ಮಳೆಯಿಂದಾಗಿ ಬೆಂಗಳೂರಿನಲ್ಲಿ ಕುಸಿದು ಬಿದ್ದ ಕಟ್ಟಡ: ಅದೃಷವಶಾತ್ ತಪ್ಪಿದ ಭಾರಿ ಅನಾಹುತ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 06, 2022 | 1:32 PM

ಸುಮಾರು 50 ವರ್ಷ ಹಳೆಯ ಕಟ್ಟಡವಾಗಿದ್ದು, 10 ವರ್ಷಗಳ ಹಿಂದೆ ಕಟ್ಟಡ ಮಾಲೀಕರಿಗೆ ಬಿಬಿಎಂಪಿ ಕಟ್ಟಡ ತೆರವುಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ.

ಮಳೆಯಿಂದಾಗಿ ಬೆಂಗಳೂರಿನಲ್ಲಿ ಕುಸಿದು ಬಿದ್ದ ಕಟ್ಟಡ: ಅದೃಷವಶಾತ್ ತಪ್ಪಿದ ಭಾರಿ ಅನಾಹುತ
Follow us on

ಬೆಂಗಳೂರು: ಮಳೆಯಿಂದಾಗಿ ನಗರದಲ್ಲಿ ಕಟ್ಟಡ ಕುಸಿದು (building collapsed) ಬಿದ್ದಿರುವಂತಹ ಘಟನೆ ಅವೆನ್ಯೂ ರಸ್ತೆಯ ಬೆಳ್ಳಿ ಬಸವ ದೇವಸ್ಥಾನ ಬಳಿ ನಡೆದಿದೆ. ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಕಟ್ಟಡ ಕುಸಿದು ಬಿದಿದ್ದು, ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಭಂಡಾರಿ ಎಂಬುವರಿಗೆ ಕಟ್ಟಡ ಸೇರಿದ್ದು, ಕಟ್ಟಡದಲ್ಲಿ ಪ್ಲಾಸ್ಟಿಕ್ ಮತ್ತು ಗಿಫ್ಟ್ ಶಾಪ್​​ಗಳಿದ್ದವು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ‌. ಅಗ್ನಿಶಾಮಕ ವಾಹನ ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ಮಾಡಿದರು. ಸಿಟಿ ಮಾರ್ಕೆಟ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ; ಕಟ್ಟಡದಿಂದ ಎಸೆದು ಮಗುವಿನ ಹತ್ಯೆ ಪ್ರಕರಣ: ಮಗುವಿನ ತಂದೆ ಕಣ್ಣೀರಿಡುತ್ತಾ ಹೇಳಿದ್ದೇನು?

ಕಟ್ಟಡಕ್ಕೆ ಒಟ್ಟು ನಾಲ್ಕು ಜನ ಮಾಲೀಕರು

ಕಟ್ಟಡಕ್ಕೆ ಒಟ್ಟು ನಾಲ್ಕು ಜನ ಮಾಲೀಕರಿದ್ದು, ಮಾಲೀಕರೇ ಅಂಗಡಿಗಳನ್ನು ಇಟ್ಟುಕೊಂಡಿದ್ರು. ಕೆಳ ಮಹಡಿಯಲ್ಲಿ ಮೂರು ಅಂಗಡಿ, ಮೂರು ಜನ ಮಾಲೀಕರು ಅಶೋಕ್ ಜೈನ್, ಕೈಲಾಶ್ ಜೈನ್, ಪ್ರತೀಕ್ ಸೇರಿದ ಅಂಗಡಿ. ಎರಡು ಹಾಗೂ ಮೂರನೇ ಮಹಡಿ ವಿಮಲ್ ಚಂದ್​​ಗೆ ಎನ್ನುವವರಿಗೆ ಸೇರಿದೆ. ಇತ್ತೀಚೆಗೆ ಮೇಲಿರುವ ಎರಡು ಅಂಗಡಿ ಖಾಲಿ ಮಾಡಲಾಗಿತ್ತು. ಕೆಳ ಮಹಡಿಯಲ್ಲಿದ್ದ ವಸ್ತುಗಳಿಗೆ ಘಟನೆಯಿಂದ ಹಾನಿಯಾಗಿದೆ. ಅದೃಷವಶಾತ್ ಭಾರಿ ಅನಾಹುತ ತಪ್ಪಿದೆ.

ಸುಮಾರು 50 ವರ್ಷ ಹಳೆಯ ಕಟ್ಟಡ

ಸುಮಾರು 50 ವರ್ಷ ಹಳೆಯ ಕಟ್ಟಡವಾಗಿದ್ದು, 10 ವರ್ಷಗಳ ಹಿಂದೆ ಕಟ್ಟಡ ಮಾಲೀಕರಿಗೆ ಬಿಬಿಎಂಪಿ ಕಟ್ಟಡ ತೆರವುಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ. ಕಟ್ಟಡದ 4 ಮಂದಿ ಮಾಲೀಕರ ಮನಸ್ತಾಪದಿಂದ ಹಾಗೆ ಉಳಿದಿತ್ತು. ಕಟ್ಟದಲ್ಲಿ 3 ಅಂಗಡಿಗಲ್ಲಿ 20 ಜನ ಕೆಲಸ ಮಾಡುತ್ತಿದ್ದರು. ಎಲ್ಲಾ ಕೆಲಸ ಮುಗಿಸಿ ಮನೆಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಹಬ್ಬದ ಸಮಯ ಜನರ ಓಡಾಟ ಹೆಚ್ಚಾಗಿತ್ತು.

ಮಳೆಯಿಂದಾಗಿ ಧರೆಗುರುಳಿದ ಮರಗಳು

ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ಸಮಸ್ಯೆ ಎದುರಾಗಿದ್ದರೂ ಮಳೆ ಎದುರಿಸಲು ಬಿಬಿಎಂಪಿ ಸಮರ್ಪಕ ಸಿದ್ಧತೆ ಮಾಡಿಕೊಳ್ಳಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಜನರು ಸಂಕಷ್ಟ ಅನುಭವಿಸುವಂತಾಗಿದೆ. ರಸ್ತೆಗಳಿಂದ ಮಳೆ ನೀರನ್ನು ಚರಂಡಿಗೆ ಎಳೆದುಕೊಳ್ಳಬೇಕಿದ್ದ ರಂಧ್ರಗಳ ಮೂಲಕವೇ ಮಳೆ ನೀರು ರಸ್ತೆಗಳ ಮೇಲೆ ಹರಿಯುತ್ತಿದ್ದು, ಜನಪ್ರತಿನಿಧಿಗಳೇ ಇಲ್ಲದ ಬಿಬಿಎಂಪಿಗೆ ಜನರು ಹಿಡಿಶಾಪ ಹಾಕುವುದು ಮುಂದುವರಿದಿದೆ. ಹಲವೆಡೆ ಮರಗಳು ಧರೆಗೆ ಉರುಳಿದ್ದು, ವಿದ್ಯುತ್ ತಂತಿಗಳು ತುಂಡಾಗಿವೆ. ಮಳೆಯ ಜೊತೆಗೆ ವಿದ್ಯುತ್ ಸಂಪರ್ಕವೂ ಕಡಿತಗೊಂಡ ಕಾರಣ ಜನರ ಸಂಕಷ್ಟ ಹೆಚ್ಚಾಗಿದೆ.

ನಗರದ ಸಾಯಿ ಲೇಔಟ್​ಗೆ ಭೇಟಿ ನೀಡಿದ ಬೈರತಿ ಬಸವರಾಜ್, ನಿನ್ನೆ ರಾತ್ರಿಯಿಂದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ. ಸಾಯಿ ಲೇಔಟ್​ನಲ್ಲಿ ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತೇವೆ. ರೈಲ್ವೆ ವೆಂಟ್ ಹೆಚ್ಚಿಸುತ್ತೇವೆ. ಈ ಕಾಮಗಾರಿಗೆ ಮುಖ್ಯಮಂತ್ರಿ ₹ 17.5 ಕೋಟಿ ಅನುದಾನ ನೀಡಿದ್ದಾರೆ. ವರ್ಕ್ ಆರ್ಡರ್ ಪಡೆದುಕೊಂಡು ಸ್ಥಳಕ್ಕೆ ಬಂದಿದ್ದೇನೆ. ಸೆಪ್ಟೆಂಬರ್​ನಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗುವುದು. ಮುಂದಿನ ಮಳೆಗಾಲದ ಒಳಗೆ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.

ರಾಜ್ಯದ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.