ಯಾದಗಿರಿ: ಶೋಕಿಗಾಗಿ ಬೈಕ್​ ಕಳ್ಳತನ ಮಾಡುತ್ತಿದ್ದ ಗ್ಯಾಂಗ್​ ಅರೆಸ್ಟ್​; ಬಂಧಿತರಿಂದ7.5 ಲಕ್ಷ ಮೌಲ್ಯದ 14 ಬೈಕ್ ವಶಕ್ಕೆ​

|

Updated on: Mar 13, 2023 | 11:19 AM

ಆ ಯುವಕರು ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಸಾಲದ್ದಕ್ಕೆ ನಾನಾ ರೀತಿಯ ಶೋಕಿ ಮಾಡೋದ್ದಕ್ಕೂ ಮುಂದಾಗಿದ್ರು. ಆದರೆ ಶೋಕಿ ಮಾಡಲು ಹಣ ಕಡಿಮೆ ಬಿಳುತ್ತಿದ್ದ ಹಾಗೆ ಕಳ್ಳತನದ ಹಾದಿ ತುಳಿದು ಬಿಟ್ಟಿದ್ರು. ಸಿಕ್ಕ ಸಿಕ್ಕವರ ಬೈಕ್​ಗಳನ್ನ ಕಳ್ಳತನ ಮಾಡಿ ಗಿರವಿ ಇಟ್ಟು ಮೋಜು ಮಸ್ತಿ ಮಾಡ್ತಾಯಿದ್ರು. ಆದರೆ ಇದೀಗ ಆ ಗ್ಯಾಂಗ್ ಪೊಲೀಸರ ಕೈಯಲ್ಲಿ ಲಾಕ್ ಆಗಿದೆ.

ಯಾದಗಿರಿ: ಶೋಕಿಗಾಗಿ ಬೈಕ್​ ಕಳ್ಳತನ ಮಾಡುತ್ತಿದ್ದ ಗ್ಯಾಂಗ್​ ಅರೆಸ್ಟ್​; ಬಂಧಿತರಿಂದ7.5 ಲಕ್ಷ ಮೌಲ್ಯದ 14 ಬೈಕ್ ವಶಕ್ಕೆ​
ಬಂಧಿತ ಆರೋಪಿಗಳು ಪ್ರಕಾಶ್​ ರೆಡ್ಡಿ, ಪ್ರಶಾಂತ್​, ಸಲೀಂ
Follow us on

ಯಾದಗಿರಿ: ಮಾಡೋದು ಕೂಲಿ ಕೆಲಸ ಶೋಕಿಗಾಗಿ ಕಳ್ಳತನದ ದಾರಿ. ಬೈಕ್​ಗಳನ್ನ ಖದ್ದು ಗಿರವಿ ಇಟ್ಟು ಹಣ ಪಡೆದು ಮೋಜು ಮಸ್ತಿ. ಬೈಕ್ ಸಮೇತ ಕಳ್ಳರ ಗ್ಯಾಂಗ್​ನ ಅಂದರ್ ಮಾಡಿದ ಪೊಲೀಸರು. ಹೌದು ಈ ದೃಶ್ಯಗಳು ಕಂಡು ಬಂದಿದ್ದು ಜಿಲ್ಲೆಯ ಶಹಾಪುರ ನಗರದಲ್ಲಿ. ಇತ್ತೀಚೆಗೆ ಕಳ್ಳತನ ಪ್ರಕರಣಗಳು ವಿಪರೀತವಾಗಿ ನಡೆಯುತ್ತಿವೆ. ಅಂಗಡಿಗಳ ಲಾಕ್ ಮುರಿದು ಕಳ್ಳತನ ಮಾಡಿದ್ರೆ, ಮನೆಗಳ ಎಂಟ್ರಿ ಕೊಟ್ಟು ಹಣ ಎಗರಿಸುವ ಪ್ರಕರಣಗಳು ನಡೆಯುತ್ತಿವೆ. ಇದರ ಸಾಲಿಗೆ ಈಗ ಬೈಕ್ ಕಳ್ಳರ ಗ್ಯಾಂಗ್ ಸಹ ಆಕ್ಟಿವ್ ಆಗಿದೆ. ಕಳೆದ ನಾಲ್ಕೈದು ತಿಂಗಳುಗಳಿಂದ ಶಹಾಪುರ ನಗರದ ಸೇರಿದಂತೆ ನಾನಾ ಕಡೆ ಬೈಕ್​ಗಳ ಕಳ್ಳತನವಾಗುತ್ತಿತ್ತು. ಬಸ್ ನಿಲ್ದಾಣ ಸೇರಿದಂತೆ ನಾನಾ ಕಡೆ ನಿಲ್ಲಿಸಿದ ಬೈಕ್​ಗಳನ್ನ ಚೋರರು ಎಗರಿಸಿಕೊಂಡು ಪರಾರಿಯಾಗುತ್ತಿದ್ರು. ಆದರೆ ನಿನ್ನೆ ಶಹಾಪುರ ಪೊಲೀಸರು ಮೂವರು ಬೈಕ್ ಕಳ್ಳರನ್ನು ಅರೆಸ್ಟ್ ಮಾಡಿದ್ದಾರೆ.

ಶಹಾಪುರ ನಗರದ ಅಗ್ನಿ ಶಾಮಕ ಕಚೇರಿ ಬಳಿ ರಾತ್ರಿ ಪಾಳಿಯಲ್ಲಿದ್ದ ಪೊಲೀಸರು ಅನುಮಾನಸ್ಪದವಾಗಿ ಬೈಕ್ ಮೇಲೆ ಓಡಾಡುತ್ತಿದ್ದ ಮೂವರು ಯುವಕರನ್ನ ಬಂಧಿಸಿದ್ದಾರೆ. ಬಂಧಿಸಿ ವಿಚಾರಣೆ ನಡೆಸಿದಾಗ ಪೊಲೀಸರು ಶಾಕ್ ಆಗಿದ್ದಾರೆ. ಮೂವರು ಯುವಕರಿಂದ ಮೂರು ಬೈಕ್​ಗಳನ್ನ ಸೀಜ್ ಮಾಡಿ ವಿಚಾರಣೆ ನಡೆಸಿದಾಗ ಬೇರೆ ವಿಚಾರ ಬಯಲಿಗೆ ಬಂದಿದೆ. ಶಹಾಪುರ ತಾಲೂಕಿನ ದೋರನಹಳ್ಳಿ ಮೂಲದ ಪ್ರಶಾಂತ್, ಪ್ರಕಾಶರೆಡ್ಡಿ ಹಾಗೂ ಸಲೀಂ ಎಂಬ ಮೂವರು ಕಳೆದ ನಾಲ್ಕೈದು ತಿಂಗಳುಗಳಿಂದ ಬೈಕ್​ಗಳನ್ನ ಕಳ್ಳತನ ಮಾಡುತ್ತಿದ್ದಾರೆ. ಈ ಮೂವರಲ್ಲಿ ಪ್ರಶಾಂತ್ ಕಟಿಂಗ್​ ಶಾಪ್​ಲ್ಲಿ ಕೆಲಸ ಮಾಡುತ್ತಿದ್ದರೆ, ಪ್ರಕಾಶರೆಡ್ಡಿ ಕೂಲಿ ಕೆಲಸ ಮಾಡ್ತಾಯಿದ್ದ ಇನ್ನು ಸಲೀಂ ಎಂಬಾತ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ. ಆದರೆ ಮೂವರು ಶೋಕಿ ಮಾಡಲು ಹಣ ಕಡಿಮೆ ಬಿಳುತ್ತಿದ್ದ ಹಾಗೆ ಕಳ್ಳತನದ ಹಾದಿ ಹಿಡಿದ್ದಾರೆ.

ಇದನ್ನೂ ಓದಿ:ಹಾವೇರಿ: ಕಳ್ಳತನವಾದ ನವಜಾತ ಶಿಶು ಎರಡು ದಿನದ ಬಳಿಕ ಹೆತ್ತಮ್ಮನ ಮಡಿಲಿಗೆ; ಏನಿದು ಅಂತೀರಾ? ಈ ಸ್ಟೋರಿ ನೋಡಿ

ಶೋಕಿಗಾಗಿ ಕಳ್ಳತನದ ಹಾದಿ ಹಿಡಿದರು

ಇನ್ನು ಈ ಮೂವರು ಕಳೆದ ನಾಲ್ಕೈದು ತಿಂಗಳುಗಳಿಂದ ಶೋಕಿಗಾಗಿ ಕಳ್ಳತನದ ಹಾದಿಯನ್ನ ಹಿಡಿದಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಮೂವರು ಹುಡುಗಿಯರನ್ನ ಮೆಂಟೆನ್ ಮಾಡಲು ಹಾಗೂ ಮದ್ಯ ಕುಡಿಯಲು ಹಣ ಸಾಕಾಗುತ್ತಾ ಇರಲಿಲ್ಲವಂತೆ. ಕೂಲಿ ಕೆಲಸದಿಂದ ಬಂದ ಹಣದಿಂದ ಶೋಕಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಈ ಮೂವರು ಕಳೆದ ನಾಲ್ಕೈದು ತಿಂಗಳುಗಳಿಂದ ಶಹಾಪುರ, ಕಲಬುರ್ಗಿ ಜಿಲ್ಲೆಯ ವಾಡಿ ಪಟ್ಟಣ, ಯಾದಗಿರಿ ಜಿಲ್ಲೆಯ ನಾಯ್ಕಲ್ ಚಾಮನಾಳ್ ಸೇರಿದಂತೆ ನಾನಾ ಕಡೆ ಬೈಕ್​ಗಳನ್ನ ಎಗರಿಸುವ ಕೆಲಸ ಮಾಡ್ತಾಯಿದ್ರು.

ಕದ್ದ ಬೈಕ್​ ನಂಬರ್​ ಬದಲಿಸಿ, ಗಿರಿವಿ ಇಟ್ಟು ಹಣ ಪಡೆದುಕೊಳ್ಳುತ್ತಿದ್ದ ಗ್ಯಾಂಗ್​

ಬೈಕ್​ಗಳನ್ನ ಕದ್ದು ಯಾರಿಗೂ ಗೊತ್ತಾಗದ ರೀತಿಯಲ್ಲಿ ನಂಬರ್ ಪ್ಲೇಟ್​ಗಳನ್ನ ಬದಲಿಸಿಕೊಳ್ಳುತ್ತಿದ್ರು. ಹೀಗಾಗಿ ಕಳ್ಳತನ ಮಾಡಿದ ಬೈಕ್​ಗಳಲ್ಲಿ ಓಡಾಡಿದ್ರು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಜೊತೆಗೆ ಕದ್ದ ಬೈಕ್​ಗಳನ್ನ ಹಣಕ್ಕಾಗಿ ಮಾರಾಟ ಮಾಡದೆ ಬೇರೆಯವರ ಬಳಿ ಗಿರವಿ ಇಡುವ ಕೆಲಸ ಮಾಡ್ತಾಯಿದ್ರು. ಎಷ್ಟು ದುಡ್ಡಿನ ಅವಶ್ಯಕತೆ ಇದೆಯೋ ಅಷ್ಟೇ ದುಡ್ಡಿಗೆ ಗಿರವಿ ಇಟ್ಟು ಸ್ವಲ್ಪ ದಿನಗಳಲ್ಲಿ ಹಣ ವಾಪಸ್ ನೀಡಿ ಬೈಕ್​ನ್ನ ಬಿಡಿಸಿಕೊಂಡು ಹೋಗುತ್ತೆವೆ ಎಂದು ಹೇಳಿ ಹಣ ಪಡೆದುಕೊಂಡು ಹೋಗ್ತಾಯಿದ್ರು. ಆದ್ರೆ ಗಿರವಿ ಇಟ್ಟಿದ್ದ ಬೈಕ್​ಗಳನ್ನ ಇಲ್ಲಿಯವರೆಗೂ ಹಣ ವಾಪಸ್ ಕೊಟ್ಟು ಬಿಡಿಸಿಕೊಂಡಿಲ್ಲ. ಬದಲಿಗೆ ಮತ್ತೆ ಬೇರೆ ಬೇರೆ ಕಡೆ ಬೈಕ್​ಗಳನ್ನ ಕದ್ದು ಮತ್ತೆ ಹಣದ ಕೊರತೆ ಇದ್ದಾಗ ಗಿರವಿ ಇಡುವ ಕೆಲಸ ಮಾಡ್ತಾಯಿದ್ರು. ಬಂದ ಹಣದಿಂದ ಹುಡುಗಿಯರನ್ನ ಮೆಂಟೆನ್ ಮಾಡೋದು ಜೊತೆಗೆ ಸ್ಮೋಕಿಂಗ್, ಡ್ರಿಂಕಿಂಗ್​ಗೆ ಬಳಸಿಕೊಳ್ಳುತ್ತಿದ್ದರು. ಇದೀಗ ಶಹಾಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿಸಿ ವಿಚಾರಣೆ ನಡೆಸಿದಾಗ ಬರೋಬ್ಬರಿ 7.5 ಲಕ್ಷ ಮೌಲ್ಯದ 14 ಬೈಕ್ ಗಳನ್ನ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಕಾರವಾರ: ಮದುವೆಗೆ ಕರೆಯುವ ನೆಪದಲ್ಲಿ ಚಾಕುವಿನಿಂದ ಹಲ್ಲೆ ನಡೆಸಿ ಮನೆ ಕಳ್ಳತನಕ್ಕೆ ಯತ್ನ, ಬಂದೂಕು ತೋರಿಸುತ್ತಿದ್ದಂತೆ ಪರಾರಿ ವಿಡಿಯೋ ವೈರಲ್

ಒಟ್ಟಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಆರಾಮಾಗಿದ್ದ ಈ ಯುವಕರು ಕೆಟ್ಟ ಚಟಗಳಿಗೆ ದಾಸರಾಗಿ ಹಣ ಕೊರತೆ ಎದುರಿಸುತ್ತಿದ್ದಾಗ ಕಳ್ಳತನದ ಹಾದಿ ತುಳಿದು ಕಳ್ಳತನ ಮಾಡಲು ಮುಂದಾಗಿದ್ರು. ಮಾಡಿದುಣ್ಣೋ ಮಾರಾಯ ಎನ್ನುವ ಹಾಗೆ ಈಗ ಪೊಲೀಸರ ಅತಿಥಿಯಾಗಿ ಜೈಲಿಗೆ ಹೋಗಿದ್ದಾರೆ.

ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ