ಲಂಚಕ್ಕೆ ಕೈಯೊಡ್ಡಿದ FDA ಎಸಿಬಿ ಬಲೆಗೆ ಬಿದ್ದ

ಲಂಚಕ್ಕೆ ಕೈಯೊಡ್ಡಿದ FDA ಎಸಿಬಿ ಬಲೆಗೆ ಬಿದ್ದ

ಹಾವೇರಿ: ಪರಿಶಿಷ್ಟ ಜಾತಿಯವರಿಗೆ ಸರಕಾರದಿಂದ ನೀಡುವ ಜಮೀನು ಮಂಜೂರಾತಿ ಮಾಡಲು ಫಲಾನುಭವಿಯಿಂದ ಪ್ರಥಮ ದರ್ಜೆ ಸಹಾಯಕ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ಬೀಸಿದ ಬಲೆಗೆ ಬಿದ್ದಿದ್ದಾನೆ. ಹಾವೇರಿಯ ಜಿಲ್ಲಾಡಳಿತ ಭವನದಲ್ಲಿರುವ ಅಂಬೇಡ್ಕರ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಈ ಘಟನೆ ನಡೆದಿದೆ.

ಎಪ್ಪತ್ತೈದು ಸಾವಿರ ರುಪಾಯಿ ಲಂಚಕ್ಕೆ ಬೇಡಿಕೆ..
ತಿಪ್ಪೇಸ್ವಾಮಿ ಎಂಬುವರೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಪ್ರಥಮ ದರ್ಜೆ ಸಹಾಯಕ ಎಂದು ಗುರುತಿಸಲಾಗಿದೆ. ಅಂಬೇಡ್ಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವಸಂತಕುಮಾರ, ಫೀಲ್ಡ್ ಆಫೀಸರ ದಾಮೋದರ ಹಾಗೂ ಕಚೇರಿಯ ಮತ್ತೋರ್ವ ಪ್ರಥಮ ದರ್ಜೆ ಸಹಾಯಕ ರಘು ಊರ್ಫ್ ರಾಘವೇಂದ್ರ ಸೇರಿಕೊಂಡು 75 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಪದ್ಮಾವತಿಪುರದ‌ ಸಿದ್ದಪ್ಪ ಲಮಾಣಿ ಎಂಬ ಫಲಾನುಭವಿಗೆ ನಿಗಮದ‌ ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ನಾಲ್ವರು ಸೇರಿಕೊಂಡು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ 25 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಪ್ರಥಮ ದರ್ಜೆ ಸಹಾಯಕ ತಿಪ್ಪೇಸ್ವಾಮಿ ಮಾತ್ರ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳ ಕೈಗೆ ತಗ್ಲಾಕ್ಕೊಂಡಿದ್ದಾನೆ. ಉಳಿದ ಮೂವರು ಎಸಿಬಿ ದಾಳಿಯ ವೇಳೆ ಕಚೇರಿಯಲ್ಲಿ ಇರಲಿಲ್ಲ. ಬಂಧಿತ ಓರ್ವ ಎಫ್ ಡಿಎ ಸೇರಿ ನಾಲ್ವರ ವಿರುದ್ಧ ಹಾವೇರಿ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸಿಬಿ ಡಿವೈಎಸ್ಪಿ ಸೋಮಲಿಂಗ ಕುಂಬಾರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಎಸಿಬಿ ಸಿಪಿಐ ಶ್ರೀಶೈಲ ಚೌಗಲಾ ಹಾಗೂ ಎಸಿಬಿ ಪೊಲೀಸ್ ಠಾಣೆಯ ಸಿಬ್ಬಂದಿ ಭಾಗವಹಿಸಿದ್ದರು.
-ಪ್ರಭುಗೌಡ.ಎನ್.ಪಾಟೀಲ

Click on your DTH Provider to Add TV9 Kannada