ಕೆಲಸ, ಮನೆ, ಸಂಸಾರ, ಜವಾಬ್ಧಾರಿ..ಅಬ್ಬಬ್ಬಾ! ಮಾನಸಿಕವಾಗಿ ಪ್ರತಿಯೊಬ್ಬರೂ ನಿಭಾಯಿಸಬೇಕಾದ ಕರ್ತವ್ಯಗಳು ಒಂದೇ ಎರಡೇ? ಇವುಗಳನ್ನೆಲ್ಲಾ ಆರಾಮಾಗಿ ನಿಭಾಯಿಸುವುದು ಹೇಗೆಂದು ಯೋಚನೆ ಮಾಡುತ್ತಿದ್ದೀರಾ..ಅತ್ಯಂತ ಸರಳವಾಗಿ ಯಾವುದೇ ಒತ್ತಡವಿಲ್ಲದೆ ಹೆಗಲ ಮೇಲಿನ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಬಹುದು. ದಿನನಿತ್ಯದ ಒ್ತತಡ ನಿಭಾಯಿಸಲು ಕೆಲವು ಆಹಾರಗಳಿವೆ. ಅವುಗಳ ಸೇವನೆ ಮನಸ್ಸಿಗೆ ಬೆಲೆ ಕಟ್ಟಲಾಗದ ಆಹ್ಲಾದ ನೀಡುತ್ತವೆ. ಹಾಗಾದರೆ ಯಾವುದದು.. ಏನನ್ನು ಸೇವಿಸುವ ಮೂಲಕ ಸುಲಭವಾಗಿ ‘ಒತ್ತಡ ನಿವಾರಣೆ ಮಾಡಿಕೊಳ್ಳಬಹುದು ಎಂಬ ವಿವರ ಇಲ್ಲಿದೆ.
ಮೊಟ್ಟೆ
ಮೊಟ್ಟೆ ಅತ್ಯಂತ ಸುಲಭವಾಗಿ ದೊರೆಯುವ ಆಹಾರಗಳಲ್ಲೊಂದು. ಭರ್ಜರಿ ಪೌಷ್ಠಿಕಾಂಶಗಳನ್ನು ಹೊಂದಿರುವ ಮೊಟ್ಟೆಗಳು ಅತ್ಯುತ್ತಮ ಆಹಾರಗಳ ಸಾಲಲ್ಲಿ ಬರುತ್ತವೆ. ಮೊಟ್ಟೆಯಲ್ಲಿ ವಿಟಾನಿನ್ ಡಿ ಹೇರಳವಾಗಿರುತ್ತದೆ. ದೇಹದಲ್ಲಿ ಒತ್ತಡವನ್ನು ಕಡಿಮೆ ಮಾಡಿ ನಮ್ಮನ್ನು ಉಲ್ಲಸಿತರಾಗಿರುವಂತೆ ಮಾಡುವಲ್ಲಿ ಮೊಟ್ಟೆಯ ಪಾತ್ರ ಅಗಾಧ. ಅಲ್ಲದೆ, ಮೊಟ್ಟೆಯ ಸೇವನೆ ನಮ್ಮ ಮೂಡ್ ಮತ್ತು ನಡವಳಿಕೆಯನ್ನು ನಿಯಂತ್ರಿಸುತ್ತದೆ.
ಡಾರ್ಕ್ ಚಾಕ್ಲೇಟ್
ಕಂಡರೆ ಸಾಕು ಓಡಿಬಂದು ತಿನ್ನುವಷ್ಟು ರುಚಿಯ ಡಾರ್ಕ್ ಚಾಕ್ಲೇಟುಗಳು ಒತ್ತಡ ನಿವಾರಣೆಗೂ ಸಹಕಾರಿ ಎಂಬುದು ಹೆಚ್ಚಿನವರಿಗೆ ತಿಳಿಯದ ವಿಚಾರ. ಖುಷಿಯ ಹಾರ್ಮೋನುಗಳನ್ನು ಸೃಷ್ಟಿಸುವಲ್ಲಿ ಡಾರ್ಕ್ ಚಾಕ್ಲೇಟುಗಳು ತುಂಬಾ ಸಹಕಾರಿಯಾಗಿವೆ. ಡಾರ್ಕ್ ಚಾಕ್ಲೇಟ್ನಲ್ಲಿರುವ ಪೊಟ್ಯಾಷಿಯಂನ ಅಂಶ ನಮ್ಮ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ಎಂಥದ್ದೇ ಒತ್ತಡವಿರಲಿ ಡಿಪ್ರೆಶನ್ಗೆ ಹೋಗದಂತೆ ನಮ್ಮನ್ನು ತಡೆಯುತ್ತವೆ ಈ ಡಾರ್ಕ್ ಚಾಕ್ಲೇಟುಗಳು. ಅಂದಹಾಗೆ ಡಾರ್ಕ್ ಚಾಕ್ಲೆಟುಗಳು ಬಾಯಿಗೂ ರುಚಿ ಎಂಬುದನ್ನು ಹೇಳಬೇಕಿಲ್ಲ ತಾನೇ.
ಅರಿಶಿನ
ಅರಿಶಿನದ ಕುರಿತು ಭಾರತೀಯರಾದ ನಮಗೆ ಪ್ರತ್ಯೇಕವಾಗಿ ಹೇಳಬೇಕಂತಲೇ ಇಲ್ಲ. ನಮ್ಮೆಲ್ಲರ ಮನೆಗಳಲ್ಲೂ ಅರಿಶಿನ ನಿತ್ಯ ಬಳಸುವ ದ್ರವ್ಯ. ನಮ್ಮಲ್ಲಿ ಅರಿಶಿನ ಅತ್ಯಂತ ಪ್ರಮುಖ ಪವಿತ್ರವಾದದ್ದು. ದೇವರ ಪೂಜೆಯಿರಲಿ, ಅಡಿಗೆಯಿರಲಿ ಅರಿಶಿನವಿರದೇ ಒಂದು ದಿನವಾದರೂ ಇರಲು ಸಾಧ್ಯವೇ? ಅಂದಹಾಗೆ ಅಡಿಗೆಯಲ್ಲಿ ಅರಿಶಿನದ ಬಳಕೆ ಮಾನಸಿಕ ಒತ್ತಡಕ್ಕೆ ರಾಮಬಾಣ. ನಮ್ಮ ನೆನಪಿನ ಶಕ್ತಿಯನ್ನು ಸಹ ಅರಿಶಿನ ಹೆಚ್ಚಿಸುತ್ತದೆ. ಮನಸ್ಸು ಉಗ್ರವಾಗಿದ್ದಾಗ ಅರಿಶಿನ ಬಳಕೆ ಮಾಡಿದರೆ ಮನಸ್ಸು ಶಾಂತವಾಗುತ್ತದೆ.
ಬಾಳೆಹಣ್ಣು
ದಿನನಿತ್ಯವೂ ಸಹಜವಾಗಿ ತಿನ್ನುವ ಬಾಳೆಹಣ್ಣಿನಿಂದ ಇಷ್ಟೆಲ್ಲಾ ಪ್ರಯೋಜನ ಇದೆಯಾ ಎಂದು ಗೊತ್ತಾದರೆ, ನೀವೇ ಒಂದು ಬಾಳೆತೋಟ ಮಾಡಬಹುದು. ಹೌದು, ಕೈಬೆರಳಿನಷ್ಟು ಗಾತ್ರದ ಒಂದು ಬಾಳೆಹಣ್ಣು ಖನಿಜಗಳ ಆಗರ. ಬಾಳೆಹಣ್ಣು ಎಷ್ಟು ರುಚಿಕರವೋ ಅಷ್ಟೇ ಆರೋಗ್ಯಕ್ಕೂ ಸಹಾಯಕಾರಿ. ಪ್ರತಿದಿನ ಊಟವಾದ ಮೇಲೆ ಒಂದು ಬಾಳೆಹಣ್ಣು ತಿನ್ನುವ ರೂಡಿ ಮಾಡಿಕೊಂಡರೆ ಮನಸ್ಸಿಗೂ ನಿರಾಳ ಆಗಬಲ್ಲದು. ಮಾನಸಿಕ ಒತ್ತಡ ಉಂಟುಮಾಡುವ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಬಾಳೆಹಣ್ಣು ಕೆಲಸ ಮಾಡುತ್ತದೆ. ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯೂ ಹೌದು. ಈ ಎಲ್ಲ ಕಾರಣಗಳು ಬಾಳೆಹಣ್ಣಿಗೆ ತುಂಬಾ ಮುಖ್ಯ ಸ್ಥಾನ ನೀಡಿವೆ.
ಹಾಲು
ಹಾಲು ಪರಿಪೂರ್ಣ ಆಹಾರ ಎಂದೇ ಕರೆಸಿಕೊಳ್ಳುತ್ತದೆ. ಹಾಲು ಕುಡಿಯುವ ರೂಢಿಯಲ್ಲಿ ನಮಗೆ ಬಾಲ್ಯದಿಂದಲೂ ಬೆಳೆಸಲು ಹಾಲಿನಲ್ಲಿರುವ ಪೌಷ್ಠಿಕ ಗುಣಗಳೇ ಕಾರಣ. ಪ್ರತಿದಿನ ಒಂದು ಲೋಟ ಹಾಲಿನ ಸೇವನೆ ನಮ್ಮ ಮಾನಸಿಕ ಸಂತುಲನವನ್ನು ಕಾಪಾಡುತ್ತದೆ.
ಹೀಗೆ ನಮ್ಮ ದಿನನಿತ್ಯದ ಆಹಾರ ಕ್ರಮಗಳು ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಬಲ್ಲವು. ಹೆಚ್ಚು ಖರ್ಚಿಲ್ಲದೇ, ಅತ್ಯಂತ ಸರಳ ಸುಲಭ ದಿನನಿತ್ಯದ ಆಹಾರಗಳು ಸಾಕು ನಮ್ಮ ಒತ್ತಡವನ್ನು ಕಡಿಮೆಗೊಳಿಸಿ ನೆಮ್ಮದಿಯಿಂದ ಬದುಕುವಂತೆ ಮಾಡಲು. ಮಾನಸಿಕ ಒತ್ತಡದಿಂದ ದೂರವುಳಿಯಲು ಸಾವಿರಾರು ₹ ಖರ್ಚು ಮಾಡುವದಕ್ಕಿಂತ ಇಂತಹ ಸಾಂಪ್ರದಾಯಿಕ ವಿಧಾನ ಬಳಸೋಣ ಅಲ್ಲವೇ?
ಇದನ್ನೂ ಓದಿ:ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸಿದರೆ ಆರೋಗ್ಯ ಸ್ಥಿತಿ ಸ್ಥಿರವಾಗಿ ಇರುತ್ತದೆ; ಅದು ಹೇಗೆ?
Skincare: ಆರೋಗ್ಯ ಜೋಪಾನವಾಗಿರಲು ಮಾಡುತ್ತಲೇ ಇರಿ ಬಿಸಿಲಲ್ಲಿ ಸ್ನಾನ!