ಸಾರಿಗೆ ಸಚಿವ ಲಕ್ಷ್ಮಣ್​ ಸವದಿಯವರಿಗೆ ಪತ್ರ ಬರೆದು ಬಿಎಂಟಿಸಿ ವಿರುದ್ಧ ದೂರು ಹೇಳಿದ ಹಿರಿಯ ನಾಗರಿಕ; ಕ್ರಮ ಕೈಗೊಳ್ಳುವಂತೆ ಮನವಿ

|

Updated on: Feb 23, 2021 | 3:58 PM

ಹಿರಿಯ ನಾಗರಿಕರಿಗೆ ಸಂಸ್ಥೆಯ ಎಲ್ಲ ಸಾರಿಗೆ ವಾಹನಗಳಲ್ಲಿ, ಎಲ್ಲ ವಿಧದ ಪ್ರಯಾಣಕ್ಕೆ ಶೇ.25ರಷ್ಟು ರಿಯಾಯಿತಿ ನೀಡಬೇಕು ಎಂದಿದೆಯೇ ಹೊರತು, ಹವಾನಿಯಂತ್ರಿತ (ವಜ್ರ) ಬಸ್ಸುಗಳ ಮಾಸಿಕ ಪಾಸ್​ಗೆ ಈ ನಿಯಮ ಅನ್ವಯ ಆಗುವುದಿಲ್ಲ ಎಂದೇನೂ ಇಲ್ಲ ಎಂದು ಶ್ರೀಪತಿ ರಾವ್​ ತಿಳಿಸಿದ್ದಾರೆ.

ಸಾರಿಗೆ ಸಚಿವ ಲಕ್ಷ್ಮಣ್​ ಸವದಿಯವರಿಗೆ ಪತ್ರ ಬರೆದು ಬಿಎಂಟಿಸಿ ವಿರುದ್ಧ ದೂರು ಹೇಳಿದ ಹಿರಿಯ ನಾಗರಿಕ; ಕ್ರಮ ಕೈಗೊಳ್ಳುವಂತೆ ಮನವಿ
ಬಿಎಂಟಿಸಿ ಹವಾನಿಯಂತ್ರಿತ ಬಸ್​ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಹಿರಿಯ ನಾಗರಿಕರಿಗೆ ಬಿಎಂಟಿಸಿಯ ಹವಾ ನಿಯಂತ್ರಿತ (ವಜ್ರ) ಬಸ್​ಗಳಲ್ಲಿ ಪ್ರಯಾಣಿಸಲು ಮಾಸಿಕ ಪಾಸುಗಳಲ್ಲಿ ರಿಯಾಯಿತಿ ನೀಡುತ್ತಿಲ್ಲ. ಹಾಗಾಗಿ ಈ ಬಗ್ಗೆ ಪರಿಶೀಲನೆ ನಡೆಸಿ, ಶೇ.25ರಷ್ಟು ರಿಯಾಯಿತಿ ಕೊಡಲು ಆದೇಶ ನೀಡಿ ಎಂದು ವೆಂಕಟಾದ್ರಿ ಲೇಔಟ್​ನ ಹಿರಿಯ ನಾಗರಿಕ ಬಿ.ಶ್ರೀಪತಿರಾವ್ ಎಂಬುವರು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ್​ ಸವದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ನಾನು 2018ರಲ್ಲೇ ಬಿಎಂಟಿಸಿ ಅಧಿಕಾರಿಗಳು, ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರಿಗೂ ಲಿಖಿತ ಮನವಿ ಮಾಡಿದ್ದೆ ಎಂದು ತಿಳಿಸಿದ್ದಾರೆ.

ಕೆಎಸ್​ಆರ್​ಟಿಸಿ ಸೇರಿ ಎಲ್ಲ ಸಹಕಾರಿ ನಿಗಮಗಳ ಬಸ್​ಗಳಲ್ಲಿ ಹಿರಿಯ ನಾಗರಿಕರಿಗೆ ಮಾಸಿಕ ಪಾಸ್​ ದರದಲ್ಲಿ ಶೇ.25ರಷ್ಟು ರಿಯಾಯಿತಿ ಕೊಡಬೇಕು ಎಂದು ಸರ್ಕಾರ ನಿರ್ಧಾರ ಮಾಡಿ ಹಲವು ವರ್ಷಗಳೇ ಕಳೆದಿವೆ. ಅದೇ ರೀತಿ ಬಿಎಂಟಿಸಿ ಬಸ್​ಗಳಲ್ಲೂ ಸಹ ರಿಯಾಯಿತಿ ನೀಡಲಾಗುತ್ತಿದೆ. ಆದರೆ BMTCಯ ಎಲ್ಲ ರೀತಿಯ ಹವಾನಿಯಂತ್ರಿತ (ಎಸಿ) ಬಸ್​ಗಳಲ್ಲಿ (ವಿಮಾನ ನಿಲ್ದಾಣಕ್ಕೆ ಹೋಗುವ ವಾಯುವಜ್ರ ಬಸ್​ ಗಳನ್ನು ಹೊರತುಪಡಿಸಿ) ಇದುವರೆಗೂ ಹಿರಿಯ ನಾಗರಿಕರಿಗೆ ಮಾಸಿಕ ಪಾಸ್​ಗಳಲ್ಲಿ ರಿಯಾಯಿತಿ ನೀಡುತ್ತಿಲ್ಲ. ಇದು ಸರ್ಕಾರದ ನಿಯಮದ ಉಲ್ಲಂಘನೆಯಾಗಿದ್ದು, 2018ರಲ್ಲಿಯೇ ಬಿಎಂಟಿಸಿ ಅಧ್ಯಕ್ಷರು, ಎಂಡಿಗೆ ಪತ್ರ ಬರೆದಿದ್ದೇನೆ. ಆದರೆ ಅವರು, ಎಸಿ ಬಸ್​ಗಳಲ್ಲಿ ಮಾಸಿಕ ಪಾಸ್​ ದರ ರಿಯಾಯಿತಿ ಕಲ್ಪಿಸುವಂತೆ ಸರ್ಕಾರ ಆದೇಶ ಹೊರಡಿಸಿಲ್ಲವೆಂದು ಉತ್ತರಿಸಿದ್ದಾರೆ ಎಂದು ಬಿ.ಶ್ರೀಪತಿರಾವ್ ಪತ್ರದಲ್ಲಿ ತಿಳಿಸಿದ್ದಾರೆ.

ಬಿಎಂಟಿಸಿಯ ಈ ನಿಲುವು ಅತಾರ್ಕಿಕ. ಹಿರಿಯ ನಾಗರಿಕರಿಗೆ ಸಂಸ್ಥೆಯ ಎಲ್ಲ ಸಾರಿಗೆ ವಾಹನಗಳಲ್ಲಿ, ಎಲ್ಲ ವಿಧದ ಪ್ರಯಾಣಕ್ಕೆ ಶೇ.25ರಷ್ಟು ರಿಯಾಯಿತಿ ನೀಡಬೇಕು ಎಂದಿದೆಯೇ ಹೊರತು, ಹವಾನಿಯಂತ್ರಿತ (ವಜ್ರ) ಬಸ್ಸುಗಳ ಮಾಸಿಕ ಪಾಸ್​ಗೆ ಈ ನಿಯಮ ಅನ್ವಯ ಆಗುವುದಿಲ್ಲ ಎಂದೇನೂ ಇಲ್ಲ. ಒಂದುವೇಳೆ ಬಿಎಂಟಿಸಿಯ ಈ ವಾದವನ್ನು ಒಪ್ಪುವುದಾದರೆ, ಸರ್ಕಾರ ಹಿರಿಯ ನಾಗರಿಕರ ಮಾಸಿಕ ಪಾಸಿಗೆ, ದೈನಂದಿನ ಪಾಸು, ದಿನವಹಿ ಒಮ್ಮುಖ ಪ್ರಯಾಣಕ್ಕೆ ಖರೀದಿಸುವ/ ಪಡೆಯುವ ಟಿಕೆಟಿಗೆ ಸಂಬಂಧಿಸಿ ಪ್ರತ್ಯೇಕ ಆದೇಶವನ್ನೇ ಹೊರಡಿಸಬೇಕಿತ್ತು. ಆದರೆ ಅಂಥ ಆದೇಶ ಯಾವುದೂ ಇಲ್ಲ ಎಂದೂ ಹೇಳಿದ್ದಾರೆ.

ನಷ್ಟವೇನೂ ಇಲ್ಲ
ಹವಾನಿಯಂತ್ರಿತ ಬಸ್​ಗಳಲ್ಲಿ ಹಿರಿಯ ನಾಗರಿಕರಿಗೆ ಮಾಸಿಕ ಪಾಸ್​ಗಳಲ್ಲಿ ರಿಯಾಯಿತಿ ನೀಡುವುದರಿಂದ ಆಗುವ ನಷ್ಟ ತೀರ ಕಡಿಮೆ. ಪಾಸ್​ ಇದೆ ಎನ್ನುವ ಕಾರಣಕ್ಕೆ ಹಿರಿಯ ನಾಗರಿಕರು ಅನಗತ್ಯವಾಗಿ ಓಡಾಡುವುದಿಲ್ಲ. ಅಗತ್ಯ ಕೆಲಸವಿದ್ದಾಗ ಮಾತ್ರ ಅವರು ಹೊರಗೆ ಹೋಗುತ್ತಾರೆ. ಇನ್ನು ರಿಯಾಯಿತಿ ನೀಡಿದರಷ್ಟೇ ಒಂದಷ್ಟು ಪಾಸ್​ಗಳು ಮಾರಾಟ ಆಗಬಹುದು. ಇದರಿಂದ ಬಿಎಂಟಿಸಿಗೂ ಆದಾಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಹಾಗೇ, ಹಿರಿಯ ನಾಗರಿಕರ ಬಗ್ಗೆ ನಿರ್ಲಕ್ಷ್ಯ ಸರಿಯಲ್ಲ. ನೀವು ವೈಯಕ್ತಿವಾಗಿ ಗಮನಹರಿಸಿ ಹಿರಿಯ ನಾಗರಿಕರಿಗೆ ಶೇ.25ರಷ್ಟು ರಿಯಾಯಿತಿ ನೀಡಬೇಕು ಎಂದು ಲಕ್ಷ್ಮಣ್​ ಸವದಿಯವರ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಹ್ಯಾಲಿಪ್ಯಾಡ್ ನಿರ್ಮಾಣ ಹೆಸರಿನಲ್ಲಿ ಚಿಕ್ಕಮಗಳೂರು ಅಧಿಕಾರಿಗಳಿಂದ ಮೋಸ, ಸುಳ್ಳು ದಾಖಲೆ ತೋರಿಸಿ ಸರ್ಕಾರಕ್ಕೆ ವಂಚನೆ

Published On - 3:03 pm, Tue, 23 February 21