ಬೆಂಗಳೂರು, ಡಿಸೆಂಬರ್ 18: 2024 ಕರ್ನಾಟಕದ (Karnataka) ಪಾಲಿಗೆ ಸಾಕಷ್ಟು ಮಹತ್ವದಾಗಿತ್ತು. ಉಪ ಚುನಾವಣೆ ಸೇರಿದಂತೆ ಪ್ರಮುಖ ವಿದ್ಯಮಾನಗಳು ಜರುಗಿವೆ. ಜೊತೆಗೆ ಹಲವು ವಿವಾದಗಳು ಸದ್ದು ಮಾಡಿವೆ. ರಾಜ್ಯದ ರಾಜಕೀಯ ನಾಯಕರು ಸೇರಿದಂತೆ ಸ್ವಾಮೀಜಿಗಳು ಕೂಡ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದರು. ಹಾಗಾದರೆ ಈ ವರ್ಷ ಸದ್ದು ಮಾಡಿದ್ದ ವಿವಾದಾತ್ಮಕ ಹೇಳಿಕೆ ಮತ್ತು ಅದನ್ನು ಹೇಳಿದವರು ಯಾರು ಯಾರು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ನ. 26 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದು ಒಕ್ಕಲಿಗ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಸ್ವಾಮೀಜಿ ಈ ಹೇಳಿಕೆ ರಾಜಕೀಯ ಸಮರಕ್ಕೆ ಕಾರಣವಾಗಿತ್ತು.
ಸೈಯದ್ ಅಬ್ಬಾಸ್ ಎಂಬುವವರು ನೀಡಿದ ದೂರಿನ ಮೇರೆಗೆ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಕೂಡ ಜಾರಿ ಮಾಡಿದ್ದರು. ಆದರೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಉಪ್ಪಾರಪೇಟೆ ಪೊಲೀಸ್ ಉಪ ನಿರೀಕ್ಷಕರಿಗೆ ಪತ್ರ ಬರೆದಿದ್ದರು. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ದೃಷ್ಟಿಯಿಂದ ಪ್ರಕರಣ ಬೆಳೆಸದೆ ಇಲ್ಲಿಗೆ ಮುಕ್ತಾಯಗೊಳಿಸುವಂತೆ ಪತ್ರದ ಮೂಲಕ ಸ್ವಾಮೀಜಿ ಮನವಿ ಮಾಡಿದ್ದರು.
ಬೆಂಗಳೂರಿನ ಗೋರಿಪಾಳ್ಯ ಪಾಕಿಸ್ತಾನದಲ್ಲಿ ಇದೆಯಾ ಎಂಬ ಹೈಕೋರ್ಟ್ ನ್ಯಾಯಾಧೀಶರಿಗೆ ಸುಪ್ರಿಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಈ ವಿಚಾರ ಕೂಡ ಸಾಕಷ್ಟು ವಿವಾದನ್ನುಂಟು ಮಾಡಿತ್ತು. ಹೈಕೋರ್ಟ್ ನ್ಯಾಯಾಧೀಶ ವಿ ಶ್ರೀಶಾನಂದ ಅವರು ಗೋರಿಪಾಳ್ಯವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ್ದರು.
ಇದನ್ನೂ ಓದಿ: Year End 2024: ಕರ್ನಾಟಕದಲ್ಲಿ ಸಂಭವಿಸಿದ ದುರಂತಗಳು, ನೈಸರ್ಗಿಕ ವಿಕೋಪಗಳು
ಪ್ರಕರಣಯೊಂದರ ವಿಚಾರಣೆ ವೇಳೆ ಕೆಆರ್ ಮಾರುಕಟ್ಟೆ ಮತ್ತು ಗೋರಿಪಾಳ್ಯವರೆಗೆ ಮೈಸೂರು ರೋಡ್ ಫ್ಲೈಓವರ್ ಪಾಕಿಸ್ತಾನದಲ್ಲಿದೆ, ಹೊರತು ಭಾರತದಲ್ಲಿಲ್ಲ. ಇದು ವಾಸ್ತವ ಎಂದು ಹೇಳಿದ್ದರು. ಇದು ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಬಳಿಕ ಸುಪ್ರಿಂಕೋರ್ಟ್ ಪ್ರಕರಣವನ್ನು ಕೈಗೆತ್ತಿಕೊಂಡು ನ್ಯಾಯಾಧೀಶ ವಿ ಶ್ರೀಶಾನಂದ ಅವರಿಗೆ ಸರಿಯಾಗಿದೆ ತರಾಟೆ ತೆಗೆದುಕೊಂಡಿತ್ತು. ಬಳಿಕ ಅವರು ಕ್ಷಮೆಯಾಚಿಸಿದ್ದರು.
ಚನ್ನಪಟ್ಟಣ ಉಪಚುನಾವಣೆ ಅಖಾಡದಲ್ಲಿ ಪ್ರಚಾರ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಯನ್ನು ಕರಿಯ ಎಂದು ಕರೆಯುವ ಮೂಲಕ ವಿವಾದವನ್ನು ಮೈಮೇಲೆ ಎದುಕೊಂಡಿದ್ದರು. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಪರ ಪ್ರಚಾರದ ವೇಳೆ ಜಮೀರ್, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದ್ದರು. ಸಿ.ಪಿ ಯೋಗೇಶ್ವರ್ ಹೊಗಳುವ ಭರದಲ್ಲಿ ಕುಮಾರಸ್ವಾಮಿ ವಿರುದ್ಧ ಕಾಲಿಯಾ ಎಂದು ವಿವಾದಾತ್ಮಕ ಪದ ಬಳಸಿದ್ದರು.
ಜಮೀರ್ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ ಸೇರಿದಂತೆ ಪ್ರತಿಯೊಬ್ಬ ನಾಯಕರು ಜಮೀರ್ ವಿರುದ್ಧ ಕಿಡಿಕಾರಿದ್ದರು. ಈ ವೇಳೆ ಒಕ್ಕಲಿಗರ ಸಂಘ ಹೆಚ್ಡಿ ಕುಮಾರಸ್ವಾಮಿಗೆ ಬೆನ್ನಿಗೆ ನಿಂತಿತ್ತು. ಮತ್ತೊಂದೆಡೆ ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ಸರ್ಮಥಿಸಿಕೊಂಡಿತ್ತು. ಬಳಿಕ ಜಮೀರ್ ಕ್ಷಮೆ ಕೂಡ ಯಾಚಿಸಿದ್ದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ರಾಜಕಾರಣದ ವಿವಾದಗಳ ಸರದಾರ. ಸದಾ ಒಂದಿಲ್ಲೊಂದು ಕಾಂಟ್ರವರ್ಸಿಗಳನ್ನ ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಯತ್ನಾಳ್ ವಿಶ್ವಜ್ಯೋತಿ ಬಸವಣ್ಣ ಅವರ ನಿಗೂಢ ಸಾವಿನ ಹುತ್ತಕ್ಕೆ ಕೈಹಾಕಿದ್ದರು. ನವೆಂಬರ್ 25ನೇ ರಂದು ಯತ್ನಾಳ್ ವಕ್ಫ್ ವಿರುದ್ಧ ಹೋರಾಟದ ವೇಳೆ ಮಾತನಾಡಿದ್ದ ಅವರು, ಬಸವಣ್ಣನವರ ಹಾಗೆ ನದಿಗೆ ಹಾರಿ ಸಾಯಬೇಕಾಗುತ್ತದೆ ಎಂದು ಹೇಳಿದ್ದರು.
ವಕ್ಫ್ ವಿರುದ್ಧ ಹೋರಾಟಕ್ಕೆ ಕರೆ ಕೊಡುವ ಭರದಲ್ಲಿ, ತನ್ನ ಬಣ್ಣಿಸ ಬೇಡ, ಇದಿರು ಹಳಿಯ ಬೇಡ ಎಂದು ಸಂದೇಶ ಸಾರಿದ ಬಸವಣ್ಣನ ಸಾವಿನ ವಿಚಾರವನ್ನೇ ರಾಜಕೀಯ ಕೆಸರೆರೆಚಾಟಕ್ಕೆ ಎಳೆತಂದಿದ್ದರು. ಯತ್ನಾಳ್ ಹೇಳಿಕೆ ಕೇವಲ ಕಾಂಗ್ರೆಸ್‌ಗಷ್ಟೇ ಅಲ್ಲ, ಬಿಜೆಪಿ ಬಾಯಿಗೂ ಆಹಾರ ಸಿಕ್ಕಂತಾಗಿತ್ತು. ಇಂತಹವರಿಗೆ ಮಠಾದೀಶರು ಛೀಮಾರಿ ಹಾಕಬೇಕು ಅಂತಾ ರೇಣುಕಾಚಾರ್ಯ ಆಗ್ರಹಿಸಿದ್ದರೆ, ಅಯೋಗ್ಯರಿಗೆ ಹೆದರಲ್ಲ ಎಂದು ಯತ್ನಾಳ್ ಹೇಳಿದ್ದರು.
ಇನ್ನು ಯತ್ನಾಳ್ ಮಾತಿಗೆ ಬಸವ ಅನುಯಾಯಿಗಳು ವಿರೋಧ ವ್ಯಕ್ತಪಡಿಸಿದ್ದರು. ಯಾರೇನೇ ಸ್ಪಷ್ಟನೆ ನೀಡಿದ್ದರು ಶಾಸಕ ಯತ್ನಾಳ್ ತಮ್ಮ ಮಾತಿನಿಂದ ಹಿಂದೆ ಸರಿದಿರಲಿಲ್ಲ. ಸ್ವಾಮೀಜಿಗಳ ಆಗ್ರಹದ ವಿರುದ್ಧವೂ ಲೇವಡಿ ಮಾಡಿದ್ದರು. ನಾನು ಹೇಳಿರುವುದರಲ್ಲಿ ಸತ್ಯ ಇದೆ ಎಂದು ವಾದಿಸಿದ್ದರು.
ರಾಜ್ಯ ಸಭೆ ಚುನಾವಣೆ ಗೆದ್ದ ಖುಷಿಯ ನಡುವೆ ಕಾಂಗ್ರೆಸ್ನ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಸುತ್ತ ವಿವಾದ ಸುತ್ತುಹಾಕಿಕೊಂಡಿತ್ತು. ನಾಸೀರ್ ಬೆಂಬಲಿಗರು ಗೆಲುವಿನ ಸಂಭ್ರಮಾಚರಣೆ ವೇಳೆ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದರು. ಅತ್ತ ಪಾಕ್ ಪರ ಘೋಷಣೆ ಅಲ್ಲ ಅದು ಅಂತಾ ನಾಸೀರ್ ಹುಸೇನ್ ಸೇರಿದಂತೆ ಕಾಂಗ್ರೆಸ್ ನಾಯಕರು ಸಮರ್ಥನೆ ಮಾಡಿಕೊಂಡಿದ್ದರು.
ಯಾವಾಗ ಈ ಘೋಷಣೆ ಪಾಕಿಸ್ತಾನ ಪರ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ರೋ, ಅತ್ತ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಮಾಧ್ಯಮ ಗ್ರೂಪ್ನಲ್ಲಿ ಸಮಜಾಯಿಷಿ ನೀಡಿದ್ದರು. ಪಾಕಿಸ್ತಾನ ಪರ ಘೋಷಣೆ ಅಲ್ಲ’, ‘ಅದು ನಾಸಿರ್ ಸಾಬ್ ಜಿಂದಾಬಾದ್ ಎಂದು ಘೋಷಣೆ’ ಎಂದು ಹೇಳಿದ್ದರು.
ಹೈಗೌಂಡ್ಸ್ ಪೊಲೀಸ್ ಠಾಣೆಗೆ ಕಾಂಗ್ರೆಸ್ ಮುಖಂಡ ಮನೋಹರ್ ಈ ಬಗ್ಗೆ ದೂರು ನೀಡಿದ್ದರು. ಯಾರೇ ಘೋಷಣೆ ಕೂಗಿದರೂ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಅಲ್ಲದೆ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಕೇಸ್ ಕೂಡಾ ದಾಖಲಾಗಿತ್ತು.
ಇದನ್ನೂ ಓದಿ: ಕ್ರಿಸ್ಮಸ್, ಹೊಸವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ -BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಬಳಿಕ FSL ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ದೃಢವಾಗಿತ್ತು. ಆರು ದಿನದ ಬಳಿಕ ಪೊಲೀಸರು ಮೂವರನ್ನ ಅರೆಸ್ಟ್ ಮಾಡಿದ್ದರು. ಇಲ್ತಾಜ್, ಮುನಾವರ್ ಮತ್ತು ಮೊಹಮ್ಮದ್ ನಾಶಿಪುಡಿ ಬಂಧಿತರು. ಬಂಧಿತರ ಪೈಕಿ ಒಬ್ಬ ಪಾಕಿಸ್ತಾನ ಅಂತಾ ಕೂಗಿದ್ರೆ, ಉಳಿದ ಇಬ್ಬರು ಜಿಂದಾ ಬಾದ್, ಜಿಂದಾಬಾದ್ ಅಂತಾ ಕೂಗಿದ್ದಾರೆ ಅನ್ನೋದು ಪೊಲೀಸ್ ಮೂಲಗಳಿಂದ ಗೊತ್ತಾಗಿತ್ತು. ಆರೋಪಿಗಳ ಹೇಳಿಕೆ, ತನಿಖೆ ವೇಳೆ ಸಿಕ್ಕಿದ ಸಾಕ್ಷ್ಯಗಳು, FSL ವರದಿ, ಸಾಂದರ್ಭಿಕ ಸಾಕ್ಷ್ಯ ಆಧರಿಸಿ ಬಂಧಿಸಿರುವುದಾಗಿ ಪೊಲೀಸರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದರು.
ವಿಧಾನಪರಿಷತ್‌ನಲ್ಲಿ ಸಿಟಿ ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಸಿಟಿ ರವಿ, ಅಶ್ಲೀಲ ಪದ ಬಳಸಿ ಹೆಬ್ಬಾಳ್ಕರ್ ಅವರನ್ನ ನಿಂದಿಸಿದ್ದಾರೆ ಅನ್ನೋ ಆರೋಪ ಕೇಳಿಬಂತು. ಸಿಟಿ ರವಿ ಅಶ್ಲೀಲ ಪದ ಬಳಕೆ ಮಾಡ್ತಿದ್ದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರೊಚ್ಚಿಗೆದ್ದಿದ್ದಾರೆ. ಸಿಟಿ ರವಿ 10 ಬಾರಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಅಂತಾ ಹೇಳಿದ್ದಾರೆ. ತಮ್ಮ ಸಹ ಸದಸ್ಯರನ್ನು ಕರೆತಂದು ಸಿಟಿ ರವಿ ಹೇಳಿಕೆಗೆ ತೀವ್ರ ಆಕ್ಷೇಪ ಹೊರಹಾಕಿದ್ದಾರೆ. ಇದೇ ವಿಚಾರ ಇಟ್ಕೊಂದು ಲಕ್ಷ್ಮೀ ಹೆಬ್ಬಾಳ್ಕರ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು ನೀಡಿದ್ದಾರೆ.
ಈ ಆರೋಪ ಸಂಬಂಧ ಸಿಟಿ ರವಿ ವಿರುದ್ಧ, ಹಿರೇಬಾಗೇವಾಡಿ ಠಾಣೆಯಲ್ಲಿ ಲೈಂಗಿಕ ಕಿರುಕುಳ, ಮಹಿಳೆ ಇಚ್ಛೆ ವಿರುದ್ಧ ಅಶ್ಲೀಲತೆ ತೋರುವುದು ಸೇರಿದಂತೆ ವಿವಿಧ ಆರೋಪದಡಿ ಕೇಸ್ ದಾಖಲಾಗಿತ್ತು. ಅತ್ತ ಎಫ್ಐಆರ್ ದಾಖಲಾಗುತ್ತಿದ್ದಂತೆ ಪೊಲೀಸರು ಸುವರ್ಣಸೌಧದಲ್ಲೇ ಬಂಧಿಸಿ ಕರೆದೊಯ್ದರು.
ಇನ್ನು ಸದನದೊಳಗೆ ಸಿಟಿ ರವಿ ವಿರುದ್ಧ ಗುಡುಗಿದ ಸಚಿವೆ, ನಿನಗೆ ತಾಯಿ ಇಲ್ವಾ, ಪತ್ನಿ ಇಲ್ವಾ ಅಂತಾ ಏರುಧ್ವನಿಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಇದು ಕ್ರಿಮಿನಲ್ ಅಫೆನ್ಸ್ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:40 pm, Thu, 19 December 24