಳ ಮನದಲ್ಲಿ ಅಕ್ಷರ ಕಲಿಯುವ ಆಸೆ ಮಾಸಿರಲಿಲ್ಲ. ಶಾಲೆಗೆ ತೆರಳುತ್ತಿದ್ದ ಮಕ್ಕಳನ್ನು ಕಂಡಾಗ ತಾನು ಸಹ ಪುನಃ ಶಾಲೆಗೆ ಹೋಗಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದರೂ, ಬಡತನದ ಕಾರಣಕ್ಕೆ ಪೋಷಕರು ಮೋನಮ್ಮಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದರು. ಬಾಲಕಿಯ ಅದೃಷ್ಟಕ್ಕೆ ಮತ್ತೊಮ್ಮೆ ಅಕ್ಷರ ಕಲಿಯುವ ಭಾಗ್ಯ ಸಿಕ್ಕಿದ್ದು ಶಿಕ್ಷಕ ಶಾಂತಪ್ಪ ಯಾಳಗಿ ಅವರ ಮುಖಾಂತರ.
ಗುರುಮಠಕಲ್‍ನ ಅಲೆಮಾರಿ ಬುಡ್ಗ ಜಂಗಮ ಜನಾಂಗದ ಮಕ್ಕಳಿಗೆ ಅಕ್ಷರ ಕಲಿಸಲು ಸಾಯಂಕಾಲದ ಟೆಂಟ್ ಶಾಲೆ ಕಳೆದ ವರ್ಷ ಆರಂಭಿಸಿದ್ದೇವೆ. ಈ ವೇಳೆ ಮೋನಮ್ಮಳ ಕಲಿಕಾ ಆಸಕ್ತಿ ನಮ್ಮ ಗಮನ ಸೆಳೆದಿತ್ತು. ದಿನಾಲು ಸಾಯಂಕಾಲ ಸಮಯದಲ್ಲಿ ಅವಳಿಗೆ ಬೋಧನೆ ಮಾಡಿದ್ದೇವೆ. ವಯಸ್ಸಿನ ಆಧಾರದ ಮೇಲೆ ನೇರವಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಅವಳು ಉತ್ತೀರ್ಣತೆ ಪಡೆದಿದ್ದು ಶ್ರಮಕ್ಕೆ ಫಲ ಸಿಕ್ಕಂತಾಗಿದೆ ಎಂದು ಶಿಕ್ಷಕ ಶಾಂತಪ್ಪ ಯಾಳಗಿ ತಿಳಿಸಿದ್ದಾರೆ.
ಮನೆಯಲ್ಲಿ ಅಪ್ಪನ ಅನಾರೋಗ್ಯದ ನಿಮಿತ್ತ ಅಮ್ಮನಿಂದ ಕುಟುಂಬ ನಿರ್ವಹಣೆ ಕಷ್ಟವಾದ ಕಾರಣ ಶಾಲೆ ಬಿಟ್ಟು ಬಿಕ್ಷಾಟನೆ ಮಾಡುತ್ತಿದ್ದೆ. ಯಾಳಗಿ ಸರ್ ಹಾಗೂ ಜಾದವ ಸರ್ ಅವರುಗಳ ಮಾರ್ಗದರ್ಶನ ಹಾಗೂ ಬೋಧನೆಯಿಂದ ಎಸ್ಎಸ್ಎಲ್ಸಿ ಪಾಸ್ ಮಾಡಿದ್ದೇನೆ. ಅವರಿಬ್ಬರನ್ನು ನಮ್ಮ ಕುಟುಂಬ ಎಂದೂ ಮರೆಯಲ್ಲ ಎಂದು ಎಸ್ಎಸ್ಎಲ್ಸಿ ಪಾಸಾದ ವಿದ್ಯಾರ್ಥಿನಿ ಮೋನಮ್ಮ ಅಭಿಪ್ರಾಯಪಟ್ಟಿದ್ದಾಳೆ.
ವರದಿ: ಅಮೀನ್ ಹೊಸುರ್
ಇದನ್ನೂ ಓದಿ: ಹೃದಯ ಕಾಯಿಲೆಯಿಂದ ಬಳಲುತ್ತಿರುವ ಎಸ್ಎಸ್ಎಲ್ಸಿ ಟಾಪರ್ ಗಂಗಮ್ಮ ಮನೆಗೆ ಶಾಸಕ ವೀರಣ್ಣ ಚರಂತಿಮಠ ಭೇಟಿ