Lok Sabha Elections: ಯಾವುದೇ ಕ್ಷಣದಲ್ಲಿ ಬಿಜೆಪಿ 2ನೇ ಪಟ್ಟಿ ಬಿಡುಗಡೆ: ‘ಟಿವಿ9’ಗೆ ಸಿಕ್ತು ಸಂಭಾವ್ಯರ ವಿವರ, ಇಲ್ಲಿದೆ ನೋಡಿ
ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕದಲ್ಲಿ ಹಲವು ಕ್ಷೇತ್ರಗಳು ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿವೆ. ಈ ಸಂದರ್ಭದಲ್ಲಿ ಕರ್ನಾಟಕದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ‘ಟಿವಿ9’ಗೆ ದೊರೆತಿದೆ. ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ದೊರೆಯಬಹುದು ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಮಾರ್ಚ್ 13: ಯಾವುದೇ ಕ್ಷಣದಲ್ಲಿಯೂ ಲೋಕಸಭೆ ಚುನಾವಣೆಗೆ (Lok Sabha Elections) ಬಿಜೆಪಿ (BJP) ಎರಡನೇ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಕರ್ನಾಟಕದ (Karnataka) ಅಭ್ಯರ್ಥಿಗಳ ಹೆಸರು ಕೂಡ ಘೋಷಣೆ ಆಗುವ ನಿರೀಕ್ಷೆ ಇದೆ. ಈ ಮಧ್ಯೆ ಕಮಲಪಡೆಯದಲ್ಲಿ ಒಂದು ರೀತಿ ಧರ್ಮ ಸಂಕಟ ಶುರುವಾಗಿದೆ. ಮತ್ತೊಂದೆಡೆ ಜೆಡಿಎಸ್ ಪಾಳೆಯದಲ್ಲಿ ಕೂಡಾ ಲೋಕಸಭೆ ಚುನಾವಣೆ ಚಟುವಟಿಕೆ ಗರಿಗೆದರಿದೆ.
ಕರ್ನಾಟಕದ ಅಭ್ಯರ್ಥಿಗಳ ಹೆಸರು ಬಿಡುಗಡೆಯಾಗುವ ನಿರೀಕ್ಷೆ ಇರುವ ಕಾರಣ ಇಡೀ ರಾಜ್ಯದ ಕಮಲಪಡೆಯ ಚಿತ್ತ ಈಗ ದೆಹಲಿಯತ್ತ ನೆಟ್ಟಿದೆ. ಮೂಲಗಳ ಪ್ರಕಾರ ಇಂದು ಸಂಜೆ ವೇಳೆಗೆ ಪಟ್ಟಿ ಬಿಡುಗಡೆ ಆಗಲಿದೆ. ಅದ್ರಲ್ಲೂ ಕರ್ನಾಟಕದ 15 ರಿಂದ 18 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಫೈನಲ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಂಭಾವ್ಯ ಅಭ್ಯರ್ಥಿಗಳ ಹೆಸರಿನ ಮಾಹಿತಿ ‘ಟಿವಿ9ಗೆ’ ಸಿಕ್ಕಿದೆ.
ಯಾವ ಕ್ಷೇತ್ರದಿಂದ ಯಾರಿಗೆ ಟಿಕೆಟ್?
‘ಟಿವಿ9’ಗೆ ದೊರೆತ ಸಂಭಾವ್ಯರ ಪಟ್ಟಿ ಪ್ರಕಾರ, ಹಾವೇರಿಯಿಂದ ಬಸರಾಜ ಬೊಮ್ಮಾಯಿ, ಬೆಳಗಾವಿಯಿಂದ ಜಗದೀಶ್ ಶೆಟ್ಟರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾಕ್ಟರ್ ಮಂಜುನಾಥ್ಗೆ ಟಿಕೆಟ್ ಕೊಡಬಹುದು ಎನ್ನಲಾಗಿದೆ. ಇನ್ನು ಮೈಸೂರು ಕೊಡಗು ಕ್ಷೇತ್ರದಿಂದ ಯದುವೀರ್ ಕೃಷ್ಣದತ್ ಚಾಮರಾಜ್ ಒಡೆಯರ್, ವಿಜಯಪುರದಿಂದ ಗೋವಿಂದ್ ಕಾರಜೋಳ, ಚಿಕ್ಕೋಡಿಯಿಂದ ರಮೇಶ್ ಕತ್ತಿ ಅವರಿಗೆ ಟಿಕೆಟ್ ಸಿಗಬಹುದು ಎನ್ನಲಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಚ್ಚರಿ ಅಭ್ಯರ್ಥಿ ಆಯ್ಕೆ ನಿರೀಕ್ಷೆ ಇದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ.ಮಂಜುನಾಥ್ ಸ್ಪರ್ಧೆ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಹಿಂದೆ ಹೆಚ್ಡಿ ದೇವೇಗೌಡರ ವಿರುದ್ಧವೇ ಗೆದ್ದಿದ್ದೇವೆ, ಹೆಚ್ಡಿ ಕುಮಾರಸ್ವಾಮಿ ವಿರುದ್ಧವೂ ಗೆದ್ದಿದ್ದೇವೆ. ಹೀಗಾಗಿ ಮಂಜುನಾಥ್ ಸ್ಪರ್ಧೆ ಮಾಡಿದರೂ ನಮಗೇನು ಬೇಸರವಿಲ್ಲ ಎಂದಿದ್ದಾರೆ.
ಬೆಳಗಾವಿಯಿಂದ ಸ್ಪರ್ಧಿಸಲು ಜಗದೀಶ್ ಶೆಟ್ಟರ್ ಹಿಂದೇಟು!
ಅಷ್ಟಕ್ಕೂ ಬೆಳಗಾವಿಯಿಂದ ಈ ಬಾರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೊಡಲಾಗ್ತಿದೆ ಎನ್ನಲಾಗಿದೆ. ಹೀಗಾಗೇ ಚಿಕ್ಕಮಗಳೂರಿನಲ್ಲಿ ಶೋಭಾರ ಕರಂದ್ಲಾಜೆ ವಿರುದ್ಧ ನಡೀತಿರುವಂತೆ, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ಗೋಬ್ಯಾಕ್ ಅಭಿಯಾನ ಶುರುವಾಗಿದೆ. ಮಹಾಂತೇಶ್ ಕವಟಗಿಮಠ ಅವರನ್ನ ಬೆಂಬಲಿಸಿ ಶೆಟ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಆದ್ರೆ, ಬೆಳಗಾವಿಯಿಂದ ಸ್ಪರ್ಧೆ ಮಾಡಲು ಖುದ್ದು ಜಗದೀಶ್ ಶೆಟ್ಟರ್ ಹಿಂದೇಟು ಹಾಕ್ತಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಬೆಳಗಾವಿಯಿಂದ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಹಿರಿಯ ಮುಖಂಡರಿಗೆ ಶೆಟ್ಟರ್ ಇಂದು ಮಾಹಿತಿ ನೀಡಿದ್ದಾರೆ. ಬೆಳಗಾವಿ ಬದಲಾಗಿ ಧಾರವಾಡ ಲೋಕಸಭಾ ಕ್ಷೇತ್ರದ ಬಗ್ಗೆ ಶೆಟ್ಟರ್ ಒಲವು ಹೊಂದಿದ್ದು, ಅಮಿತ್ ಶಾ ಮೇಲೆ ಒತ್ತಡ ತರುವ ಯತ್ನ ನಡೆಸ್ತಿದ್ದಾರೆ. ಹೀಗಾಗಿ ಬಿಜೆಪಿಗೆ ಜಗದೀಶ್ ಶೆಟ್ಟರ್ ವಾಪಸಾತಿ ಒಂದು ರೀತಿ ಸವಾಲಾಗಿದೆ.ಶೆಟ್ಟರ್ ಕ್ಷೇತ್ರ ನಿರ್ಧಾರದ ಬಳಿಕವೇ ಧಾರವಾಡ ಮತ್ತು ಹಾವೇರಿ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ: ಬೆಂಗಳೂರು ಉತ್ತರದಿಂದ ಸದಾನಂದ ಗೌಡ ಟಿಕೆಟ್ ಬೇಡಿಕೆಗೆ ಬಿಜೆಪಿ ವರಿಷ್ಠರು ಕೇಳಿದ ಪ್ರಶ್ನೆ ಹೀಗಿದೆ ನೋಡಿ!
ಲೋಕಸಭೆ ಅಖಾಡದಲ್ಲಿ ಸಕ್ರಿವಾಯಿತು ದಳಪತಿಗಳ ದಂಡು!
ಒಂದೆಡೆ, ಬಿಜೆಪಿಯಲ್ಲಿ ಟಿಕೆಟ್ ಕಗ್ಗಂಟು ಇದ್ದರೆ, ಇತ್ತ ಬಿಜೆಪಿ ಜೊತೆ ಮೈತ್ರಿಮಾಡಿಕೊಂಡಿರುವ ಜೆಡಿಎಸ್ ಹಾಸನ ಮತ್ತು ಮಂಡ್ಯದಲ್ಲಿ ಲೋಕಸಭೆ ಚುನಾವಣೆ ತಯಾರಿ ಆರಂಭಿಸಿದೆ. ಹಾಸನದಲ್ಲಿಂದು ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಪಕ್ಷದ ಚುನಾಯಿತ ಸದಸ್ಯರು, ಮಾಜಿ ಸದಸ್ಯರು ಹಾಗು ಪ್ರಮುಖರ ಸಭೆ ನಡೆಸಲಾಗ್ತಿದೆ. ಇನ್ನೊಂದೆಡೆ ಮಂಡ್ಯದಲ್ಲಿ ಶುಕ್ರವಾರ ಮೊದಲ ಬಾರಿ ಪಕ್ಷದ ಕಾರ್ಯಕರ್ತರ ಸಭೆ ನೆಡಸಲು ಯೋಜನೆ ಮಾಡಲಿದೆ. ಆಸಕ್ತಿದಾಯಕ ವಿಚಾರ ಎಂದರೆ, ಇನ್ನೂ ಟಿಕೆಟ್ ಘೋಷಣೆ ಆಗದೆ ದಳಪತಿಗಳು ಈ ರೀತಿ ಚಟುವಟಿಕೆ ನಡೆಸುತ್ತಿರುವುದು ಕುತೂಹಲ ಕೆರಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Wed, 13 March 24