ಮಹಾರಾಷ್ಟ್ರದಲ್ಲಿ ಕೊರೊನಾ ಕೇಕೆ, ಗಡಿ ಜಿಲ್ಲೆಗೆ ಕಂಟಕ.. ಬಾವನಸೌಂದತ್ತಿ ಗ್ರಾಮ ಐದು ಜನಕ್ಕೆ ಸೋಂಕು
ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಗಡಿಯಲ್ಲಿ ಹೈ ಅಲರ್ಟ್ ಅಂತಾ ಬರೀ ಆದೇಶ ಮಾಡಿದ ಸರ್ಕಾರ ಅತ್ತ ತಲೆ ಹಾಕಿಯೂ ನೋಡ್ತಿಲ್ಲ. ಸರ್ಕಾರ ಮತ್ತು ಬೆಳಗಾವಿ ಜಿಲ್ಲಾಡಳಿತದ ಬೇಜವಾಬ್ದಾರಿಯಿಂದಾಗಿ ಇದೀಗ ಆ ಒಂದು ಗ್ರಾಮಕ್ಕೆ ಗ್ರಾಮವೇ ಬೆಚ್ಚಿ ಬಿದ್ದಿದೆ.
ಬೆಳಗಾವಿ: ಮಹಾ ಕೊರೊನಾ ಕಾಟಕ್ಕೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮ ಬೆಚ್ಚಿ ಬಿದ್ದಿದೆ. ಕೊರೊನಾ ಹೋಯ್ತು ಅನ್ನುವಷ್ಟರಲ್ಲಿ ಇಲ್ಲಿನ ಐದು ಜನಕ್ಕೆ ಸೋಂಕು ತಗುಲಿದ್ದು, ಊರಿನ ಜನ ಆತಂಕದಲ್ಲಿದ್ದಾರೆ. ಇದೆಲ್ಲದರ ನಡುವೆ ಹತ್ತು ದಿನಗಳ ಅವಧಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಇದು ಗ್ರಾಮದಲ್ಲಿ ಮತ್ತಷ್ಟು ಭಯದ ವಾತಾವರಣ ನಿರ್ಮಾಣ ಮಾಡಿದೆ.
ಮಹಾರಾಷ್ಟ್ರದಿಂದ ಸಂಬಂಧಿಕರು ಈ ಗ್ರಾಮದಲ್ಲಿ ಮೃತಪಟ್ಟ ವೃದ್ಧರೊಬ್ಬರ ಮನೆಗೆ ಮಾತನಾಡಿಸಲು ಬಂದಿರುತ್ತಾರೆ. ಹೀಗೆ ಮಾತಾಡಿಸಿ ಹೋದ ಬಳಿಕ ಮನೆಯ ಐದು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನೂ ಈ ಮನೆಯಲ್ಲಿ ಒಟ್ಟು 48ಜನರಿದ್ದು ಹತ್ತಕ್ಕೂ ಅಧಿಕ ಮಕ್ಕಳಿದ್ದಾರೆ. ಈ ಎಲ್ಲರೂ ಐದು ಜನರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದು, ಈ ಎಲ್ಲರಿಗೂ ಇದೀಗ ಕೊರೊನಾ ಸೋಂಕು ತಗಲುವ ಭೀತಿ ಎದುರಾಗಿದೆ.
ಇನ್ನೂ ಗಡಿಯಲ್ಲಿ ಸರಿಯಾದ ರೀತಿಯಲ್ಲಿ ಚೆಕಿಂಗ್ ಮಾಡದ್ದಕ್ಕೆ ಮತ್ತು ಮಹಾರಾಷ್ಟ್ರದಿಂದ ಬರುವರ ಕೊವಿಡ್ ರಿಪೋರ್ಟ್ ನೋಡದ್ದಕ್ಕೆ ರಾಜ್ಯದ ಜನರಿಗೆ ಸೋಂಕು ತಗುಲುತ್ತಿದೆ. ಸದ್ಯ ಬಾವನಸೌಂದತ್ತಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ನಿನ್ನೆ ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳೆಲ್ಲರೂ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ಜತೆಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ ಸೋಂಕಿತರ ಅಕ್ಕಪಕ್ಕದ ಮನೆಯರು ಸೇರಿದಂತೆ ಇನ್ನೂರಕ್ಕೂ ಅಧಿಕ ಜನರ ಕೊರೊನಾ ಟೆಸ್ಟ್ ಮಾಡಲಾಗಿದೆ.
ಬೆಳಗಾವಿ ಗಡಿ ಜಿಲ್ಲೆ ಆಗಿರೋದ್ರಿಂದ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಸಾಕಷ್ಟು ಜನ ಬಂದು ಹೋಗಿ ಮಾಡುತ್ತಿದ್ದಾರೆ. ಇದರಿಂದ ಬೆಳಗಾವಿಯಲ್ಲೂ ಕೊರೊನಾ ಸೋಂಕು ಹೆಚ್ಚುತ್ತಿದೆ. ಈ ಸೋಂಕು ಜಿಲ್ಲೆಯ ಮತ್ತಷ್ಟು ಗ್ರಾಮಗಳಿಗೆ ಎಂಟ್ರಿ ಕೊಡುವ ಮುನ್ನ ಬೆಳಗಾವಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ.
ಇದನ್ನೂ ಓದಿ: ಭಾರತದಲ್ಲಿ 6ಕ್ಕೂ ಹೆಚ್ಚು ಕೊರೊನಾ ಲಸಿಕೆಗಳು ತಯಾರಾಗಲಿವೆ: ಆರೋಗ್ಯ ಸಚಿವ ಹರ್ಷ ವರ್ಧನ್ ಘೋಷಣೆ
Published On - 7:22 am, Sun, 14 March 21