ವಿಜಯಪುರ: ಕೇಂದ್ರ ಲೋಕಸೇವಾ ಆಯೋಗದ 2019ರ ಸಾಲಿನ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಯುವತಿ ದೇಶಕ್ಕೆ 626ನೇ ಱಂಕ್ ಬರುವ ಮೂಲಕ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಹೌದು ವಿಜಯಪುರದ ಸವಿತಾ ಗೋಟ್ಯಾಳ್ ಈ ಸಾಧನೆ ಮಾಡಿದ ಯುವತಿ. ಸವಿತಾ ಗೋಟ್ಯಾಳರ ಈ ಸಾಧನೆಗೆ ಇಡೀ ಜಿಲ್ಲೆಯ ಜನತೆ ಅಭಿನಂದನೆ ಸಲ್ಲಿಸಿದ್ದಾರೆ. ಸವಿತಾ ಗೋಟ್ಯಾಳ ಅಕ್ಕ ಅಶ್ವಿನಿ ಗೋಟ್ಯಾಳ ಸಹ ಕಳೆದ 2016-17 ರಲ್ಲಿ ಯುಪಿಎಸ್‌ಸಿಯಲ್ಲಿ ಱಂಕ್ ಪಡೆದು ಐಪಿಎಸ್ ಆಧಿಕಾರಿಯಾಗಿ ಪಂಜಾಬಿನ ಲುಧಿಯಾನಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳ ಈ ಸಾಧನೆಗೆ ಗೋಟ್ಯಾಳ ಕುಟುಂಬದಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ಸವಿತಾ ಹಾಗೂ ಅಶ್ವಿನಿ ತಂದೆ ಸಿದ್ದಪ್ಪ ಗೋಟ್ಯಾಳ ಬಿಎಸ್ಎನ್ಎಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೊದಲ ಮಗಳು ಅಶ್ವಿನಿ ಗೋಟ್ಯಾಳ ಐಪಿಎಸ್ ಅಧಿಕಾರಿಯಾದ ಬಳಿಕ ಸ್ವಯಂ ನಿವೃತ್ತಿ ಪಡೆದಿದ್ದಾರೆ.
ಒಂದೇ ಮನೆಯಲ್ಲಿ ಇಬ್ಬರು ಯುಪಿಎಸ್‌ಸಿ ಱಂಕ್ ಬಂದಿದ್ದು ಸಾಧನೆ ಮಾಡಿದ ಸವಿತಾಗೆ ಕುಟುಂಬ ಸದಸ್ಯರು ಸಿಹಿ ತಿನ್ನಿಸಿ ಸಂಭ್ರಮಿಸಿದರು. ಉತ್ತಮವಾಗಿ ಓದು ಹಾಗೂ ಡಿಜಿಟಲ್ ಸಿಲೆಬಸ್ ಜೊತೆಗೆ ಅಕ್ಕನ ಗೈಡನ್ಸ್ ಸಹಾಯವಾಯಿತು ಎಂದು ಸವಿತಾ ಸಂತಸ ಹಂಚಿಕೊಂಡಿದ್ದಾರೆ.
ಇನ್ನು ತಂಗಿಯ ಸಾಧನೆಗೆ ಅಕ್ಕ ಅಶ್ವಿನಿ ಸಹ ಸಂತಸ ವ್ಯಕ್ತಪಡಿಸಿದ್ದಾರೆ. ಇದಕ್ಕಿಂತ ಮುಖ್ಯವಾಗಿ ನಮ್ಮ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಯುಪಿಎಸ್‌ಸಿಯಲ್ಲಿ ಱಂಕ್ ಪಡೆದಿದ್ದೇವೆ. ನಮ್ಮನ್ನು ನೋಡಿ ಇತರೆ ಜನರು ತಮ್ಮ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ತೀರ್ಮಾಣ ಮಾಡಿದರೆ ಸಾರ್ಥಕವೆನಿಸುತ್ತದೆ ಎನ್ನುತ್ತಾರೆ ಅಶ್ವಿನಿ.-ಅಶೋಕ ಯಡಳ್ಳಿ