ಕಟ್ಟಡದಿಂದ ಎಸೆದು ಮಗುವಿನ ಹತ್ಯೆ ಪ್ರಕರಣ: ಮಗುವಿನ ತಂದೆ ಕಣ್ಣೀರಿಡುತ್ತಾ ಹೇಳಿದ್ದೇನು?
ಬುದ್ಧಿಮಾಂದ್ಯ ಮಗು ಎಂದು ಹೇಳಿ ಸ್ವಂತ ತಾಯಿಯೇ ಮಗುವನ್ನು ನಾಲ್ಕನೇ ಮಹಡಿಯಿಂದ ಎಸೆದು ಹತ್ಯೆ ಮಾಡಿದ ಪ್ರಕರಣ ಸಂಬಂಧ ಮೃತ ಮಗುವಿನ ತಂದೆ ಕಿರಣ್ ಪೊಲೀಸರ ಮುಂದೆ ಕಣ್ಣೀರಿಡುತ್ತಾ ಹೇಳಿಕೆಯನ್ನು ನೀಡಿದ್ದಾರೆ. ಕಿರಣ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು: ಹೆತ್ತ ತಾಯಿಯೇ ತನ್ನ ಮಗುವನ್ನು ನಾಲ್ಕನೇ ಮಹಡಿಯಿಂದ ಎಸೆದು ಹತ್ಯೆ ಮಾಡಿದ ಪ್ರಕರಣ ಸಂಬಂಧ ಪೊಲೀಸರು ಮಗುವಿನ ತಂದೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಹೇಳಿಕೆ ನೀಡುವ ವೇಳೆ ಪೊಲೀಸರ ಮುಂದೆ ಕಣ್ಣೀರಿಟ್ಟ ಮೃತ ಮಗುವಿನ ತಂದೆ ಕಿರಣ್, ಅವಳಿಗೆ ಕಷ್ಟ ಅಂದಿದ್ದರೆ ಮಗುವನ್ನು ನಾನೇ ನೋಡಿಕೊಳ್ಳುತ್ತಿದ್ದೆ ಎಂದಿದ್ದಾರೆ. ಅಲ್ಲದೆ ಕಿರಣ್ ನೀಡಿದ ದೂರಿನದಂತೆ ಪತ್ನಿ ಸುಷ್ಮಾ ವಿರುದ್ಧ ಎಸ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂಪಂಗಿರಾಮನಗರದಲ್ಲಿ ನೆಲೆಸಿದ್ದ ಸುಷ್ಮಾ ಮತ್ತು ಕಿರಣ್ ದಂಪತಿಗೆ ಒಂದು ಬುದ್ಧಿಮಾಂದ್ಯ ಮುದ್ದಾಗ ಮಗುವಿತ್ತು. ಈ ಮಗುವನ್ನು ಕೊಲ್ಲಲು ನಿರ್ಧರಿಸಿದ ಸುಷ್ಮಾ, ಮಗುವನ್ನು ಆಟ ಆಡಿಸಿ ಬರುತ್ತೇನೆ ಎಂದು ಹೇಳಿ ಎರಡನೇ ಮಹಡಿಯಿಂದ ನಾಲ್ಕನೇ ಮಹಡಿಗೆ ತೆರಳಿ ಮೇಲಿಂದ ಕೆಳಗೆ ಮಗುವನ್ನು ಎಸೆದು ವಿಕೃತಿ ಮೆರೆದಿದ್ದಾಳೆ.
ಮಗುವನ್ನು ಹತ್ಯೆ ಮಾಡಲು ಸುಷ್ಮಾ ಈ ಹಿಂದೆಯೂ ಪ್ರಯತ್ನ ನಡೆಸಿದ್ದಳು ಎಂಬುದು ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಹಿಂದೆ ತನ್ನ ಮಗುವನ್ನು ರೈಲೊಂದಕ್ಕೆ ಹತ್ತಿಸಿ ಸುಷ್ಮಾ ವಾಪಸ್ಸಾಗಿದ್ದಳು. ಆದರೆ ತಾಯಿಯೇ ಮಗುವನ್ನು ಹೇಗೆ ಬಿಡಲು ಸಾಧ್ಯ? ಎಲ್ಲೀ ದಾರಿ ತಪ್ಪಿರಬಹುದು ಎಂದು ಕುಟುಂಬಸ್ಥರು ಅಂದುಕೊಂಡಿದ್ದರು. ರೈಲಿನಲ್ಲಿ ಬಿಟ್ಟುಬಂದ ಮಗು ಎನ್ಜಿಓ ಒಂದರ ಸಹಾಯದಿಂದ ಮತ್ತೆ ತಂದೆಯ ಮಡಿಲು ಸೇರಿತ್ತು. ನಂತರವೂ ಆ ಮಗುವನ್ನು ಕೊಲ್ಲಲೇ ಬೇಕೆಂದು ನಿರ್ಧರಿಸಿ ನಾಲ್ಕನೇ ಮಹಡಿಯಿಂದ ಮಗುವನ್ನು ಎಸೆದು ಕೊಂದೇ ಬಿಟ್ಟಳು ಪಾಪಿ ತಾಯಿ.
ಪ್ರಕರಣದ ಹಿನ್ನೆಲೆ ಏನು?
ಸಂಪಂಗಿ ರಾಮ ನಗರದ ಅದ್ವಿತ್ ಅಪಾರ್ಟ್ ಮೆಂಟ್ನಲ್ಲಿ ನೆಲೆಸಿದ್ದ ಸುಷ್ಮಾ ಮತ್ತು ಕಿರಣ್ ದಂಪತಿಗೆ 4 ವರ್ಷದ ಮಗು ಬುದ್ಧಿಮಾಂದ್ಯ ಮಗು ಇದೆ. ತನ್ನ ಮಗು ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ಇದನ್ನು ಕೊಲ್ಲಲು ಸುಷ್ಮಾ ನಿರ್ಧರಿಸಿ ನಾಲ್ಕನೇ ಮಹಡಿಯಿಂದ ಎಸೆದು ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಳು. ಇದನ್ನು ನೋಡಿದ ನಾಲ್ಕನೇ ಮಹಡಿಯಲ್ಲಿದ್ದ ನಿವಾಸಿಗಳು ಕೂಡಲೇ ಆಕೆಯನ್ನು ತಡೆದಿದ್ದಾರೆ. ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:05 am, Sat, 6 August 22