ಯಾದಗಿರಿ: ಜಿಲ್ಲಾಸ್ಪತ್ರೆಯಲ್ಲೊಂದು ಅಮಾನುಷ ಘಟನೆ: ವೈದ್ಯರ ನಿರ್ಲಕ್ಷ್ಯದಿಂದ ಕಾರಿಡಾರ್​ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 28, 2022 | 6:11 PM

ಯಾದಗಿರಿಯ ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯದಿಂದ ಆಸ್ಪತ್ರೆಯ ಕಾರಿಡಾರ್​ ಮೇಲೆಯೇ ಹೆರಿಗೆ ಆಗಿದೆ. ಎಷ್ಟೇ ಗೋಳಾಡಿ ಕರೆದರು ಬರದ ಡಾಕ್ಟರ್​ ಹಾಗೂ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಯಾದಗಿರಿ: ಜಿಲ್ಲಾಸ್ಪತ್ರೆಯಲ್ಲೊಂದು ಅಮಾನುಷ ಘಟನೆ: ವೈದ್ಯರ ನಿರ್ಲಕ್ಷ್ಯದಿಂದ ಕಾರಿಡಾರ್​ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ
ಯಾದಗಿರಿ
Follow us on

ಯಾದಗಿರಿ: ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯದಿಂದ (ನ.26) ಮಧ್ಯರಾತ್ರಿ ಆಸ್ಪತ್ರೆ ಕಾರಿಡಾರ್​ನಲ್ಲಿಯೇ ಚಾಂದಬಿ (Chandabi)ಎಂಬ ಮಹಿಳೆಯ ಹೆರಿಗೆ ನಡೆದಿದೆ. ಹೆರಿಗೆ ನೋವು ಎಂದು ಆಕೆಯ ಪತಿ ಆಸ್ಪತ್ರೆಗೆ ಕರೆದುಕೊಂಡು ಬಂದು ಎಷ್ಟೇ ಗೋಳಾಡಿದರು ಆಸ್ಪತ್ರೆಯ ಸಿಬ್ಬಂದಿಗಳು ತಲೆಕೆಡಿಸಿಕೊಳ್ಳದೇ ಆಸ್ಪತ್ರೆಯ ಪ್ರೋಸಿಜರ್​ನ್ನು ಫಾಲೋ ಮಾಡಬೇಕು ಎಂದು ವಿನಾಕಾರಣ ತಡ ಮಾಡಿದ್ದಾರೆ. ಹೆರಿಗೆ ನೋವಿನಿಂದ ನಿತ್ರಾಣ ಸ್ಥಿತಿ ತಲುಪಿದ್ದ ಹೆಂಡತಿಯನ್ನು ಕೈಹಿಡಿದು ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಆದರೆ ವಾರ್ಡ್​ಗೆ ಕರೆದುಕೊಂಡು ಹೋಗುವ ಮೊದಲೇ ಕಾರಿಡಾರ್​ನಲ್ಲಿ‌ ಪತ್ನಿ ಕುಸಿದು ಬಿದ್ದಿದ್ದರಿಂದ ಗರ್ಭಪಾತವಾಗಿ, ಅರ್ಧದಷ್ಟು ಮಗುವಿನ ದೇಹ ಹೊರ ಬಂದಿದೆ. ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಕಾರಿಡಾರ್​ನಲ್ಲಿಯೆ ಮಗುವಿಗೆ ಜನ್ಮ ನೀಡಿದ ಅಮಾನುಷ ಘಟನೆ ನಡೆದಿದೆ.

ಯಾದಗಿರಿ ನಗರ ನಿವಾಸಿ ಚಾಂದಬಿ ಎಂಬ ಮಹಿಳೆಗೆ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಆದರೆ ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಬರಲು ಯಾರು ಇರಲಿಲ್ಲ. ತಡವಾಗಿ ವಿಷಯ ತಿಳಿದ ಮೇಲೆ ಚಾಂದಬಿ ಪತಿ ನವಾಜ್ ಪತ್ನಿಯನ್ನು ಆಟೋದಲ್ಲಿ ಕುರಿಸಿಕೊಂಡು ಯಾದಗಿರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಆಸ್ಪತ್ರೆ ಬಳಿ ಆಟೋ ನಿಲ್ಲಿಸಿ ಒಳಗೆ ಕರೆದುಕೊಂಡು ಹೋಗಬೇಕು. ಆದರೆ ಗರ್ಭಿಣಿ ಮಹಿಳೆಯನ್ನು ಕುರಿಸಿಕೊಂಡು ಹೋಗಲು ವ್ಹೀಲ್ ಚೇರ್ ಅಥವಾ ಸ್ಟಚರ್ ಇರಲಿಲ್ಲ. ಹೀಗಾಗಿ ನವಾಜ್ ಆಸ್ಪತ್ರೆ ತುಂಬೆಲ್ಲಾ ಓಡಾಡಿ ಡಾಕ್ಟರ್ ಮತ್ತು ಸಿಬ್ಬಂದಿಗಳನ್ನು ಕರೆಯುತ್ತಾನೆ‌‌‌‌.

ಇನ್ನು ಆಸ್ಪತ್ರೆ ಸಿಬ್ಬಂದಿಯನ್ನು ಎಷ್ಟೇ ಕರೆದರು ನವಾಜ್ ಪತ್ನಿಯ ಹೆರಿಗೆ ಮಾಡಿಸಲು ಯಾರು ಬಂದಿಲ್ಲ. ಅಸಹಾಯಕನಾದ ನವಾಜ್ ಅಲ್ಲೇ ಇದ್ದ ಮಹಿಳೆಯರನ್ನು ಸಹಾಯಕ್ಕೆ ಕರೆದಿದ್ದಾನೆ. ಕೂಡಲೇ ಸಹಾಯಕ್ಕೆ ಬಂದ ಮಹಿಳೆಯರ ಸಹಕಾರದಿಂದ ಪತಿ ನವಾಜ್ ಟವೇಲ್ ಆಸರೆ ಹಿಡಿದು ಮಹಿಳೆಯ ಸಹಕಾರದಿಂದ ಪತ್ನಿಯ ಹೆರಿಗೆ ಮಾಡಿಸಿದ್ದಾನೆ. ಇನ್ನು ಹೆರಿಗೆ ಆದ ಕೂಡಲೇ ಚಾಂದಬಿಗೆ ಹೆಚ್ಚು ರಕ್ತಸ್ರಾವ ಆಗಿದೆ. ಇಷ್ಟೆಲ್ಲ ಆಗುತ್ತಿದ್ದರು ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ನವಾಜ್ ಸಹಕಾರಕ್ಕೆ ಬಂದಿಲ್ಲ.

ಹೆರಿಗೆ ಆಗಿ ರಕ್ತಸ್ರಾವದಿಂದ‌ ಬಳಲುತ್ತಿದ್ದ ಬಳಿಕ ಆಸ್ಪತ್ರೆ ಸಿಬ್ಬಂದಿ ಬಂದು ಆಸ್ಪತ್ರೆ ವಾರ್ಡ್​ಗೆ ಶಿಫ್ಟ್ ಮಾಡಿದ್ದಾರೆ. ಬಳಿಕ ರಾತ್ರಿ ಶಿಫ್ಟ್​ನಲ್ಲಿದ್ದ ವೈದ್ಯೆ ಬಂದು ಚಾಂದಬಿ ಹಾಗೂ ಶಿಶುವಿನ ಆರೋಗ್ಯ ವಿಚಾರಿಸಿ ಚಿಕಿತ್ಸೆ ನೀಡಿದ್ದಾರೆ. ಆದರೆ ಹೆರಿಗೆ ನೋವು ಎಂದು ಕುಸಿದು ಕೆಳಗೆ ಬಿದ್ದು ನರಳಾಡಿದರು ಆಸ್ಪತ್ರೆ ಸಿಬ್ಬಂದಿ ಬಾರದಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಿಲ್ಲಾಸ್ಪತ್ರೆಯ ಮುಖ್ಯಸ್ಥರಿಗೆ ಕೇಳಿದರೆ ನಮ್ಮ ವೈದ್ಯರು ಹಾಗೂ ಸಿಬ್ಬಂದಿ ಸರಿಯಾದ ಸಮಯಕ್ಕೆ ಹೋಗಿದ್ದಾರೆ. ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಂದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಯಾದಗಿರಿಯಲ್ಲಿ ಶುರುವಾಯಿತು ಟಿಪ್ಪು, ಸಾವರ್ಕರ್ ವಾರ್: ವೃತ್ತದ ಹೆಸರು ಬದಲಾವಣೆಗೆ ಮುಂದಾದ ನಗರಸಭೆ ವಿರುದ್ಧ ಪ್ರತಿಭಟನೆ

ಬಡವರ ಪಾಲಿಗೆ ಸದಾ ಸಂಜೀವಿನಿಯಂತೆ ಇರಬೇಕಾದ ಸರ್ಕಾರಿ ಆಸ್ಪತ್ರೆ ಬಡ ರೋಗಿಗಳ ಪಾಲಿಗೆ ಡೇಂಜರಸ್ ಎಂಬಂತಾಗಿದೆ. ಅದೃಷ್ಟವಶಾತ್ ಈ ಪ್ರಕರಣದಲ್ಲಿ ತಾಯಿ ಮಗುವಿನ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ. ಇನ್ನು ಮುಂದೆಯಾದರೂ ಆಸ್ಪತ್ರೆ ಮುಖ್ಯಸ್ಥರು ಈ ರೀತಿ ಘಟನೆಗಳು ಆಗದಂತೆ ನೋಡಿಕೊಳ್ಳಬೇಕಾಗಿದೆ.

ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ