ಸರ್ಕಾರಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದ ಹಾವೇರಿ ಯುವಕ

| Updated By: ganapathi bhat

Updated on: Mar 31, 2021 | 5:10 PM

ಶಾಲಾ‌ ಆವರಣದಲ್ಲಿ ಬೆಳೆಸಿದ್ದ ಮರಗಳಿಗೆ ನೀರಿನ ಸಮಸ್ಯೆ ಆಗಬಾರದು ಎಂದು ಗೆಳೆಯರ ಸಹಕಾರದಿಂದ ಡ್ರಿಪ್‌ ಇರಿಗೇಶನ್ ಪೈಪಗಳನ್ನ ಹಾಕಿ ಮರಗಳಿಗೆ ಮೀರಿನ ಕೊರತೆ ಆಗದಂತೆ ಮಾಡಿದ್ದಾರೆ ಫಕ್ಕಿರೇಶ. ಇದರ ಜೊತೆಗೆ ಆಗಾಗ ಮರಗಳಿಗೆ ನೀರುಣಿಸಿ ಮರಗಳಿಗೆ ನೀರಿನ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.

ಸರ್ಕಾರಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದ ಹಾವೇರಿ ಯುವಕ
ವಿದ್ಯಾರ್ಥಿಗಳೊಂದಿಗೆ ಫಕ್ಕಿರೇಶ ಹುರಳಿಕುಪ್ಪಿ
Follow us on

ಹಾವೇರಿ: ಸರ್ಕಾರಿ ಶಾಲೆಯ ಆವರಣವನ್ನು ಚಂದಗಾಣಿಸಲು ಮತ್ತು ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಹಸಿರನ್ನು ಉಳಿಸುವ ಕಾರ್ಯಕ್ಕೆ ಹಾವೇರಿ ಜಿಲ್ಲೆಯ ಯುವಕ ಮುಂದಾಗಿದ್ದಾರೆ. ಶಾಲೆಯಲ್ಲಿನ ಮಕ್ಕಳು ಕೂಡ ಈ ಯುವಕನ ಕಾರ್ಯದಿಂದ ಕಲಿಕೆಯಲ್ಲಿ ಹೆಚ್ಚು ಆಸಕ್ತಿಯನ್ನು ತೋರುತ್ತಿದ್ದಾರೆ. ಹಾವೇರಿ ತಾಲೂಕಿನ ನಜೀಕಲಕಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ, ಇದೇ ಗ್ರಾಮದ ಯುವಕ ಫಕ್ಕಿರೇಶ ಹುರಳಿಕುಪ್ಪಿ ಎಂಬವರು ಈ ಒಳ್ಳೆಯ ಕೆಲಸ ಮಾಡಿದ್ದಾರೆ.

ವಾಕಿಂಗ್, ಜಾಗಿಂಗ್, ತಾಲೀಮು ಅಂತಾ ಈ ಶಾಲಾ ಆವರಣಕ್ಕೆ ಫಕ್ಕಿರೇಶ ಹುರಳಿಕುಪ್ಪಿ ಬರುತ್ತಿದ್ದರು. ಆಗ ಶಾಲಾ ಆವರಣದಲ್ಲಿ ಯಾವುದೇ ಮರಗಿಡಗಳು ಇಲ್ಲದೆ ಬಟಾಬಯಲಾಗಿ ಕಾಣಿಸಿಕೊಂಡಿತ್ತು. ಇನ್ನು ಶಾಲಾ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಬೆಳೆದು, ಶಾಲಾ ಮಕ್ಕಳು ಶಾಲೆಗೆ ಬರುವುದು ಹೇಗೆ ಎನ್ನುವ ವಾತಾವರಣವಿತ್ತು. ಹೀಗಾಗಿ ಫಕ್ಕಿರೇಶ ಈ ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ.

ಶಾಲಾ ಆವರಣದಲ್ಲಿ ಬೆಳೆದು ನಿಂತಿರುವ ಕಸವನ್ನ ಕಿತ್ತು ಹಾಕಿ, ಸ್ವಚ್ಛಗೊಳಿಸಿ ಹಸಿರು ಬೆಳೆಸುವ ನಿರ್ಧಾರ ಮಾಡಿದ ಫಕ್ಕಿರೇಶ ಹುರಳಿಕುಪ್ಪಿ, ಅದರಂತೆ ಶಾಲಾ ಆವರಣದಲ್ಲಿ 350 ಮರಗಳನ್ನ ಬೆಳೆಸಿದ್ದಾರೆ. ಯುವಕನ ಈ ಕಾರ್ಯದಿಂದ ಶಾಲಾ ಆವರಣವೀಗ ಹಸಿರು ಮರಗಳಿಂದ ಕಂಗೊಳಿಸುತ್ತಿದೆ ಎನ್ನುವುದು ವಿಶೇಷ.

ಸರ್ಕಾರಿ ಶಾಲೆಯ ಆವರಣವನ್ನು ಶುಚಿಗೊಳಿಸುತ್ತಿರುವ ಫಕ್ಕಿರೇಶ

ಪಿಯುಸಿ ಮುಗಿಸಿ ಕಲಾ ವಿಭಾಗದಲ್ಲಿ ಡಿಎಂಸಿ ಕೋರ್ಸ್ ಕಲಿತಿರುವ ಯುವಕ ಫಕ್ಕಿರೇಶ, ಗ್ಲಾಸಿನ ಅಂಗಡಿ ಇಟ್ಟುಕೊಂಡಿದ್ದಾರೆ. ಮನೆಗಳಲ್ಲಿ ಶೋಕೇಸ್ ನಿರ್ಮಾಣ, ಕಿಟಕಿಗೆ ಬೇಕಾಗುವ ಗಾಜಿನ ಗ್ಲಾಸ್ ಮಾರಾಟ ಮಾಡಿಕೊಂಡು ಇದ್ದಾರೆ. ಅದರ ಜೊತೆಗೆ ತಾನು ಕಲಿತ ಶಾಲಾ‌ ಆವರಣವನ್ನ ಸುಂದರ ಹಸಿರಿನಿಂದ ಕಂಗೊಳಿಸುವಂತೆ ಮಾಡಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ.

ಹಾವೇರಿ ತಾಲೂಕಿನ ನಜೀಕಲಕಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಶಾಲಾ‌ ಆವರಣದಲ್ಲಿ ಬೆಳೆಸಿದ್ದ ಮರಗಳಿಗೆ ನೀರಿನ ಸಮಸ್ಯೆ ಆಗಬಾರದು ಎಂದು ಗೆಳೆಯರ ಸಹಕಾರದಿಂದ ಡ್ರಿಪ್‌ ಇರಿಗೇಶನ್ ಪೈಪ್​ಗಳನ್ನ ಹಾಕಿ ಮರಗಳಿಗೆ ನೀರಿನ ಕೊರತೆ ಆಗದಂತೆ ಮಾಡಿದ್ದಾರೆ. ಇದರ ಜೊತೆಗೆ ಆಗಾಗ ಮರಗಳಿಗೆ ನೀರುಣಿಸಿ ಮರಗಳಿಗೆ ನೀರಿನ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಸಾಗವಾನಿ, ಮಾವು, ಮಹಾಗನಿ, ಹೊಂಗೆಮರ ಸೇರಿದಂತೆ ವಿವಿಧ ಬಗೆಯ ಮರಗಳನ್ನ ಶಾಲಾ ಆವರಣದಲ್ಲಿ ಫಕ್ಕಿರೇಶ ಬೆಳೆಸಿದ್ದಾರೆ.

ಶಾಲಾ ಆವರಣದಲ್ಲಿ ನೆಟ್ಟಿರುವ ಮರಗಳ ದೃಶ್ಯ

ಪ್ರತಿದಿನ ಎರಡು ಗಂಟೆಗಳ ಕಾಲ ಶ್ರಮದಾನ ಮಾಡುವ ಮೂಲಕ ಶಾಲಾ ಆವರಣದಲ್ಲಿ ಬೆಳೆದು ನಿಂತಿದ್ದ ಕಸವನ್ನ ತೆಗೆದು ಸ್ವಚ್ಛತೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಒಂದರಿಂದ ಏಳನೆ ತರಗತಿವರೆಗಿನ‌ ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಮಕ್ಕಳಿಗೆ ಸದ್ಯಕ್ಕೆ ಕೊಠಡಿ ಸಮಸ್ಯೆ ಇಲ್ಲ. ಆದರೂ ಶಾಲಾ ಮಕ್ಕಳು ಆಗಾಗ ಸುಂದರ ಹಸಿರ ಸಿರಿಯ ವಾತಾವರಣದಲ್ಲಿ ಕುಳಿತು ಖುಷಿ ಖುಷಿಯಿಂದ ಅಕ್ಷರಾಭ್ಯಾಸ ಮಾಡುತ್ತಿದ್ದಾರೆ. ಫಕ್ಕಿರೇಶ ಅವರ ಕೆಲಸಕ್ಕೆ ಶಾಲಾ ಶಿಕ್ಷಕರು ಹಾಗೂ ಆತನ ಗೆಳೆಯರು ಸಾಥ್ ನೀಡಿರುವುದು ವಿಶೇಷ.

ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ಯುವಕರು ಯಾವ್ಯಾವುದೋ ದುಶ್ಚಟಗಳಿಗೆ ದಾಸರಾಗಿ ತಮ್ಮ ಆರೋಗ್ಯವನ್ನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಫಕ್ಕಿರೇಶ ಎನ್ನುವ ಈ ಯುವಕ ಶಾಲಾ ಆವರಣವನ್ನ ಸ್ವಚ್ಛಗೊಳಿಸುವ ಕೆಲಸದ ಜೊತೆಗೆ ಶಾಲಾ ಆವರಣದಲ್ಲಿ ಬಗೆಬಗೆಯ ಮರಗಳನ್ನ ಬೆಳೆಸಿ ಪರಿಸರ ಕಾಳಜಿ ತೋರಿದ್ದಾರೆ.

ಇದನ್ನೂ ಓದಿ:

ಯಾದಗಿರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಸಿಗುತ್ತಿಲ್ಲ; ವಿದ್ಯಾರ್ಥಿಗಳ ಆರೋಪ