ಟಿಕೆಟ್​ ಸಿಕ್ಕ ಖುಷಿಯಲ್ಲಿ ಮೈಸೂರು-ಕೊಡಗು ಜನತೆಗೊಂದು ಯದುವೀರ್ ಪತ್ರ, ಆ ಪತ್ರದಲ್ಲೇನಿದೆ?

ಬಿಜೆಪಿ ಇಂದು(ಮಾ.13) ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನ ಬಿಡುಗಡೆಗೊಳಿಸಿದ್ದು, ಮೈಸೂರು ಕೊಡಗು ಕ್ಷೇತ್ರದ ಟಿಕೆಟ್​ನ್ನು ಯದುವೀರ್​ಗೆ ಕೊಡಲಾಗಿದೆ. ಬಳಿಕ ಟಿಕೆಟ್​ ಸಿಕ್ಕ ಸಂತೋಷದಲ್ಲಿ ಮೈಸೂರು ಕೊಡಗು ಕ್ಷೇತ್ರದ ಜನರಿಗೆ ಯದುವೀರ್ ಪತ್ರ ಬರೆದಿದ್ದಾರೆ.

ಟಿಕೆಟ್​ ಸಿಕ್ಕ ಖುಷಿಯಲ್ಲಿ ಮೈಸೂರು-ಕೊಡಗು ಜನತೆಗೊಂದು ಯದುವೀರ್ ಪತ್ರ, ಆ ಪತ್ರದಲ್ಲೇನಿದೆ?
ಯದುವೀರ್​​
Follow us
ರಾಮ್​, ಮೈಸೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on:Mar 13, 2024 | 11:05 PM

ಮೈಸೂರು, ಮಾ.13: ಬಿಜೆಪಿ ಇಂದು(ಮಾ.13) ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನ ಬಿಡುಗಡೆಗೊಳಿಸಿದೆ. ಅದರಲ್ಲಿ ಹಾಲಿ ಮೈಸೂರು-ಕೊಡಗು ಕ್ಷೇತ್ರ ಸಂಸದ ಪ್ರತಾಪ್​ ಸಿಂಹ ಅವರಿಗೆ ಕೊಕ್​ ನೀಡಿ, ನೂತನ ಅಭ್ಯರ್ಥಿಯಾಗಿ ಯದುವೀರ್​ಗೆ(Yaduveer) ಟಿಕೆಟ್​ ಘೋಷಣೆ ಮಾಡಲಾಗಿದೆ. ಈ ಹಿನ್ನಲೆ ಟಿಕೆಟ್​ ಸಿಕ್ಕ ಸಂತೋಷದಲ್ಲಿ ಮೈಸೂರು ಕೊಡಗು ಕ್ಷೇತ್ರದ ಜನರಿಗೆ ಯದುವೀರ್ ಪತ್ರ ಬರೆದಿದ್ದಾರೆ.

ಪತ್ರದಲ್ಲೇನಿದೆ…

‘ಸಮಸ್ತ ಮೈಸೂರು-ಕೊಡಗು ಪ್ರಜಾಬಾಂಧವರಿಗೆ ನನ್ನ ನಮಸ್ಕಾರಗಳು. ನಿಮ್ಮೆಲ್ಲರಿಗೂ ಈಗಾಗಲೇ ತಿಳಿದಿರುವಂತೆ, ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಭಾರತೀಯ ಜನತಾ ಪಕ್ಷದಿಂದ ಅವಕಾಶ ನೀಡಲಾಗಿದೆ. ನಮ್ಮ ಪೂರ್ವಜರ ಮಹತ್ತರ ಕೊಡುಗೆಗಳಿಂದ ಕರ್ನಾಟಕ ಜನತೆಯ ಬೆಂಬಲ ಮತ್ತು ಭಾವನಾತ್ಮಕ ಸಂಪರ್ಕವು ನಿಸ್ಸಂದೇಹವಾಗಿ ನಮ್ಮೊಟ್ಟಿಗಿದೆ. ಕಳೆದ ಒಂಭತ್ತು ವರ್ಷಗಳಿಂದ ನಾನು ನಮ್ಮ ಕ್ಷೇತ್ರದ ಹಾಗೂ ನಮ್ಮ ರಾಜ್ಯದ ಸಾರ್ವಜನಿಕ ಜೀವನದ ಭಾಗವಾಗಿದ್ದು, ಅನೇಕ ಪ್ರಜಾಬಾಂಧವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದು, ನನ್ನನ್ನು ನೀವೆಲ್ಲರೂ ಮುಕ್ತವಾಗಿ ಒಬ್ಬ ಸ್ನೇಹಿತನಂತೆ ಸ್ವಾಗತಿಸಿ ಆತಿಥ್ಯವನ್ನು ನೀಡಿದ್ದೀರಿ, ಈಗ ಆ ಋಣವನ್ನು ತೀರಿಸಲು ಅವಕಾಶ ಕೇಳುತ್ತಿದ್ದೇನೆ.

ಇದನ್ನೂ ಓದಿ:ಲೋಕಸಭಾ ಚುನಾವಣೆಗೆ ಬಿಜೆಪಿಯ 2ನೇ ಪಟ್ಟಿ ಪ್ರಕಟ, ಕರ್ನಾಟಕದ ಹಲವು ಹಾಲಿ ಸಂಸದರಿಗೆ ಟಿಕೆಟ್ ಕಟ್

ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದದಿಂದ ಮೈಸೂರು ಮತ್ತು ಕೊಡಗಿನ ಸರ್ವಾಂಗೀಣ ಏಳಿಗೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಲು ನಾನು ಆಶಿಸುತ್ತಿದ್ದೇನೆ, ಹಾಗೂ ಮೈಸೂರು-ಕೊಡಗಿನ ಜನರ ಶುಭ ಹಾರೈಕೆ ಮತ್ತು ಬೆಂಬಲವನ್ನು ಎದುರು ನೋಡುತ್ತಿದ್ದೇನೆ. ಚುನಾವಣೆಯಲ್ಲಿ ಪಕ್ಷವನ್ನು ಪ್ರತಿನಿಧಿಸಲು ನನ್ನ ಮೇಲೆ ನಂಬಿಕೆ ಇಟ್ಟಿರುವ ಗೌರವಾನ್ವಿತ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೂ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ. ನಡ್ಡಾ ಅವರಿಗೂ, ಗೃಹಮಂತ್ರಿಗಳಾದ ಶ್ರೀ ಅಮಿತ್ ಷಾ ಅವರಿಗೂ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಶ್ರೀ ಬಿ.ಎಲ್ ಸಂತೋಷ್ ಅವರಿಗೂ ಹಾಗೂ ವಿಶೇಷವಾಗಿ ಬಿಜೆಪಿ ಪಕ್ಷದ ಆತ್ಮ ಜೀವವಾಗಿರುವ ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಎರಡು ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ನಾನು ಶ್ರೀ ಪ್ರತಾಪ್ ಸಿಂಹ ಅವರನ್ನು ಅಭಿನಂದಿಸುತ್ತೇನೆ. ಈ ಕ್ಷೇತ್ರದ ಅಭಿವೃದ್ಧಿಗೆ ಅವರ ಬದ್ಧತೆ ನಮ್ಮೆಲ್ಲರ ಭವಿಷ್ಯದ ಆಕಾಂಕ್ಷಿಗಳಿಗೆ ಭದ್ರ ಅಡಿಪಾಯ ಹಾಕಿ ಕೊಟ್ಟಿದೆ. ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯ ಆಶಿರ್ವಾದಾನುಗ್ರಹಗಳು ನಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೆನೆ ಎಂದು ತಮ್ಮ ಮನದಾಳದ ಮಾತನ್ನು ಪತ್ರದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

‘ನಮಗೆ ಬೇಕು, ನಮ್ಮ ಮಹಾರಾಜರು’ ಪೋಸ್ಟರ್ ಅಭಿಯಾನ

ಯದುವೀರ್​ಗೆ ಮೈಸೂರು-ಕೊಡಗು ಬಿಜೆಪಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಯದುವೀರ್ ಪರ ‘ನಮಗೆ ಬೇಕು, ನಮ್ಮ ಮಹಾರಾಜರು’ ಪೋಸ್ಟರ್ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ನಾಲ್ವಡಿ, ಜಯಚಾಮರಾಜೇಂದ್ರ ಒಡೆಯರ್ ಫೋಟೋ ಬಳಸಿ ಅಭಿಯಾನ ಶುರು ಮಾಡಿದ್ದಾರೆ.

ಯದುವೀರ ಒಡೆಯರ್ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್

ಯದುವೀರಗೆ ಮೈಸೂರು-ಕೊಡಗು ಲೋಕಸಭಾ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ  ಒಡೆಯರ್ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಮಾ.16ರಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯ ನಾಯಕರ ಸಮ್ಮುಖದಲ್ಲಿ ಒಡೆಯರ್ ಪಕ್ಷ ಸೇರಲಿದ್ದಾರೆ. ಅಂದೇ ಸುದ್ದಿಗೋಷ್ಠಿ ನಡೆಸಿ ಮಾತನಾಡಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:58 pm, Wed, 13 March 24