ಮೈಸೂರು, ಮಾರ್ಚ್ 14: ಅರಮನೆಯ AC ರೂಂನಲ್ಲಿ ರಾಜನಾಗಿರುವ ಬದಲು, ಪ್ರಜೆಗಳಂತೆ ಬದುಕಲು ಬಂದ್ರೆ ಸ್ವಾಗತಿಸದಿರಲಾಗುತ್ತಾ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ತಿರುಗೇಟು ನೀಡಿರುವ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ (Yaduveer Krishnadatta Chamaraja Wadiyar), ಎಸಿ ರೂಮ್ನಿಂದ ಜನರ ಮಧ್ಯೆ ಬರುವುದು ಕಷ್ಟವೇನು ಅಲ್ಲ. ನಾನು ಈಗಾಗಲೇ ಜನರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿದ್ದಾರೆ. ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ, ಬಿಜೆಪಿ ಕಾರ್ಯವೈಖರಿ ಗಮನಿಸಿ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ರಾಜಕಾರಣದ ಮೂಲಕ ಸಾಮಾಜಿಕ ಸಮಸ್ಯೆ ಬಗೆಹರಿಸಲು ಸಾಧ್ಯ. ಇದೇ ಕಾರಣಕ್ಕೆ ನಾನು ರಾಜಕಾರಣಕ್ಕೆ ಬರಲು ತೀರ್ಮಾನಿಸಿದ್ದೇನೆ. ರಾಜಕೀಯದಲ್ಲಿ ಇರುವ ಸವಾಲುಗಳನ್ನು ಅರಿತೇ ಬಂದಿದ್ದೇನೆ. ಕೇವಲ ಅವಕಾಶ ಸಿಕ್ಕಿದೆ ಅಂತಾ ನಾನು ರಾಜಕಾರಣಕ್ಕೆ ಬಂದಿಲ್ಲ. ಪ್ರತಾಪ್ ಸಿಂಹ ಸೇರಿ ಹಲವರು ಉತ್ತಮ ಅಡಿಪಾಯ ಹಾಕಿದ್ದಾರೆ ಎಂದಿದ್ದಾರೆ.
ಜನರು ಅವಕಾಶ ಕೊಟ್ಟರೆ ಮೈಸೂರು-ಕೊಡಗು ಅಭಿವೃದ್ಧಿ ಮಾಡುತ್ತೇನೆ. ಮೈಸೂರು ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುವ ಜವಾಬ್ದಾರಿ ಇದೆ. ಕಳೆದ 9 ವರ್ಷದಿಂದ ಮೈಸೂರು ಅರಮನೆ ಜವಾಬ್ದಾರಿ ಹೊತ್ತಿದ್ದೇನೆ. ಈಗ ಸಾರ್ವಜನಿಕ ಜೀವನದಲ್ಲಿ ಭಾಗಿಯಾಗಿದ್ದೇನೆ. ಉತ್ತಮ ಸರ್ಕಾರ ಇದ್ದರೆ ಮತ್ತಷ್ಟು ಅಭಿವೃದ್ಧಿಗೆ ಅನುಕೂಲ ಆಗಲಿದೆ ಎಂದು ಹೇಳಿದ್ದಾರೆ.
ಯದುವೀರ್ ಸ್ಪರ್ಧೆ ವಿಚಾರವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಅವರ ಸುತ್ತಮುತ್ತ ಕ್ಷೇತ್ರಗಳಲ್ಲಿ ಅನುಕೂಲವಾಗಲಿದೆ. ಅವರು ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಓಡಾಡಲು ಒಪ್ಪಿಕೊಂಡಿದ್ದಾರೆ. ಯದುವೀರ್ ಬಿಜೆಪಿ ಸೇರ್ಪಡೆಯಾಗಿದ್ದಕ್ಕೆ ದೊಡ್ಡಬಲ ಬಂದಿದೆ ಎಂದರು.
ಇದನ್ನೂ ಓದಿ: ಟಿಕೆಟ್ ಸಿಕ್ಕ ಖುಷಿಯಲ್ಲಿ ಮೈಸೂರು-ಕೊಡಗು ಜನತೆಗೊಂದು ಯದುವೀರ್ ಪತ್ರ, ಆ ಪತ್ರದಲ್ಲೇನಿದೆ?
ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ಕೈತಪ್ಪಿದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಯಾವ ಪ್ರಶ್ನೆ ಕೇಳಬೇಡಿ, ಎಲ್ಲರೂ ಸಮಾಧಾನಗೊಂಡಿದ್ದಾರೆ. ಕೆ.ಎಸ್.ಈಶ್ವರಪ್ಪ ಜೊತೆಗೂ ನಾನು ಮಾತನಾಡುತ್ತೇನೆ. ಈಶ್ವರಪ್ಪ ಪುತ್ರನನ್ನು ಎಂಎಲ್ಸಿ ಮಾಡುವ ಬಗ್ಗೆ ಚರ್ಚೆ ಆಗುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:07 pm, Thu, 14 March 24