ಹ್ಯಾಲಿಪ್ಯಾಡ್ ನಿರ್ಮಾಣ ಹೆಸರಿನಲ್ಲಿ ಚಿಕ್ಕಮಗಳೂರು ಅಧಿಕಾರಿಗಳಿಂದ ಮೋಸ, ಸುಳ್ಳು ದಾಖಲೆ ತೋರಿಸಿ ಸರ್ಕಾರಕ್ಕೆ ವಂಚನೆ
ರಸ್ತೆ ಮಾಡಿದ್ದೀವಿ, ಹೆಲಿಪ್ಯಾಡ್ ಮಾಡಿದ್ದೀವಿ, ಎಂದು 20ಲಕ್ಷಕ್ಕೂ ಅಧಿಕ ಹಣವನ್ನ ಎಲ್ಲರೂ ಸೇರಿಕೊಂಡು ಗುಳುಂ ಮಾಡಿರುವುದು ದಾಖಲೆ ಸಹಿತ ಬಹಿರಂಗವಾಗಿದೆ. ಹೀಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಣ ಹೊಡೆಯಲು ಜನಪ್ರತಿನಿಧಿಗಳು ಕೂಡ ಸಾಥ್ ಕೊಟ್ಟಿದ್ದಾರೆ ಎನ್ನುವುದು ಸದ್ಯ ಸಾರ್ವಜನಿಕರ ಆರೋಪ.
ಚಿಕ್ಕಮಗಳೂರು: ಕಳಪೆ ಕಾಮಗಾರಿ ಮಾಡಿ ಹಣವನ್ನು ಲೂಟಿ ಮಾಡಿದವರನ್ನ ನಾವು ನೋಡಿದ್ದೇವೆ. ಆದರೆ ಯಾವುದೇ ಕೆಲಸ ಮಾಡದೆ ಹೆಲಿಪ್ಯಾಡ್ ನಿರ್ಮಾಣ ಮಾಡಿದ್ದೀವಿ, ರೋಡ್ ಮಾಡಿದ್ದೀವಿ ಎಂದು ಸರ್ಕಾರವನ್ನೇ ಯಮಾರಿಸಿ ಹಣವನ್ನು ಲೂಟಿ ಮಾಡಿದ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ನಡೆದಿದೆ. ಹೀಗೆ ಹೆಲಿಪ್ಯಾಡ್ನಿಂದ ಇಳಿದು ವಿಐಪಿಗಳು ಓಡಾಡುವ ರೋಡ್, ಶೌಚಾಲಯ ಹಾಗೂ ಜನಸಾಮಾನ್ಯರು ಹೆಲಿಪ್ಯಾಡ್ಗೆ ಬಂದ ಗಣ್ಯರನ್ನ ಮೀಟ್ ಮಾಡದಂತೆ ತಡೆಯುವ ಬ್ಯಾರಿಕೇಡ್ ಎಲ್ಲವನ್ನೂ ನಿರ್ಮಾಣ ಮಾಡಿದ್ದೇವೆ ಎಂದು ಖಾಲಿ ಜಾಗವನ್ನ ತೋರಿಸಿ ಬಿಲ್ ಮಾಡಿಕೊಂಡಿರುವುದು ಕಾಫಿನಾಡಿನ ಅಧಿಕಾರಿಗಳು ಹಾಗೂ ಗುತ್ತಿಗೆದಾರರು.
ಸರ್ಕಾರವನ್ನ ಯಾಮಾರಿಸಿ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಹಣವನ್ನ ಜೇಬಿಗಿಳಿಸಿಕೊಂಡಿರುವ ಈ ಅಧಿಕಾರಿಗಳು ಚಿಕ್ಕಮಗಳೂರು ನಗರದ ಐಡಿಎಸ್ಜಿ ಕಾಲೇಜಿನ ಹಿಂಭಾಗದಲ್ಲಿ ಹೆಲಿಪ್ಯಾಡ್, ರೋಡ್, ಶೌಚಾಲಯ, ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಇನ್ನು ಯಾರಾದರೂ ಈ ಬಗ್ಗೆ ದಾಖಲೆ ನೋಡಿಕೊಂಡು ಇಲ್ಲಿ ಬಂದರೆ ಬಿಳಿ ಬಣ್ಣದಲ್ಲಿ ರೌಂಡ್ ಮಾರ್ಕ್ ಹಾಗೂ ಹೆಚ್ ಮಾರ್ಕ್ ಹಾಕಿರುವುದನ್ನು ಬಿಟ್ಟರೆ ಬೇರೇನೂ ಸಿಗುವುದಿಲ್ಲ
ದಾಖಲೆಗಳಲ್ಲಿ ಹೈಟೆಕ್ ಹೆಲಿಪ್ಯಾಡ್ ಮಾಡಿದ್ದೀವಿ ಎಂದು ನಮೂದಿಸಿದಾಗ ಒಂದು ಕ್ಷಣ ಅವಕ್ಕಾದ ಸಾರ್ವಜನಿಕರೊಬ್ಬರು ಅರ್ಜಿ ಹಾಕಿ ಮಾಹಿತಿ ಹಕ್ಕಿನಲ್ಲಿ ಕೇಳಿದ್ದಾರೆ. ಆಗ ತಾವು ಕೇಳಿದ ವಿಚಾರ ಸತ್ಯ ಎನ್ನುವುದು ತಿಳಿದಿದೆ. ಅದಲ್ಲದೇ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಲ್ಲೂ ನಿಮ್ಮ ಕಾಲೇಜು ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಾಣವಾಗಿದ್ಯಾ ಎಂದು ಮಾಹಿತಿ ಕೇಳಿದ ಸಾರ್ವಜನಿಕರಿಗೆ ಅವರು ಕೂಡ ಇಲ್ಲಿ ಯಾವುದೇ ಹೆಲಿಪ್ಯಾಡ್ ಆಗಲಿ, ರಸ್ತೆಯಾಗಲಿ, ಶೌಚಾಲಯವಾಗಲಿ ನಿರ್ಮಾಣವಾಗಿಲ್ಲ ಎನ್ನುವುದನ್ನು ಲಿಖಿತ ರೂಪದಲ್ಲಿ ಅಂದರೆ ಪತ್ರದ ಮುಖೇನ ಉತ್ತರಿಸಿದ್ದಾರೆ.
ಸದ್ಯ ರಸ್ತೆ ಮಾಡಿದ್ದೀವಿ, ಹೆಲಿಪ್ಯಾಡ್ ಮಾಡಿದ್ದೀವಿ ಎಂದು 20 ಲಕ್ಷಕ್ಕೂ ಅಧಿಕ ಹಣವನ್ನ ಎಲ್ಲರೂ ಸೇರಿಕೊಂಡು ಗುಳುಂ ಮಾಡಿರುವುದು ದಾಖಲೆ ಸಹಿತ ಬಹಿರಂಗವಾಗಿದೆ. ಹೀಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಣ ಹೊಡೆಯಲು ಜನಪ್ರತಿನಿಧಿಗಳು ಕೂಡ ಸಾಥ್ ಕೊಟ್ಟಿದ್ದಾರೆ ಎನ್ನುವುದು ಸದ್ಯ ಸಾರ್ವಜನಿಕರ ಆರೋಪ.
ಒಟ್ಟಿನಲ್ಲಿ ಏನೂ ಮಾಡದೇ ಎಲ್ಲಾ ಮಾಡಿದ್ದೀವಿ ಎಂದು ಜನರ ತೆರಿಗೆ ಹಣವನ್ನ ತಿಂದು ತೇಗಿರುವ ಭ್ರಷ್ಟರಿಗೆ ಏನು ಹೇಳಬೇಕು ತಿಳಿಯುವುದಿಲ್ಲ. ಇನ್ನಾದರೂ ಸಂಬಂಧಪಟ್ಟವರು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು, ದಾಖಲೆಯಲ್ಲಿ ಮಾತ್ರ ಇರುವ ಕೆಲಸವನ್ನು ವಾಸ್ತವವಾಗಿಯೂ ಮಾಡಿಸುವುದಕ್ಕೆ ಮುಂದಾಗಬೇಕಿದೆ.
ಇದನ್ನೂ ಓದಿ: Tv9 Digital Live | ಪೆಟ್ರೋಲ್, ಡೀಸೆಲ್ ಬೆಲೆಗಳು ಏಕೆ ಒಂದೇ ಸಮನೆ ಏರುತ್ತಿವೆ?