ಯಾದಗಿರಿ, ಸೆ.15: ಸಾಲ ತೀರಿಸಲು ಪರ ಪುರುಷನ ಜೊತೆ ಮಲಗಲು ನಿರಾಕರಿಸಿದ ಪತ್ನಿಯನ್ನು ಪತಿಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಯಾದಗಿರಿ (Yadagiri) ಜಿಲ್ಲೆ ಶಹಾಪುರ ತಾಲೂಕಿನ ಗಂಗನಾಳ ಗ್ರಾಮದಲ್ಲಿ ನಡೆದಿದೆ. ಆರೋಪಿ ಪತಿ ಭೀಮಣ್ಣ ಉಸಿರುಗಟ್ಟಿಸಿ ತನ್ನ ಪತ್ನಿ ಶರಣಬಸಮ್ಮ ಹತ್ಯೆಗೈದಿದ್ದಾನೆ. ಮರಣೋತ್ತರ ಪರೀಕ್ಷೆ ವರದಿ ನಂತರ ಕೊಲೆ ಕೇಸ್ ದಾಖಲಾಗಿದ್ದು ಹಂತಕ ಭೀಮಣ್ಣ ಸೇರಿ ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿ ಪತ್ನಿಯನ್ನು ಕೊಂದು ಹೃದಯಾಘಾತದಿಂದ ಸಾವು ಎಂದು ಬಿಂಬಿಸಿದ್ದ.
ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣ ನಿವಾಸಿಯಾಗಿರುವ ಕೊಲೆ ಆರೋಪಿ ಭೀಮಣ್ಣ, ತಾನು ಮಾಡಿದ್ದ ಸಾಲ ತೀರಿಸಲು ಪತ್ನಿಯ ದೇಹ ಮಾರಾಟಕ್ಕಿಟ್ಟಿದ್ದ. ಸಾಲ ಪಡೆದಿರುವ ವ್ಯಕ್ತಿಯ ಜೊತೆ ಪಲ್ಲಂಗ ಹಂಚಿಕೊಳ್ಳುವಂತೆ ಪೀಡಿಸಿದ್ದ. ಪಲ್ಲಂಗ ಹಂಚಿಕೊಂಡರೆ ಮಕ್ಕಳಾಗುತ್ತೆ, ಸಾಲ ತೀರುತ್ತೆ ಎಂದು ಕಿರುಕುಳ ನೀಡುತ್ತಿದ್ದ. ಇದನ್ನು ಧಿಕ್ಕರಿಸಿದ್ದಕ್ಕೆ ಪತ್ನಿ ಶರಣಬಸಮ್ಮಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಜು.25ರಂದು ನಡೆದಿದ್ದ ಕೊಲೆ ಕೇಸ್ ಅನ್ನು ಪೊಲೀಸರು ಭೇದಿಸಿದ್ದಾರೆ.
ಕಳೆದ ವರ್ಷ ಶರಣಬಸಮ್ಮ ಜೊತೆ ಆರೋಪಿ ಭೀಮಣ್ಣ ಮದುವೆಯಾಗಿತ್ತು. 2-3 ತಿಂಗಳ ಸುಖ ಸಂಸಾರ ನಡೆಸಿದ್ದ ದಂಪತಿ ಬಳಿಕ ಒಂದೊಂದಾಗೇ ಪತಿ ಕರಾಳ ಮುಖದ ಪರಿಚಯವಾಗಿತ್ತು. ಭೀಮಣ್ಣ ಪತ್ನಿ ಶರಣಬಸಮ್ಮಗೆ ಕಿರುಕುಳ ನೀಡಲು ಮುಂದಾಗಿದ್ದ. ಶರಣಬಸಮ್ಮಳ ತವರು ಮನೆಯಲ್ಲಿ ಪತ್ನಿಯ ಜೀವ ತೆಗೆದಿದ್ದಾನೆ. ಕ್ರೂರಿಯ ಅಟ್ಟಹಾಸಕ್ಕೆ ವಿಲವಿಲ ಒದ್ದಾಡಿ ಶರಣಬಸಮ್ಮ ಪ್ರಾಣಬಿಟ್ಟಿದ್ದಾಳೆ.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ 3 ಲಾರಿಗಳು, 1 ಸ್ಲೀಪರ್ ಕೋಚ್ ಬಸ್, ಕಾರು ನಡುವೆ ಸರಣಿ ಅಪಘಾತ; ಹಲವರಿಗೆ ಗಾಯ
ಜುಲೈ 25 ರಂದು ಪತ್ನಿ ಶರಣಬಸಮ್ಮನ ಜೊತೆ ಗಂಡ ಭೀಮಣ್ಣ ಗಂಗನಾಳ ಗ್ರಾಮಕ್ಕೆ ಬಂದಿದ್ದ. ಶರಣಬಸಮ್ಮಳ ತಂದೆ-ತಾಯಿಯನ್ನು ನೋಡಿ ಬರೋಣ ಬಾ ಎಂದು ಕರೆದುಕೊಂದು ಬಂದಿದ್ದ. ಕುಟುಂಬಸ್ಥರೊಂದಿಗೆ ಬಾಡೂಟ ಸವೆದು ದಂಪತಿ ಮಲಗಿದ್ದರು. ತಡರಾತ್ರಿ 12 ಗಂಟೆಗೆ ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಹಂತಕ ಪತಿ ನಾಟಕವಾಡಿದ್ದ. ಕೊಲೆ ಮಾಡಿ ಹೃದಯಘಾತದಿಂದ ಮೃತಪಟ್ಟಿದ್ದಾಳೆಂದು ಕಥೆ ಕಟ್ಟಿದ್ದ. ಸದ್ಯ ಹಂತಕ ಪತಿಯನ್ನ ಬಂಧಿಸಿ ಗೋಗಿ ಠಾಣೆಯ ಪೊಲೀಸರು ಜೈಲಿಗಟ್ಟಿದ್ದಾರೆ.
ಆರೋಪಿ ಭೀಮಣ್ಣ, ಕೊಲೆ ಮಾಡಿದ್ದು ಯಾರಿಗೂ ಗೊತ್ತಿಲ್ಲ ಅಂತ ಬಿಂದಾಸ್ ಆಗಿ ಓಡಾಡ್ತಿದ್ದ. ತಮ್ಮ ಊರು ಹುಣಸಗಿಯಲ್ಲಿಯೇ ಓಡಾಡಿಕೊಂಡಿದ್ದ. ಸದ್ಯ ಒಂದೂವರೆ ತಿಂಗಳ ನಂತರ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಮಾಡಿದ್ದು ಬೆಳಕಿಗೆ ಬಂದಿದೆ. ಕೊಲೆ ಮಾಡಿರುವ ಬಗ್ಗೆ ಸೂಕ್ತ ಮಾಹಿತಿ ಕಲೆ ಹಾಕಿದ ಗೋಗಿ ಪೊಲೀಸರು ಆಡಿಯೋ ಸೇರಿದಂತೆ ಮಹತ್ವದ ಸಾಕ್ಷಿ ಕಲೆ ಹಾಕಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ನಂತರ ಹಂತಕ ಭೀಮಣ್ಣ ಸೇರಿ ಆತನ ಕುಟುಂಬಸ್ಥರ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ. 7 ಜನರ ವಿರುದ್ಧ ಗೋಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ