ಫೋನ್​ನಲ್ಲಿ ಹರಟೆ ಹೊಡೆಯುತ್ತಾ ರೈಲು ಟಿಕೆಟ್ ಕೊಡಲು ಹತ್ತಾರು ಜನರ ಸತಾಯಿಸಿದ ಕ್ಲರ್ಕ್: ವಿಡಿಯೋ ವೈರಲ್ ಬೆನ್ನಲ್ಲೇ ಅಮಾನತು

ಯಾದಗಿರಿಯಲ್ಲಿ ಟಿಕೆಟ್ ನೀಡದೆ ಫೋನ್‌ನಲ್ಲಿ ಹರಟೆ ಹೊಡೆಯುತ್ತಾ ಪ್ರಯಾಣಿಕರ ಸಮಯ ಹಾಳು ಮಾಡಿದ ರೈಲ್ವೆ ಕ್ಲರ್ಕ್‌ ಅನ್ನು ಅಮಾನತು ಮಾಡಲಾಗಿದೆ. ಕ್ಲರ್ಕ್ ದರ್ಪದ ವಿಡಿಯೋವನ್ನು ಪ್ರಯಾಣಿಕರು ಮೊಬೈಲ್​​ನಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಗಳಲ್ಲಿ ವೈರಲ್‌ ಆಗಿತ್ತು. ವೈರಲ್ ವಿಡಿಯೋ ಇಲ್ಲಿದೆ.

ಫೋನ್​ನಲ್ಲಿ ಹರಟೆ ಹೊಡೆಯುತ್ತಾ ರೈಲು ಟಿಕೆಟ್ ಕೊಡಲು ಹತ್ತಾರು ಜನರ ಸತಾಯಿಸಿದ ಕ್ಲರ್ಕ್: ವಿಡಿಯೋ ವೈರಲ್ ಬೆನ್ನಲ್ಲೇ ಅಮಾನತು
ಫೋನ್​ನಲ್ಲಿ ಹರಟೆ ಹೊಡೆಯುತ್ತಾ ಜನರ ಸತಾಯಿಸಿದ ಕ್ಲರ್ಕ್ (ವೈರಲ್ ವಿಡಿಯೋ ಸ್ಕ್ರೀನ್​​ಗ್ರ್ಯಾಬ್)

Updated on: Aug 01, 2025 | 9:49 AM

ಬೆಂಗಳೂರು, ಆಗಸ್ಟ್ 1: ರೈಲು ಟಿಕೆಟ್ ವಿತರಣೆ ಕೌಂಟರ್​​ನಲ್ಲಿ ಕಾರ್ಯನಿರ್ವಹಿಸುವ ಕ್ಲರ್ಕ್ (Railway clerk) ಒಬ್ಬರು ವೈಯಕ್ತಿಕ ಫೋನ್ ಕರೆಯಲ್ಲಿ ತೊಡಗಿಕೊಂಡು ಪ್ರಯಾಣಿಕರ ಉದ್ದನೆಯ ಸರದಿ ಸಾಲನ್ನು ನಿರ್ಲಕ್ಷಿಸಿ ಕರ್ತವ್ಯ ಲೋಪ ಎಸಗಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಎರಡು ದಿನಗಳ ಹಿಂದೆ ಕರ್ನಾಟಕದ ಯಾದಗಿರಿಯ ರೈಲು ನಿಲ್ದಾಣದಲ್ಲಿ ನಡೆದಿದ್ದು, ವಿಡಿಯೋ ವೈರಲ್ (Video Viral) ಆಗಿದೆ. ಕ್ಲರ್ಕ್ ನಡೆಗೆ ಪ್ರಯಾಣಿಕರು ಮತ್ತು ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪ್ರಯಾಣಿಕರ ಸರದಿ ಸಾಲನ್ನು ನಿರ್ಲಕ್ಷಿಸಿ ಫೋನ್ ಸಂಭಾಷಣೆಯಲ್ಲಿ ನಿರತರಾಗಿದ್ದ ಕ್ಲರ್ಕ್ ಸಿ ಮಹೇಶ್ ಎಂಬವರನ್ನು ಇದೀಗ ಅಮಾನತು ಮಾಡಲಾಗಿದೆ.

ವೈರಲ್ ವಿಡಿಯೋದಲ್ಲೇನಿದೆ?

ರೈಲು ಟಿಕೆಟ್ ಖರೀದಿಸಲು ಪ್ರಯಾಣಿಕರು ಉದ್ದನೆಯ ಸರದಿ ಸಾಲಿನಲ್ಲಿ ನಿಂತಿದ್ದು, ಕ್ಲರ್ಕ್ ಫೋನ್​​ನಲ್ಲಿ ಮಾತನಾಡುತ್ತಾ ನಗುತ್ತಿರುವುದು ವಿಡಿಯೋದಲ್ಲಿದೆ. ಒಬ್ಬ ಪ್ರಯಾಣಿಕ ತಾಳ್ಮೆ ಕಳೆದುಕೊಂಡು ಟಿಕೆಟ್ ಕೊಡಲು ಕೇಳುತ್ತಾರೆ. ಆಗ ಕ್ಲರ್ಕ್, ‘‘ಒಂದು ನಿಮಿಷ ಕಾಯಿರಿ’’ ಎಂದು ಹೇಳಿದ್ದಾರೆ. ನಂತರ ಮೊಬೈಲ್ ಸಂಭಾಷಣೆ ಮುಂದುವರಿಸಿದ್ದಾರೆ. ಆಗ ಪ್ರಯಾಣಿಕರೊಬ್ಬರು, ‘‘ಇನ್ನೂ ಎಷ್ಟು ನಿಮಿಷ? ಕಳೆದ 15 ನಿಮಿಷಗಳಿಂದ ಕಾಯುತ್ತಿದ್ದೇವೆ, ಕೇಳಿದರೆ 1 ನಿಮಿಷ ಎನ್ನುತ್ತೀರಿ’’ ಎಂದಿದ್ದಾರೆ.

ರೈಲ್ವೆ ಕ್ಲರ್ಕ್ ದರ್ಪ: ವೈರಲ್ ವಿಡಿಯೋ


ಜನರಿಂದ ಆಕ್ರೋಶ ಹಾಗೂ ಒತ್ತಡ ಹೆಚ್ಚಾದ ನಂತರ ಮೊಬೈಲ್ ಕರೆ ಕಟ್ ಮಾಡಿದ ಕ್ಲರ್ಕ್ ಟಿಕೆಟ್ ನೀಡಲು ಆರಂಭಿಸಿದ್ದಾರೆ.

ಇದರ ಬೆನ್ನಲ್ಲೇ, ಸಾರ್ವಜನಿಕರ ಆಕ್ರೋಶಕ್ಕೆ ತ್ವರಿತವಾಗಿ ಸ್ಪಂದಿಸಿದ ನಿಲ್ದಾಣ ವ್ಯವಸ್ಥಾಪಕ ಭಾಗೀರಥ ಮೀನಾ ಅವರು ಶಿಸ್ತು ಕ್ರಮ ಕೈಗೊಂಡಿದ್ದಾರೆ. ಕ್ಲರ್ಕ್ ಸಿ ಮಹೇಶ್ ಅವರನ್ನು ಅಮಾನತುಗೊಳಿಸಿ, ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲು ಸೂಚಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ