ಆ್ಯಸಿಡ್ ದಾಳಿಗೊಳಗಾದ ಯುವತಿಯ ಆರೋಗ್ಯ ಸ್ಥಿರವಾಗಿದೆ, ಅದರೆ ಗುಣಮುಖಳಾಗಲು ಸಮಯ ಹಿಡಿಯಲಿದೆ: ಡಾಕ್ಟರ್

ಆ್ಯಸಿಡ್ ದಾಳಿಗೊಳಗಾದ ಯುವತಿಯ ಆರೋಗ್ಯ ಸ್ಥಿರವಾಗಿದೆ, ಅದರೆ ಗುಣಮುಖಳಾಗಲು ಸಮಯ ಹಿಡಿಯಲಿದೆ: ಡಾಕ್ಟರ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 28, 2022 | 11:47 PM

ತಮ್ಮ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಯುವತಿಯನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾವು ನೀಡಿದ ಚಿಕಿತ್ಸೆಯನ್ನೇ ಅಲ್ಲಿ ಮುಂದುವರಿಸಲಾಗಿದೆ ಎಂದು ಡಾ ಕಾರ್ತೀಕ್ ಹೇಳಿದರು.

ಬೆಂಗಳೂರು: ಆ್ಯಸಿಡ್ ದಾಳಿಯ (Acid Attack) ವಿಕೃತಿ ಬೆಂಗಳೂರಲ್ಲಿ ಮತ್ತೊಮ್ಮೆ ತಲೆಯೆತ್ತಿದೆ. ಚಿನ್ನ ಅಡವಿಟ್ಟುಕೊಂಡು ಸಾಲ ನೀಡುವ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ 24 ವರ್ಷದ ತರುಣಿಯ ಮೇಲೆ ಈ ಮೊದಲು ಆಕೆ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಜೊತೆ ಕೆಲಸಗಾರನಾಗಿದ್ದ 27 ವರ್ಷ ವಯಸ್ಸಿನ ನಾಗೇಶ (Nagesh) ಹೆಸರಿನ ಭಗ್ನಪ್ರೇಮಿ (jilted lover) ತನ್ನ ಪ್ರೀತಿ ನಿರಾಕರಿಸಿದ್ದಕ್ಕೆ ಆ್ಯಸಿಡ್ ದಾಳಿ ನಡೆಸಿ ಪಾಶವೀತನ ಮೆರೆದಿದ್ದಾನೆ. ಘಟನೆ ನಡೆದ ಸುಂಕದ ಕಟ್ಟೆಯ ಆಸ್ಪತ್ರೆಯೊಂದಕ್ಕೆ ಯುವತಿಯನ್ನು ಕೂಡಲೇ ಶಿಫ್ಟ್ ಮಾಡಲಾಗಿದೆ. ಆಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಅಲ್ಲಿನ ವೈದ್ಯ ಡಾ ಕಾರ್ತೀಕ್ (Dr Karthik) ಅವರ ಪ್ರಕಾರ ಅಡ್ಮಿಟ್ ಮಾಡಿದಾಗ ಸ್ಥಿತಿ ಗಂಭೀರವಾಗಿತ್ತು, ತೀವ್ರ ಸ್ವರೂಪದ ಅಘಾತಕ್ಕೊಳಗಾಗಿದ್ದ ಆಕೆಯ ಬ್ಲಡ್ ಪ್ರೆಶರ್ ರೀಡಿಂಗ್ ಸಿಗದಷ್ಟು ದೇಹಸ್ಥಿತಿ ಅಸ್ಥಿರವಾಗಿತ್ತು. ಆಕೆಯ ದೇಹದ ಬೇರೆ ಬೇರೆ ಭಾಗಗಳ ಮೇಲೆ ಅಮ್ಲ ಎರಚಲಾಗಿದೆ. ಒಟ್ಟಾರೆ ಶೇಕಡಾ 50 ರಷ್ಟು ದೇಹ ಸುಟ್ಟಿದೆ, ಇದನ್ನು ವೈದ್ಯಕೀಯ ಭಾಷೆಯಲ್ಲಿ ಸೆಕೆಂಡ್ ಡಿಗ್ರಿ ಬರ್ನ್ಸ್ ಎನ್ನುತ್ತಾರೆ ಎಂದು ವೈದ್ಯರು ಹೇಳಿದರು.

ಪ್ರಾಥಮಿಕ ಚಿಕಿತ್ಸೆ ನೀಡಲಾರಂಭಿಸಿದ ಬಳಿಕ ಆಕೆಯ ದೇಹಸ್ಥಿತಿಯಲ್ಲಿ ಸ್ಥಿರತೆ ಕಂಡಿತು ಎಂದು ಹೇಳಿದ ವೈದ್ಯರು 2-3 ದಿನಗಳವರೆಗೆ ಸ್ಥಿತಿ ನಾಜೂಕಾಗಿರುತ್ತದೆ ಎಂದು ವೈದ್ಯರು. ತಮ್ಮ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಯುವತಿಯನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾವು ನೀಡಿದ ಚಿಕಿತ್ಸೆಯನ್ನೇ ಅಲ್ಲಿ ಮುಂದುವರಿಸಲಾಗಿದೆ ಎಂದು ಡಾ ಕಾರ್ತೀಕ್ ಹೇಳಿದರು.

ಆ್ಯಸಿಡ್ ದಾಳಿಗೊಳಗಾದಾಗ ದೇಹದ ಪ್ರಮುಖ ಅಂಗಗಳಾಗಿರುವ ಹೃದಯ, ಮೂತ್ರಪಿಂಡ ಮೊದಲಾದವುಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಯುವತಿ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಮಯ ಹಿಡಿಯುತ್ತದೆ, ಬಹಳ ದಿನಗಳವರೆಗೆ ಆಕೆ ಹೈ ಌಂಟಿಬ್ಯಯಾಟಿಕ್ಸ್ ಒಳಗೊಂಡ ಔಷಧಿ ತೆಗೆದುಕೊಳ್ಳಬೇಕು, ಅದರಿಂದ ಅಡ್ಡ ಪರಿಣಾಮಗಳು ತಲೆದೋರುವ ಸ್ಥಿತಿಯೂ ಇರುತ್ತದೆ ಎಂದು ಡಾ ಕಾರ್ತೀಕ್ ಹೇಳಿದರು.

ನಾಗೇಶ ಯಾವ ಆ್ಯಸಿಡ್ ಯುವತಿಯ ಮೇಲೆ ಎರಚಿದ್ದಾನೆ ಅನ್ನೋದು ಗೊತ್ತಾಗಿಲ್ಲ ಎಂದು ವೈದ್ಯರು ಹೇಳಿದರು.

ಇದನ್ನೂ ಓದಿ:  ಪ್ರೀತಿಸಲು ನಿರಾಕರಿಸಿದ್ದಕ್ಕೆ ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ! ಆರೋಪಿ ಪರಾರಿ